ಭಾನುವಾರ, ನವೆಂಬರ್ 29, 2020
24 °C
ಒಂದು ಎಕರೆ ಪ್ರದೇಶ ಮೀಸಲು l ಅಂತಿಮ ಹಂತಕ್ಕೆ ತಲುಪಿದೆ ‘ಗಾಂಧಿ ಭವನ’ ಕಟ್ಟಡ

ದಾವಣಗೆರೆ: ಗಾಂಧಿ ತತ್ವಾದರ್ಶ ಪ್ರಸಾರಕ್ಕೆ ಸಿದ್ಧಗೊಳ್ಳುತ್ತಿದೆ ಭವನ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ರಾಷ್ಟ್ರಪಿತ ಗಾಂಧೀಜಿಯ ಹೋರಾಟಗಳನ್ನು ನೆನಪಿಸಲು, ಅವರ ತತ್ವಾದರ್ಶಗಳನ್ನು ಯುವ ಪೀಳಿಗೆಗೆ ತಲುಪಿಸಲು ದಾವಣಗೆರೆಯಲ್ಲಿ ಸಿದ್ಧವಾಗುತ್ತಿದೆ ‘ಗಾಂಧಿ ಭವನ’. ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆಯ ಹಿಂಭಾಗದಲ್ಲಿರುವ ರಾಮನಗರದಲ್ಲಿ ₹ 3 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಭವನ ಅಂತಿಮ ಹಂತಕ್ಕೆ ತಲುಪಿದೆ.

ಆವರಗೆರೆ ಗ್ರಾಮದ ಸರ್ವೆ ನಂಬರ್‌ 213ರಲ್ಲಿ (ರಾಮನಗರ) ಒಂದು ಎಕರೆ ಪ್ರದೇಶವನ್ನು ಸರ್ಕಾರ ಇದಕ್ಕಾಗಿ ಮೀಸಲಿಟ್ಟಿದೆ. ಅದರಲ್ಲಿ 100X100 ಅಡಿ ವಿಸ್ತೀರ್ಣದಲ್ಲಿ ಕರಾವಳಿ ಶೈಲಿಯಲ್ಲಿ ಗಾಂಧಿಭವನ ತಲೆ ಎತ್ತಿದೆ. ಕರಾವಳಿಯ ಕೆಂಪುಕಲ್ಲು (ಮುರಕಲ್ಲು), ಹೆಂಚುಗಳನ್ನು ಬಳಸಿ ಆಕರ್ಷಕವಾಗಿ ನಿರ್ಮಿಸಲಾಗಿದೆ. ಹೊರಾಂಗಣದಲ್ಲಿ ಚರಕ ಜನರನ್ನು ಸ್ವಾಗತಿಸಿದರೆ, ಒಳಗೆ ಕಾಲಿಡುತ್ತಿದ್ದಂತೆ ಗಾಂಧಿ ಪ್ರತಿಮೆ ಎದುರುಗೊಳ್ಳುತ್ತಿದೆ. ಒಳಗೆ ಗ್ರಂಥಾಲಯ, 100 ಜನ ಕುಳಿತುಕೊಳ್ಳಬಲ್ಲ ಸಭಾಂಗಣ. ಶಾಶ್ವತ ವಸ್ತು ಪ್ರದರ್ಶನ ಕೊಠಡಿ. ಆಡಳಿತ ಕಚೇರಿ ಹೀಗೆ ವಿವಿಧ ಕೊಠಡಿಗಳು ಇವೆ.

ಸರ್ಕಾರದ ಮಾರ್ಗಸೂಚಿಯಂತೆ ಕಟ್ಟಡದಿಂದ ಹೊರಗೆ ಪ್ರತ್ಯೇಕವಾಗಿ ಶೌಚಾಲಯ ನಿರ್ಮಾಣಗೊಂಡಿದೆ. ಮಹಿಳೆಯರಿಗೆ, ಪುರುಷರಿಗೆ ಮತ್ತು ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ.


ರಾಮನಗರದಲ್ಲಿ ನಿರ್ಮಾಣವಾಗುತ್ತಿರುವ ಗಾಂಧಿ ಭವನ (ಎಡಚಿತ್ರ). ದಾವಣಗೆರೆಯ ಎಸ್.ಎಸ್. ಹೈಟೆಕ್ ಆಸ್ಪತ್ರೆ ಬಳಿಯ ರಾಮನಗರ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಗಾಂಧಿ ಭವನದ ದೃಶ್ಯ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
 

ಪ್ರತಿ ಜಿಲ್ಲೆಯಲ್ಲಿ ಗಾಂಧಿಭವನ ಸ್ಥಾಪಿಸಲು 2016-17ನೇ ಸಾಲಿನ ಬಜೆಟ್‌ನಲ್ಲಿ ಆಗಿನ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಡಿ ಇದು ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿತ್ತು. ಗಾಂಧಿಭವನ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿ ಮತ್ತು ಆಯಾ ಜಿಲ್ಲೆಗಳ ವಾರ್ತಾಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿ ಇರುತ್ತಾರೆ.

ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಹಿತ ಜಿಲ್ಲೆಯ ಪ್ರಮುಖ ಇಲಾಖೆಗಳ ಅಧಿಕಾರಿಗಳು ಕಾರ್ಯ ಅನುಷ್ಠಾನ ಸಮಿತಿಯಲ್ಲಿರಬೇಕು.  ಗಾಂಧಿವಾದದಲ್ಲಿ ಮತ್ತು ಗಾಂಧೀಜಿ ಪ್ರಣೀತ ಕಾರ್ಯಚಟುವಟಿಕೆಯಲ್ಲಿ ನಂಬಿಕೆಯುಳ್ಳ ಹಾಗೂ ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿರುವ ಏಳು ಮಂದಿಯನ್ನು ಒಳಗೊಂಡ ಗೌರವ ಸಲಹಾ ಸಮಿತಿಯನ್ನು ರಚಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಗಾಂಧಿ ಜಯಂತಿ ಮತ್ತು ಗಾಂಧಿ ಪುಣ್ಯಸ್ಮರಣೆಗೆ ಸೀಮಿತ ವಾಗದೇ ವರ್ಷ ಪೂರ್ತಿ ಕಾರ್ಯಕ್ರಮಗಳಾಗಬೇಕು ಎಂಬ ಕಾರಣಕ್ಕಾಗಿ ಭವನ ನಿರ್ಮಾಣಗೊಳ್ಳುತ್ತಿದೆ. ಗಾಂಧೀಜಿಯ ಬಗ್ಗೆ ಮುಂದಿನ ಪೀಳಿಗೆ ತಿಳಿಯುವುದು ಅವಶ್ಯಕ. ಅದಕ್ಕೊಂದು ಫೋರಂ ಬೇಕು. ಅದು ಈ ಗಾಂಧಿಭವನದ ಮೂಲಕ ನೆರವೇರಲಿದೆ ಎನ್ನುತ್ತಾರೆ ಅನುಷ್ಠಾನ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ. ಗಾಂಧಿಭವನ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಪಟ್ಟ ಸಚಿವರು, ಮುಖ್ಯಮಂತ್ರಿ, ಸ್ಥಳೀಯ ಜನಪ್ರತಿನಿಧಿಗಳನ್ನು ಕರೆಸಿ ಉದ್ಘಾಟನೆ ಕಾರ್ಯ ನೆರವೇರಿಸಬೇಕು ಎಂಬ ಸಲಹೆಗಳಿವೆ. ಚುನಾವಣಾ ನೀತಿ ಸಂಹಿತೆ ಮುಗಿದ ಕೂಡಲೇ ಉದ್ಘಾಟನೆಗೆ ದಿನ ನಿಗದಿಗೊಳಿಸಲು ಸಭೆ ನಡೆಸಲಾಗುವುದು ಎಂದು ತಿಳಿಸಿದರು.


ರಾಮನಗರದಲ್ಲಿ ನಿರ್ಮಾಣವಾಗುತ್ತಿರುವ ಗಾಂಧಿ ಭವನ
–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

‘ನಿರ್ಮಿತಿ ಕೇಂದ್ರದಿಂದ ಕಾಮಗಾರಿ ನಡೆಸುತ್ತಿದೆ. ಈ ಕಟ್ಟಡದ ಹಿಂಭಾಗದಲ್ಲಿ ಆಕರ್ಷಕ ಪಾರ್ಕ್‌ ನಿರ್ಮಾಣಗೊಳ್ಳಲಿದೆ. ಅಂಗವಿಕಲರಿಗೆ ರ‍್ಯಾಂಪ್‌ ವ್ಯವಸ್ಥೆ ಇರಲಿದೆ’ ಎಂದು ಗಾಂಧಿ ಭವನದ ಸದಸ್ಯ ಕಾರ್ಯದರ್ಶಿ ಆಗಿರುವ ವಾರ್ತಾಧಿಕಾರಿ ಡಿ. ಅಶೋಕ್‌ ಕುಮಾರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

********

ಮಹಾತ್ಮ ಗಾಂಧಿಜಿ,ಯವರ ಜೀವನ, ಸಂದೇಶ, ತತ್ವ, ಆದರ್ಶಗಳನ್ನು ತಿಳಿಸಿಕೊಡಲು ಒಂದು ವ್ಯವಸ್ಥೆ ಬೇಕು. ಆ ಕೆಲಸ ಗಾಂಧಿಭವನ ಮೂಲಕ ಆಗಲಿದೆ.
-ಮಹಾಂತೇಶ ಬೀಳಗಿ
ಗಾಂಧಿಭವನ ಅನುಷ್ಠಾನ ಸಮಿತಿ ಅಧ್ಯಕ್ಷ 

ಜನರು ಗಾಂಧೀಜಿಯನ್ನು ತಿಳಿದುಕೊಳ್ಳುವ, ಜತೆಗೆ ನೆಮ್ಮದಿಯಿಂದ ಒಂದಷ್ಟು ಹೊತ್ತು ಕಳೆಯುವ ಪ್ರವಾಸಿ ತಾಣವಾಗಿಯೂ ಗಾಂಧಿಭವನ ಇರಲಿದೆ.
-ಡಿ. ಅಶೋಕ್ ಕುಮಾರ್‌
ಗಾಂಧಿ ಭವನದ ಸದಸ್ಯ ಕಾರ್ಯದರ್ಶಿ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.