ಮಂಗಳವಾರ, ಅಕ್ಟೋಬರ್ 20, 2020
22 °C
ಆಗ್ನೇಯ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆರ್. ಚೌಡಾರೆಡ್ಡಿ ತೂಪಲ್ಲಿ

ದಾವಣಗೆರೆ: ಪರಿಷತ್‌ ಚುನಾವಣೆ ಗೆದ್ದರೆ ಜೆಡಿಎಸ್‌ಗೆ ಶಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಅಕ್ಟೋಬರ್ 28ರಂದು ವಿಧಾನ ಪರಿಷತ್‌ಗೆ ಚುನಾವಣೆ ನಡೆಯಲಿದ್ದು, ಈ ಚುನಾವಣೆಯನ್ನು ಯಾರೂ ಲಘುವಾಗಿ ಪರಿಗಣಿಸಬಾರದು ಎಂದು ಆಗ್ನೇಯ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆರ್. ಚೌಡಾರೆಡ್ಡಿ ತೂಪಲ್ಲಿ ಹೇಳಿದರು.

ನಗರದ ಹಿರೇಮಠದಲ್ಲಿ ಶುಕ್ರವಾರ ನಡೆದ ಜೆಡಿಎಸ್ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ವಿಧಾನ ಪರಿಷತ್‌ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಿದರೆ, ರಾಜ್ಯದಲ್ಲಿ ಪಕ್ಷ ಮುಂಚೂಣಿಗೆ ಬರಲಿದೆ. ಈಗಾಗಲೇ 1.03 ಲಕ್ಷ ಮತದಾರರ ಪಟ್ಟಿ ಪ್ರಕಟಿಸಲಾಗಿದೆ. 4-5 ದಿನಗಳಲ್ಲಿ ಅಂತಿಮ ಪಟ್ಟಿ ಪ್ರಕಟವಾಗಲಿದೆ. ಇನ್ನೂ ಐದು ಸಾವಿರ ಮತದಾರರು ಸೇರ್ಪಡೆಯಾಗಬಹುದು ಎಂದು ಅವರು ತಿಳಿಸಿದರು.

‘ದಾವಣಗೆರೆಯಲ್ಲಿ ಈಗಾಗಲೇ 19,759 ಮತದಾರರು ನೋಂದಾಯಿಸಿಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ ಹೆಚ್ಚು ಮತದಾರರನ್ನು ತಲುಪುವ ಕೆಲಸ ಮಾಡಬೇಕಿದೆ. ಜಿಲ್ಲೆಯಲ್ಲಿ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಅವರ ಮಾರ್ಗದರ್ಶನದಲ್ಲಿ ನಾನು ಕಾರ್ಯನಿರ್ವಹಿಸುತ್ತಾ ಬಂದಿದ್ದು, ಈ ಬಾರಿಯೂ ಅವರ ಮಾರ್ಗದರ್ಶನದಂತೆ ಮುಂದುವರೆಯುತ್ತೇನೆ‘ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ‘ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದ ಇತಿಹಾಸವಿಲ್ಲ. ಈ ಬಾರಿಯೂ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಸ್ಪರ್ಧೆ ಇದ್ದು, ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಇದೆ’ ಎಂದರು.

ಜೆಡಿಎಸ್ ಮುಖಂಡ ಅಮಾನುಲ್ಲಾ ಖಾನ್ ‍ಪ್ರಾಸ್ತಾವಿಕವಾಗಿ ಮಾತನಾಡಿ, ‘ಬುದ್ಧಿವಂತ ಸಮುದಾಯ ಹಿಂದಿನಿಂದಲೂ ಜೆಡಿಎಸ್ ಬೆಂಬಲಿಸುತ್ತಾ ಬಂದಿದೆ. ಯುವ ಮತದಾರರನ್ನು ಜೆಡಿಎಸ್‌ನತ್ತ ಸೆಳೆಯಲು ಅವರಿಗೆ ಮನವರಿಕೆ ಮಾಡಿಕೊಡಬೇಕು‘ ಎಂದು ಸಲಹೆ ನೀಡಿದರು.

ಜೆಡಿಎಸ್‌ ಎಸ್‌ಸಿ ಮೋರ್ಚಾ ಅಧ್ಯಕ್ಷ ಹೊದಿಗೆರೆ ರಮೇಶ್‌, ಜೆಡಿಎಸ್ ಕಾನೂನು ವಿಭಾಗದ ಅಧ್ಯಕ್ಷ ಯೋಗೇಶ್, ಜೆಡಿಎಸ್ ಕಾರ್ಯಾಧ್ಯಕ್ಷ ಗಣೇಶ್ ದಾಸಕರಿಯಪ್ಪ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಶೀಲಾ ಕುಮಾರ್, ಮುಖಂಡರಾದ ಕಲ್ಲೇರುದ್ರೇಶ್, ಸಿ. ಅಂಜಿನಪ್ಪ ಕಡತಿ, ಎ.ಕೆ. ನಾಗಪ್ಪ, ದಾದಾಪೀರ್, ಯೋಗೀಶ್, ಧನಂಜಯ, ಬಂಡೇರ ತಿಪ್ಪಣ್ಣ, ಎಸ್. ಓಂಕಾರಪ್ಪ, ಸುನಂದಮ್ಮ, ಸಂಗನಗೌಡ್ರು ಸಭೆಯಲ್ಲಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು