ಶನಿವಾರ, ಮಾರ್ಚ್ 28, 2020
19 °C
ಲೇಖಕಿ ಉಪ್ಪುಂದ ವರಮಹಾಲಕ್ಷ್ಮಿ ಹೊಳ್ಳ

ಸಮಾಜಸೇವೆ ಇದ್ದಾಗಲೇ ಮಹಿಳೆಗೆ ಬೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸೇವೆ ಮಹಿಳೆಗೆ ಪರ್ಯಾಯ ಪದವಾಗಿದೆ. ಸಮಾಜಸೇವೆ ಇದ್ದಾಗಲೇ ಮಹಿಳೆಯರಿಗೆ ಬೆಲೆ ಬರಲು ಸಾಧ್ಯ ಎಂದು ಲೇಖಕಿ ಉಪ್ಪುಂದ ವರಮಹಾಲಕ್ಷ್ಮಿ ಹೊಳ್ಳ ಅಭಿಪ್ರಾಯಪಟ್ಟರು.

ಇಲ್ಲಿನ ಶಂಕರ ಸಮುದಾಯ ಭವನದಲ್ಲಿ ಭಾನುವಾರ ನಡೆದ ಬ್ರಾಹ್ಮಣ ಸಮಾಜ ಸೇವಾ ಸಂಘದ ಮಹಿಳಾ ವಿಭಾಗದ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

‘ಮಹಿಳೆಗೆ ಸಹನೆ, ತಾಳ್ಮೆ ಹುಟ್ಟುತ್ತಲೇ ಬರುತ್ತವೆ. ಸಮಾಜಸೇವೆ ಎಂದ ಕೂಡಲೇ ಎಲ್ಲವನ್ನೂ ಬಿಟ್ಟುಹೋಗಬೇಕು ಎಂದೇನಿಲ್ಲ, ಮನೆ ಕೆಲಸ ಮಾಡಿಕೊಂಡೇ ಸಮಾಜ ಸೇವೆ ಮಾಡಬಹುದು’ ಎಂದು ಸಲಹೆ ನೀಡಿದರು.

‘ನೀರು ಕೇಳಿ ಬಂದವರಿಗೆ ಅದನ್ನು ಕೊಡದೇ ಇದ್ದರೂ ಪರ್ವಾಗಿಲ್ಲ. ಅದು ಇರುವ ಜಾಗವನ್ನು ತೋರಿಸಿದರೆ ಸಾಕು. ಅದು ಕೂಡ ಸಮಾಜಸೇವೆಯೇ. ಇಂದಿನ ದಿನಗಳಲ್ಲಿ ಸಮಾಜ ಸೇವೆಗೆ ಹಲವು ಅವಕಾಶಗಳಿವೆ. ಸುಧಾಮೂರ್ತಿ ಅವರು ಶ್ರೀಮಂತರಾದರೂ ಅವರ ಸಮಾಜಸೇವೆ ಶ್ಲಾಘನೀಯ. ಮಹಿಳೆಯರಿಗೆ ಸಾಕಷ್ಟು ಶಾಚಾಲಯ ನಿರ್ಮಿಸಿದ್ದಾರೆ. ಪ್ರವಾಹಪೀಡಿತರಿಗೆ ನೆರವಾಗುವ ಮೂಲಕ ಅನೇಕ ಜನೋಪಯೋಗಿ ಕಾರ್ಯ ಮಾಡಿದ್ದಾರೆ’ ಎಂದು ಶ್ಲಾಘಿಸಿದರು.

‘ಮಹಿಳೆಯರು ಮಧ್ಯ ವಯಸ್ಸಿಗೆ ಬಂದ ಮೇಲೆ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಹಣ ವ್ಯಯಿಸಿ ಕೈ ಎಲ್ಲಾ ಖಾಲಿಯಾಗಿರುತ್ತಾರೆ. ಆಗ ಮನಸ್ಸು ಖಾಲಿ ಇರುತ್ತದೆ. ಆಗ ಟಿವಿ ನೋಡುತ್ತಾ ಕುಳಿತುಕೊಳ್ಳುವ ಬದಲು ಸಮಾಜಸೇವೆಯಲ್ಲಿ ತೊಡಗಿಸಿಕೊಂಡರೆ ಅನುಕೂಲವಾಗುತ್ತದೆ. ದೊಡ್ಡ ಮಟ್ಟದಲ್ಲಿ ಮಾಡಬೇಕು ಎಂದೇನಿಲ್ಲ. ಸಣ್ಣ ಸಣ್ಣ ಮಟ್ಟದಲ್ಲಿ ಸಮಾಜ ಸೇವೆ ಮಾಡಬಹುದು’ ಎಂದು ಹೇಳಿದರು.

‘ಭಾಷೆ ಹಾಗೂ ಆಹಾರ ಸಂಸ್ಕೃತಿ ಬದಲಾದರೂ ಸಂಸ್ಕೃತಿ ಉಳಿಯುತ್ತದೆ. ಇದಕ್ಕೆ ದಾವಣಗೆರೆಯೇ ಸಾಕ್ಷಿ. ಇಲ್ಲಿನ ಆತ್ಮ ಜೀವಂತವಾಗಿದೆ. ಮಿರ್ಚಿ ಮಂಡಕ್ಕಿ ಎಲ್ಲಾ ಕಡೆಯಲ್ಲಿಯೂ ಸಿಗುತ್ತದೆ. ಹಬ್ಬ ಆಚರಣೆಗಳು ದಾವಣಗೆರೆಯ ಸೊಗಡನ್ನು ಉಳಿಸಿಕೊಂಡಿವೆ’ ಎಂದು ಹೇಳಿದರು.

ಸಂಘದ ಅಧ್ಯಕ್ಷೆ ನಳಿನಿ ಅಚ್ಯುತ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಶ್ರೀಮತಿ ಚಂದ್ರಶೇಖರ ಅಡಿಗ ಹಾಜರಿದ್ದರು. ಕಾಮಾಕ್ಷಿ ನಿರೂಪಿಸಿದರು. ವಸುಧಾ ಕುಲಕರ್ಣಿ ವಂದಿಸಿದರು.

ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಹೂವು ಕಟ್ಟುವ ಸ್ಪರ್ಧೆ: ನಿರ್ಮಲಾ ದೀಕ್ಷಿತ್ (ಪ್ರಥಮ), ವಿದ್ಯಾ ವಿ.ಕುಮಾರ್ (ದ್ವಿತೀಯ) ಪದ್ಮಾ ತಂತ್ರಿ (ತೃತೀಯ) ಸಾವಿತ್ರಿ ಸುಬ್ರಹ್ಮಣ್ಯ, ಡಾ.ಛಾಯಾ (ಸಮಾಧಾನಕರ ಬಹುಮಾನ)

ಸ್ಮರಣಶಕ್ತಿ ಸ್ಪರ್ಧೆ: ಲಲಿತಾ ವೆಂಕಟೇಶ್ (ಪ್ರಥಮ), ಭವಾನಿ ಗುರುಪ್ರಸಾದ್‌ (ದ್ವಿತೀಯ) ಸ್ಮಿತಾರಾವ್ (ತೃತೀಯ) ವಿದ್ಯಾ ವಿ.ಕುಮಾರ್, ಸುಮಿತ್ರಾ ಅನಂತರಾಮ್ (ಸಮಾಧಾನಕರ ಬಹುಮಾನ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು