ಶುಕ್ರವಾರ, ಮೇ 29, 2020
27 °C
ಎಲ್ಲಾ ರೈತರು ಗುಣಮಟ್ಟದ ಬೆಳೆಯನ್ನೇ ಬೆಳೆಯುವುದಿಲ್ಲ: ದಲ್ಲಾಳಿಗಳ ಮಾತು

ದಾವಣಗೆರೆ | ಮತ್ತೆ ಎಪಿಎಂಸಿಗೇ ಉತ್ಪನ್ನ ತರುವರು

ಡಿ.ಕೆ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕರ್ನಾಟಕ ಕೃಷಿ ಉತ್ಪ‍ನ್ನಗಳ ಮಾರಾಟ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಯ ತಿದ್ದುಪಡಿಗೆ ನಗರದ ದಲ್ಲಾಳಿಗಳು ಹಾಗೂ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

‘ಸುಗ್ರೀವಾಜ್ಞೆ ತಂದರೂ ಅವಧಿ ಮೂರರಿಂದ ನಾಲ್ಕು ವರ್ಷ ಅಷ್ಟೆ. ಆ ನಂತರ ರೈತರು ಎಪಿಎಂಸಿಗೆ ಬರುತ್ತಾರೆ. ರೈತರು ಮತ್ತು ನಮ್ಮ (ವರ್ತಕರು) ಬಾಂಧವ್ಯ ತುಂಬಾ ಹಿಂದಿನದು. ರೈತರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಅವರಿಗೆ ಸಲಹೆ ನೀಡುತ್ತೇವೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಾಟ ಮಾಡಲು ಹೋಗುವುದಿಲ್ಲ’ ಎಂಬುದು ವ್ಯಾಪಾರಿಗಳ ನಂಬಿಕೆ.

‘383 ದಲ್ಲಾಳಿಗಳು, 1,600 ವರ್ತಕರು ಹಾಗೂ 380ಕ್ಕೂ ಹೆಚ್ಚು ಹಮಾಲರು ಹಾಗೂ ನೌಕರರು ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಅವಲಂಬಿಸಿದ್ದಾರೆ. ದೈತ್ಯ ಕಂಪನಿಗಳು ಕಾಲಿಟ್ಟರೆ ಇವರೆಲ್ಲರ ಜೀವನಕ್ಕೆ ಕುತ್ತು ಬರುತ್ತದೆ’ ಎಂಬುದು ಬಹುತೇಕ ವರ್ತಕರ ಅಭಿಪ್ರಾಯ.

‘ರೈತರಿಗೆ ಸ್ಪರ್ಧಾತ್ಮಕ ಬೆಲೆ ಸಿಗಬೇಕು. ತೂಕದಲ್ಲಿ ಮೋಸವಾಗಬಾರದು ಎಂಬ ಉದ್ದೇಶದಿಂದ 50 ವರ್ಷಗಳ ಹಿಂದೆ ಜಾರಿಗೆ ತಂದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಏಕಾಏಕಿ ಬಹುರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕಿದರೆ ನಾವೇನು ಮಾಡುವುದು’ ಎಂಬುದು ಎಪಿಎಂಸಿ ವರ್ತಕರ ಪ್ರಶ್ನೆ.

‘ಎಂಎನ್‌ಸಿಗಳು ಮಾರುಕಟ್ಟೆ ಯಾರ್ಡ್‌ ಬಿಟ್ಟು ಎಲ್ಲಿ ಬೇಕಾದರೂ ಖರೀದಿ ಮಾಡಬಹುದಾಗಿದೆ. ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಖರೀದಿಸುತ್ತವೆ. ದ್ವಿತೀಯ ಮತ್ತು ತೃತೀಯ ದರ್ಜೆಯ ಉತ್ಪನ್ನಗಳನ್ನುನಾವು ಖರೀದಿಸಿ ಯಾರಿಗೆ ಮಾರಾಟ ಮಾಡಬೇಕು’ ಎಂದು ಪ್ರಶ್ನಿಸುತ್ತಾರೆ ದಲ್ಲಾಳಿಗಳ ಸಂಘದ ಮಾಜಿ ಅಧ್ಯಕ್ಷ ಕುಸುಮ್‌ ಶ್ರೇಷ್ಠಿ.

‘ರೈತರಿಗೆ ಲಾಭವಾಗಲಿ ಎನ್ನುವ ಉದ್ದೇಶದಿಂದ ಈ ಕಾಯ್ದೆಗೆ ತಿದ್ದುಪಡಿ ಮಾಡಲು ಸರ್ಕಾರ ಹೊರಟಿದೆ. ಹಳ್ಳಿಗಳಿಗೆ ಹೋಗಿ ರೈತರಿಂದ ಉತ್ಪನ್ನಗಳನ್ನು ನೇರವಾಗಿ ಖರೀದಿಸುವುದರಿಂದ ರೈತರಿಗೆ ಸಾರಿಗೆ ವೆಚ್ಚವೂ ಉಳಿತಾಯವಾಗಲಿದೆ. ಆದರೆ ದಲ್ಲಾಳಿಗಳು, ವರ್ತಕರು ಹಾಗೂ ಹಮಾಲರಿಗೆ ಸಮಸ್ಯೆಯಾಗುತ್ತದೆ’ ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ಜೆ. ಪ್ರಭು. 

ಕಾಯುವುದು ತಪ್ಪುತ್ತದೆ: ‘ಮನೆಗೆ ಬಂದು ಖರೀದಿ ಮಾಡಿದರೆ ಇನ್ನೂ ಒಳ್ಳೆಯದು. ಎಪಿಎಂಸಿಯಲ್ಲಿ ರಾತ್ರಿ ವೇಳೆ ಕಾಯುವುದು ತಪ್ಪುತ್ತದೆ. ಎಪಿಎಂಸಿಗೆ ಭತ್ತ ತಂದರೆ ಹಮಾಲರಿಗೆ 50 ಕೆ.ಜಿ ಹಾಗೂ ದಲ್ಲಾಳಿಗೆ 25 ಕೆ.ಜಿ ಭತ್ತ ಕೊಡಬೇಕು. ಅಲ್ಲದೇ ₹100ಕ್ಕೆ ₹ 2 ಕಮಿಷನ್‌ ನೀಡಬೇಕು. ಮನೆಗೆ ಬಂದು ಖರೀದಿ ಮಾಡಿದರೆ ಒಳ್ಳೆಯದು’ ಎನ್ನುತ್ತಾರೆ ಎಲೆಬೇತೂರು ರೈತ ಸಿದ್ದಲಿಂಗಪ್ಪ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು