ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸನ್ನು ಆವರಿಸುವ ನಾಟಕ ಕಟ್ಟಿಕೊಟ್ಟಿದ್ದ ಕಾರಂತರು

ರಂಗಮಾಂತ್ರಿಕ ಬಿ.ವಿ. ಕಾರಂತರ ಸ್ಮರಣೆ ಮಾಡಿದ ಡಾ. ಎಂ.ಜಿ. ಈಶ್ವರಪ್ಪ
Last Updated 20 ಸೆಪ್ಟೆಂಬರ್ 2022, 2:46 IST
ಅಕ್ಷರ ಗಾತ್ರ

ದಾವಣಗೆರೆ: ಪಾತ್ರಗಳು ಮನಸ್ಸನ್ನು ಆವರಿಸುವ ರೀತಿಯಲ್ಲಿ ನಾಟಕಗಳನ್ನು ಕಟ್ಟಿಕೊಟ್ಟವರು ಬಿ.ವಿ. ಕಾರಂತರು ಎಂದು ರಂಗತಜ್ಞ ಡಾ. ಎಂ.ಜಿ. ಈಶ್ವರಪ್ಪ ಹೇಳಿದರು.

ಪ್ರತಿಮಾ ಸಭಾ ವತಿಯಿಂದ ಸಂಕಲನ ಚಿತ್ರಕುಟೀರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ರಂಗಮಾಂತ್ರಿಕ ಬಿ.ವಿ. ಕಾರಂತರ ಸ್ಮರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರಂತರು ಬದುಕು ಮತ್ತು ಆಲೋಚನೆಯನ್ನು ರಂಗಭೂಮಿಗೆ ಮೀಸಲಿಟ್ಟಿದ್ದರು. ರಂಗಭೂಮಿ ಬಿಟ್ಟು ಬೇರೆ ಮಾತೇ ಬರುತ್ತಿರಲಿಲ್ಲ. ವಿರಾಮದ ಕಾಲದಲ್ಲೂ ಸಂಗೀತ ಸಂಯೋಜನೆ ಮಾಡುತ್ತಾ ಇರುತ್ತಿದ್ದರು. ಸದಾ ಹೊಸಹೊಸ ನಾಟಕಗಳನ್ನು ಮಾಡಿಸುತ್ತಿದ್ದರು. ಕನ್ನಡ, ಮರಾಠಿ, ಹಿಂದಿ, ಜರ್ಮನ್‌ ಸಹಿತ ವಿವಿಧ ಭಾಷೆಗಳ ನಾಟಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ರಿಹರ್ಸಲ್‌ ಅಂದರೆ ರಂಗಭೂಮಿಯನ್ನು ಕಲಿಸಿಕೊಡುವುದು ಎಂಬುದು ಅವರ ತತ್ವವಾಗಿತ್ತು. ಸ್ವತಃ ಅವರೇ ಹಾಡುತ್ತಿದ್ದರು ಎಂದು ನೆನಪು ಮಾಡಿಕೊಂಡರು.

ದಾವಣಗೆರೆಯಲ್ಲಿ ರಂಗಶಿಬಿರ ನಡೆಸಿದಾಗ ಕಲಾವಿದರ ದೈಹಿಕ ಕ್ಷಮತೆ ಪರೀಕ್ಷಿಸಲು ಕೊಂಡಜ್ಜಿ ಗುಡ್ಡವನ್ನು ಹತ್ತಿಸಿದ್ದರು. ಜತೆಗೆ ಅವರೂ ಹತ್ತಿದ್ದರು. ಥಿಯೇಟರ್‌ ಸಣ್ಣದಿರಬೇಕು. ಕಲಾವಿದರು ಕಾಣುವುದರ ಜತೆಗೆ ಅವರ ಅಭಿನಯವೂ ಸರಿಯಾಗಿ ಕಾಣಬೇಕು. ಮೈಕ್‌ ಇಲ್ಲದೇ ಸಂಭಾಷಣೆ ಪ್ರೇಕ್ಷಕರನ್ನು ತಲುಪಬೇಕು ಎಂಬುದು ಅವರ ಯೋಚನೆಯಾಗಿತ್ತು ಎಂದರು.

ಹವ್ಯಾಸಿ ರಂಗಭೂಮಿಗೆ ಜೀವಕಳೆಯನ್ನು ತಂದುಕೊಟ್ಟವರು ಕಾರಂತರು. ನಾಟಕ ರಚನಾ ಶಿಬಿರ ದಾವಣಗೆರೆಯಲ್ಲಿ ನಡೆಯಲು ಅವರು ಕಾರಣರಾದರು. ಹಾಲಪ್ಪ ಮೇಸ್ಟ್ರು, ಎಂ.ಜಿ. ಈಶ್ವರಪ್ಪ ಅವರ ಮಾರ್ಗದರ್ಶನದಲ್ಲಿ ಪ್ರತಿಮಾ ಸಭಾ ಆರಂಭಗೊಳ್ಳಲು ಅವರೇ ಪ್ರೇರಣೆ. ಆಗ ಪ್ರತಿಮಾಸಭಾದ ಸದಸ್ಯತ್ವ ಪಡೆಯುವುದೇ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು ಎಂದು ರಂಗಕರ್ಮಿ ಬಾ.ಮ. ಬಸವರಾಜಯ್ಯ ಹೇಳಿದರು.

ರಂಗಾಯಣಕ್ಕೆ ಕಲಾವಿದರನ್ನು ಆಯ್ಕೆ ಮಾಡಲು ಇಲ್ಲಿನ ಗುಂಡಿಚೌಟ್ರಿಯಲ್ಲಿ ಶಿಬಿರ ಮಾಡಲಾಗಿತ್ತು. ಈಗಿರುವ ಬಹುತೇಕ ಹೆಸರಾಂತ ಕಲಾವಿದರು ಆ ಶಿಬಿರದಲ್ಲಿ ಭಾಗವಹಿಸಿದವರೇ ಆಗಿದ್ದಾರೆ. ನಟನೆ ಸರಿ ಮಾಡದೇ ಇದ್ದರೆ ಕಪಾಳಕ್ಕೆ ಬಾರಿಸುವಷ್ಟು ಕಾರಂತರು ಮುಂಗೋಪಿಯಾಗಿದ್ದರು. ಮಾತು ಹಾಡಾಗಬೇಕು. ಹಾಡೇ ಮಾತಾಗಬೇಕು ಎಂದು ಹೇಳುತ್ತಿದ್ದ ಅವರು ನಿರ್ದೇಶನದಷ್ಟೇ ಸಂಗೀತಕ್ಕೂ ಮಹತ್ವ ನೀಡುತ್ತಿದ್ದರು ಎಂದು ಪತ್ರಕರ್ತ ಬಿ.ಎನ್‌. ಮಲ್ಲೇಶ್‌ ನೆನಪಿಸಿಕೊಂಡರು.

ಪ್ರೊ. ಎಸ್‌. ಹಾಲಪ್ಪ, ಎಸ್‌. ಚಿದಾನಂದಪ್ಪ, ರವಿಚಂದ್ರ, ಡಾ. ಅನುರಾಧ ಬಕ್ಕಪ್ಪ, ಜಯಪ್ರಕಾಶ ಕೊಂಡಜ್ಜಿ, ಅರುಣ್‌ ಕುಮಾರ್‌ ಆರ್‌.ಟಿ., ಎನ್‌.ಟಿ. ಮಂಜುನಾಥ್‌, ಹೇಮಂತ್‌ ಆರ್‌., ಶಂಕರ್‌ ಜಿ.ಎಚ್‌., ಡಾ. ರುದ್ರೇಶ್‌ ವಿ.ಜಿ., ಶಂಭುಲಿಂಗಪ್ಪ ಕೊಟ್ಟೂರು, ಹನುಮಂತ ಪೂಜಾರ್‌, ಶರಣ ಬಸಪ್ಪ ಪಾಟೀಲ್, ಸಿದ್ಧರಾಜು ಎಸ್‌.ಎಸ್‌.,ಡಾ.ಆನಂದಋಗ್ವೇದಿ,ರಾಘವೇಂದ್ರನಾಯರಿ,ಸತೀಶ್‌ಹೊಳ್ಳಪುರಿ,ಡಿ.ಎನ್‌.ಭಟ್‌, ಪರಮೇಶ್ವರಪ್ಪ ಇದ್ದರು. ರವೀಂದ್ರ ಅರಳಗುಪ್ಪಿ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT