ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸ್ಥಾಪನೆಯಾಗದ ದೇವರಾಜ ಅರಸು ಪ್ರತಿಮೆ

ಫ್ಲೈಓವರ್‌ಗಾಗಿ ನಾಲ್ಕು ವರ್ಷಗಳ ಹಿಂದೆ ತೆರವು * ಒಂದೇ ಸರ್ಕಲ್‌ನಲ್ಲಿ ಎರಡು ಪ್ರತಿಮೆಗೆ ವಿರೋಧ
Last Updated 20 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ದಾವಣಗೆರೆ: ಹಿಂದುಳಿದವರ ಆಶಾಕಿರಣವಾಗಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಪ್ರತಿಮೆಯನ್ನು ಫ್ಲೈಓವರ್‌ ನಿರ್ಮಿಸಲೆಂದು ನಾಲ್ಕು ವರ್ಷಗಳ ಹಿಂದೆ ತೆರವು ಮಾಡಲಾಗಿತ್ತು. ಈ ಪ್ರತಿಮೆಯನ್ನು ಮತ್ತೆ ಸ್ಥಾಪನೆ ಮಾಡಲು ಇನ್ನೂ ಮುಹೂರ್ತ ಕೂಡಿ ಬಂದಿಲ್ಲ.

ಸಂಗೊಳ್ಳಿ ರಾಯಣ್ಣ ಸರ್ಕಲ್‌ನಿಂದ ಆರ್‌ಟಿಒ ಕಚೇರಿ ಕಡೆಗೆ ಫ್ಲೈಓವರ್‌ ರಸ್ತೆ ನಿರ್ಮಿಸುವ ಸಮಯದಲ್ಲಿ ಧೂಡಾ ಕಚೇರಿ ಎದುರು ಇದ್ದ ಪ್ರತಿಮೆಯನ್ನು ತೆರವುಗೊಳಿಸಲಾಗಿತ್ತು. ಫ್ಲೈಓವರ್ ನಿರ್ಮಾಣಗೊಂಡ ಮೇಲೆ ಅಲ್ಲಿ ಪ್ರತಿಮೆ ಇಡಲು ಜಾಗ ಇರಲಿಲ್ಲ. ಹಾಗಾಗಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲೇ ಪ್ರತಿಮೆ ಸ್ಥಾಪನೆಗೆ ಕಟ್ಟೆ ನಿರ್ಮಿಸಲಾಗಿತ್ತು. ಆದರೆ ಕುರುಬ ಸಮಾಜದ ಕೆಲವು ಸಂಘಟನೆಗಳೂ ಸೇರಿದಂತೆ ಹಲವರು ಈ ವೃತ್ತದಲ್ಲಿ ಪ್ರತಿಮೆ ಸ್ಥಾಪನೆ ಮಾಡುವುದನ್ನು ವಿರೋಧಿಸಿದ್ದರು. ಒಂದೇ ಸರ್ಕಲ್‌ನಲ್ಲಿ ಎರಡು ಪ್ರತಿಮೆಗಳು ಇರುವುದು ಗೊಂದಲಕ್ಕೆ ಕಾರಣವಾಗುತ್ತದೆ. ಬೇರೆಡೆ ನಿರ್ಮಿಸಿ ಎಂಬುದು ಅವರ ಮನವಿಯಾಗಿತ್ತು. ಹಾಗಾಗಿ ಅರಸು ಪ್ರತಿಮೆ ಸ್ಥಾಪನೆ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದೆ.

ದೇವರಾಜ ಅರಸು ಅವರ ‍ಪ್ರತಿಮೆ ಸ್ಥಾಪಿಸಲೇಬೇಕು ಎಂದು ಮಾಜಿ ಶಾಸಕ ಕೆ. ಮಲ್ಲಪ್ಪ ಮೂರು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದಾರೆ. ಅವರಿಗೆ ಹಲವರು ಬೆಂಬಲ ಕೂಡ ನೀಡಿದ್ದರು. ಮೊದಲು ಪ್ರತಿಮೆ ಸ್ಥಾಪನೆಯ ಬಗ್ಗೆ ವಿವಾದದ ಬಗ್ಗೆ ಸುಮ್ಮನೆ ಇದ್ದ ಧೂಡಾ ಆಡಳಿತವರ್ಗವು ಪರ ಮತ್ತು ವಿರೋಧಗಳು ಜೋರಾಗತೊಡಗುತ್ತಿದ್ದಂತೆ ಹಲವು ಸುತ್ತಿನ ಮಾತುಕತೆ ನಡೆಸಿದೆ.

‘ಅರಸು ಅವರು ಎಲ್ಲ ವರ್ಗದ ಅಭಿವೃದ್ಧಿಗಾಗಿ ದುಡಿದವರು. ಹಿಂದುಳಿದ ವರ್ಗದವರಿಗೆ ಅವಕಾಶಗಳನ್ನು ತೆರೆದವರು. ಅವರ ಪ್ರತಿಮೆ ಸ್ಥಾಪಿಸುವುದು ಆದ್ಯತೆಯ ಕೆಲಸ ಆಗಬೇಕಿತ್ತು. ಈ ವರ್ಷವೂ ಅರಸು ಜನ್ಮದಿನಾಚರಣೆಗೆ ಪ್ರತಿಮೆ ಸ್ಥಾಪನೆಯಾಗಿಲ್ಲ. ಧೂಡಾ ನಿರ್ಲಕ್ಷ್ಯ ವಹಿಸಬಾರದು. ಕೂಡಲೇ ಸ್ಥಾಪನೆ ಮಾಡಬೇಕು’ ಎಂದು ಮಾಜಿ ಶಾಸಕ ಕೆ. ಮಲ್ಲಪ್ಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಒಂದೂವರೆ ತಿಂಗಳಲ್ಲಿ ಕ್ರಮ: ಧೂಡಾ ಕಚೇರಿ ಎದುರು ಇದ್ದ ಪ್ರತಿಮೆಯನ್ನು ಅಭಿವೃದ್ಧಿ ಕಾರ್ಯಕ್ಕಾಗಿ ತೆರವು ಮಾಡುವುದು ಅನಿವಾರ್ಯವಾಗಿತ್ತು. ಹಾಗಾಗಿ ನಾಲ್ಕು ವರ್ಷದ ಹಿಂದೆ ತೆಗೆದಿದ್ದರು. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸ್ಥಾಪನೆ ಮಾಡಲು ಕಟ್ಟೆ ಕಟ್ಟಲಾಗಿತ್ತು. ಆಗ ವಿವಾದ ಆಗುತ್ತದೆ ಎಂಬುದು ಗೊತ್ತಿರಲಿಲ್ಲ. ಸಂಗೊಳ್ಳಿ ರಾಯಣ್ಣ ವೃತ್ತ ಎಂಬುದು ಅಧಿಕೃತವಾಗಿ ‍ಪಾಲಿಕೆಯಿಂದ ಹೆಸರು ಘೋಷಣೆ ಆಗಿದೆ. ಕುರುಬ ಸಮಾಜ ಸೇರಿ ಹಲವು ಸಂಘ ಸಂಸ್ಥೆಗಳೂ ಅಲ್ಲಿ ಬೇಡ ಎಂದು ಮನವಿ ಸಲ್ಲಿಸಿದ್ದರು. ಹಾಗಾಗಿ ಮೂರ್ತಿ ಸ್ಥಾಪನೆ ಕಾರ್ಯ ಸ್ಥಗಿತಗೊಳಿಸಲಾಗಿತ್ತು’ ಎಂದು ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌ ಮಾಹಿತಿ ನೀಡಿದರು.

‘ನಾನು ಧೂಡಾ ಅಧ್ಯಕ್ಷನಾದ ಮೇಲೆ ಎಲ್ಲರನ್ನು ಕರೆಸಿ ಮಾತುಕತೆ ಮಾಡಲಾಯಿತು. ಸಂಸದರು, ಶಾಸಕರು ಎಲ್ಲರೂ ಸಮಸ್ಯೆ ಬಗೆಹರಿಸಲು ಸಲಹೆ ನೀಡಿದರು. ವೃತ್ತದ ನಾಲ್ಕೂ ಕಡೆಗಳಲ್ಲಿ ದೊಡ್ಡದಾಗಿ ‘ ಸಂಗೊಳ್ಳಿ ರಾಯಣ್ಣ ವೃತ್ತ’ ಎಂದು ಫಲಕ ಹಾಕುವುದು, ಫ್ಲೈಓವರ್‌ಗೆ ಸಂಗೊಳ್ಳಿರಾಯಣ್ಣನ ಹೆಸರು ಇಡುವುದು ಮತ್ತು ಈಗಿರುವ ಅದೇ ಕಟ್ಟೆಯಲ್ಲಿ ಅರಸು ಪ್ರತಿಮೆ ಪ್ರತಿಷ್ಠಾಪಿಸುವುದು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಎಲ್ಲ ಸಂಘ ಸಂಸ್ಥೆಯವರು ಕೂಡ ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT