ಶುಕ್ರವಾರ, ಜುಲೈ 30, 2021
28 °C
ಅಶಿಸ್ತು ಸಹಿಸುವುದಿಲ್ಲ; ಅಧಿಕಾರಿಗಳಿಗೆ ಎಸ್‌ಪಿ ಖಡಕ್ ಎಚ್ಚರಿಕೆ

ಇಸ್ಪೀಟ್‌ ಆಡುತ್ತಿದ್ದ ಪೊಲೀಸರ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ದಾವಣಗೆರೆ ಗ್ರಾಮಾಂತರ ಠಾಣೆ ಆವರಣದ ವಿಶ್ರಾಂತಿ ಕೊಠಡಿಯಲ್ಲಿ ಇಸ್ಪೀಟು ಆಡುತ್ತಿದ್ದ ವೇಳೆ ಐಜಿ ಸ್ಕ್ವಾಡ್‌ನ ತಂಡಕ್ಕೆ ಸಿಕ್ಕಿಬಿದ್ದ ಕಾನ್ಸ್‌ಟೆಬಲ್‌ಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಬುಧವಾರ ಅಮಾನತು ಮಾಡಿದ್ದಾರೆ.

ಕಾನ್‌ಸ್ಟೆಬಲ್‌ಗಳಾದ ಲೋಹಿತ್, ನಾಗರಾಜ್, ಮಂಜಪ್ಪ, ಮಹೇಶ್, ಬಾಲರಾಜ್ ಅಮಾತನುಗೊಂಡವರು.

ಅಲ್ಲದೇ ಠಾಣೆಯ ಪಿಎಸ್‌ಐ ಸಂಜೀವ್ ಕುಮಾರ್ ಅವರನ್ನು ಐಜಿಪಿ ಎಸ್‌.ರವಿ ಅಮಾನತು ಮಾಡಿದ್ದಾರೆ. ಠಾಣೆಯಲ್ಲಿಯೇ ಇಸ್ಟೀಟ್‌ ಆಟವಾಡುತ್ತಿದ್ದರೂ ಪಿಎಸ್‌ಐ ಗಮನಕ್ಕೆ ಏಕೆ ಬರಲಿಲ್ಲ ಎಂಬ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ.

ಸೋಮವಾರ ರಾತ್ರಿ ಇಸ್ಪೀಟ್ ಆಡುತ್ತಿದ್ದ ವೇಳೆ ಪೂರ್ವ ವಲಯ ಐಜಿಪಿ ಆದೇಶದಂತೆ ಡಿವೈಎಸ್ಪಿ ತಿರುಮಲೇಶ್, ಪೊಲೀಸ್ ಇನ್‌ಸ್ಪೆಕ್ಟರ್ ಶಂಕರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ 5 ಮಂದಿಯನ್ನು ವಶಕ್ಕೆ ಪಡೆದಿದ್ದು, ₹29 ಸಾವಿರ ವಶಪಡಿಸಿಕೊಂಡಿದ್ದರು.

ಲಾಕ್‌ಡೌನ್ ವೇಳೆ ಜೂಜಾಟವಾಡುತ್ತಿದ್ದ ವೇಳೆ ಸಿಕ್ಕಿಬಿದ್ದ ಬಿಇಒ ಉತ್ತರ ವಲಯ ಕಚೇರಿ 6 ಸಿಬ್ಬಂದಿ ಹಾಗೂ ತಾಲ್ಲೂಕು ಪಂಚಾಯಿತಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಹಾಗೂ ಚಾಲಕರನ್ನು ಅಮಾನತುಗೊಳಿಸಲಾಗಿತ್ತು.

ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ:

ಯಾವುತ್ತು ಅಶಿಸ್ತು ಸಹಿಸುವುದಿಲ್ಲ. ಯಾರೇ ಆಗಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಠಾಣೆಯ ಆವರಣದ ವಿಶ್ರಾಂತಿ ಕೊಠಡಿಯಲ್ಲಿ ಇಸ್ಪೀಟ್ ಆಟವಾಡುತ್ತಿದ್ದವರ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ. ಅವರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ವಶಕ್ಕೆ ಪಡೆದು ಕಾನೂನು ಕ್ರಮ ತೆಗೆದುಕೊಂಡಿದ್ದೇವೆ. ಕೆಟಿಜೆ ನಗರ ಠಾಣೆಯ ಎಸ್‌ಐಯನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿದ್ದೇವೆ. ಆಳವಾದ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು