ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಂ ಐಸೊಲೇಶನ್‌ಗೆ ಅವಕಾಶವಿಲ್ಲ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ಕೊರೊನಾ ಮೂರನೇ ಅಲೆ ಮುನ್ನೆಚ್ಚರಿಕೆ ಸಭೆ
Last Updated 1 ಆಗಸ್ಟ್ 2021, 2:55 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಮೂರನೇ ಅಲೆ ಬರುವುದರಲ್ಲಿ ಯಾವುದೇ ಅನುಮಾನ ಉಳಿದಿಲ್ಲ. ಸುತ್ತಮುತ್ತಲಿನ ರಾಜ್ಯಗಳಲ್ಲಿ ಬಂದಿದೆ. ಮುಂದೆ ಗಡಿಭಾಗದ ಜಿಲ್ಲೆಗಳಿಗೆ ಬಂದು ಬಳಿಕ ದಾವಣಗೆರೆಗೂ ಬರಲಿದೆ. ಕಳೆದ ಬಾರಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಹಲವು ಕಾರಣಗಳಲ್ಲಿ ಹೋಂ ಐಸೊಲೇಶನ್‌ ಕೂಡ ಒಂದು. ಹಾಗಾಗಿ ಈ ಬಾರಿ ಹೋಂ ಐಸೊಲೇಶನ್‌ಗೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಕೋವಿಡ್ ಮೂರನೇ ಅಲೆಯನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಶನಿವಾರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಕೊರೊನಾ ಕಡಿಮೆ ಆಗಿರುವ ಕಾರಣದಿಂದ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಮುಚ್ಚಲಾಗಿದೆ. ವರದಿಯಾಗುವ ಪ್ರಕರಣಗಳನ್ನು ತಾಲ್ಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೆ ಒಂದು ಕೋವಿಡ್‌ ಕೇರ್‌ ಸೆಂಟರ್‌ ಶೀಘ್ರ ತೆರೆಯಲಾಗುವುದು. ಮುಂದೆ ಕೊರೊನಾ ಪತ್ತೆಯಾಗುವ, ಕೊರೊನಾ ಲಕ್ಷಣ ಇಲ್ಲದವರನ್ನು ಅಲ್ಲಿ ಸೇರಿಸಲಾಗುವುದು. ಕಳೆದ ಬಾರಿ ಹೋಂ ಐಸೊಲೇಶನ್‌ನಲ್ಲಿ ಇದ್ದವರು ಮನೆಮಂದಿಗೆಲ್ಲ ಹರಡಿದ್ದರು. ಅದಕ್ಕಾಗಿ ಈ ಬಾರಿ ಹೋಂ ಐಸೊಲೇಶನ್‌ಗೆ ಅವಕಾಶವನ್ನೇ ನೀಡುವುದಿಲ್ಲ ಎಂದು ವಿವರಿಸಿದರು.

ಜಿಲ್ಲೆಯಲ್ಲಿ 17 ಸಾವಿರ ಅಪೌಷ್ಟಿಕ ಮಕ್ಕಳ ಪಟ್ಟಿ ನಮ್ಮಲ್ಲಿದೆ. ಇವರಲ್ಲಿ 10 ಸಾವಿರ ಮಕ್ಕಳ ಪೋಷಕರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ. ಉಳಿದ 7 ಸಾವಿರ ಮಕ್ಕಳ ಪೋಷಕರಿಗೂ 15 ದಿನದೊಳಗಾಗಿ ಲಸಿಕೆ ನೀಡಬೇಕು. ಕೈಗಾರಿಕಾ ವಲಯಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ, ಬೇರೆ ರಾಜ್ಯಗಳಿಂದ ಬರುವ ಲಾರಿ ಚಾಲಕ ಹಾಗೂ ಕ್ಲೀನರ್‌ಗಳಿಗೆ ಕೋವಿಡ್ ಪರೀಕ್ಷೆ ಮಾಡಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ್, ‘ಮಕ್ಕಳಿಗೆ ಕೊರೊನಾ ಬಂದರೆ ಹೆತ್ತವರು ಹೆಚ್ಚು ಉದ್ವೇಗಕ್ಕೆ ಒಳಗಾಗುತ್ತಾರೆ. ಮಕ್ಕಳ ಮೇಲಿನ ಪ್ರೀತಿ ಅವರನ್ನು ಅತಿಯಾದ ಪ್ರತಿಕ್ರಿಯಿಸುವಂತೆ ಮಾಡುತ್ತದೆ. ಹಾಗಾಗಿ ಮಕ್ಕಳನ್ನು ಕೊರೊನಾದಿಂದ ರಕ್ಷಿಸಿಕೊಳ್ಳುವ ಬಗ್ಗೆ ಪೋಷಕರಿಗೆ ತಿಳಿಹೇಳಬೇಕು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಪೋಷಕರಿಗೆ ಸೋಂಕು ಹಾಗೂ ಲಸಿಕೆಯ ಬಗ್ಗೆ ಜಾಗೃತಿ ನೀಡಿ ಲಸಿಕೆ ಪಡೆಯಲು ಮನವೊಲಿಸಬೇಕು’ ಎಂದು ಸೂಚಿಸಿದರು.

ಮದುವೆ ಬಗ್ಗೆ ಏನೇ ಷರತ್ತು ವಿಧಿಸಿದರೂ, ಅಲ್ಲಿ ನಿಯಮ ಉಲ್ಲಂಘನೆ ಆಗಿಲ್ಲ ಎಂದು ವರದಿ ನೀಡಿದರೂ ಅದು ಸತ್ಯವಾಗಿರುವುದಿಲ್ಲ. ಹೆಚ್ಚು ಜನ ಭಾಗವಹಿಸಿರುತ್ತಾರೆ. ಅದಕ್ಕಾಗಿ ಪ್ರತಿ ಮದುವೆಯಲ್ಲಿ ಅವರೇ ಮಾಡಿದ ವಿಡಿಯೊಗಳನ್ನು ತರಿಸಿಕೊಳ್ಳಬೇಕು. ಹೆಚ್ಚು ಜನ ಇದ್ದರೆ ದಂಡ ವಿಧಿಸಬೇಕು ಎಂದು ಸಲಹೆ ನೀಡಿದರು.

ಶ್ರಾವಣದಲ್ಲಿ ದೇವಸ್ಥಾನಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತದೆ. ಅದನ್ನೂ ನಿಯಂತ್ರಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಬಿ. ರಿಷ್ಯಂತ್, ‘ಸರಿಯಾಗಿ ಮಾಸ್ಕ್‌ ಧರಿಸಬೇಕು. ಅಂತರ ಕಾಪಾಡಿಕೊಳ್ಳಬೇಕು ಮುಂತಾದ ನಿಯಮಗಳನ್ನು ಪಾಲಿಕೆಯ, ಪೊಲೀಸರ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕ ತಿಳಿಸಬೇಕು. ಎರಡು ದಿನ ಈ ರೀತಿ ಜಾಗೃತಿ ಮೂಡಿಸಿದ ಬಳಿಕ ಮೂರನೇ ದಿನದಿಂದ ಈ ನಿಯಮ ಪಾಲನೆ ಮಾಡದವರಿಗೆ ದಂಡ ವಿಧಿಸಬೇಕು. ಆಗ ಜನ ಎಚ್ಚೆತ್ತುಕೊಳ್ಳುತ್ತಾರೆ’ ಎಂದು ಹೇಳಿದರು.

ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ ನಾಯಕ, ಡಿಎಚ್‍ಒ ಡಾ. ನಾಗರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಜಿಲ್ಲಾ ಸರ್ಜನ್ ಡಾ.ಜಯಪ್ರಕಾಶ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಮೀನಾಕ್ಷಿ ಅವರೂ ಇದ್ದರು.

4,000 ಮಕ್ಕಳಿಗೆ ಕೊರೊನಾ ಸಾಧ್ಯತೆ

ಕೊರೊನಾ ಮೊದಲನೇ ಅಲೆಯಲ್ಲಿ ಜಿಲ್ಲೆಯಲ್ಲಿ 1,800 ಮಕ್ಕಳಿಗೆ, 2ನೇ ಹಂತದಲ್ಲಿ 2,600 ಮಕ್ಕಳಿಗೆ ಸೋಂಕು ತಗುಲಿತ್ತು. ಮೂರನೇ ಅಲೆಯಲ್ಲಿ 4,000 ಮಕ್ಕಳಿಗೆ ಬರುವ ಸಾಧ್ಯತೆ ಇದೆ. ಅದರಲ್ಲಿ 200 ಮಕ್ಕಳು ಆಸ್ಪತ್ರೆಗೆ ದಾಖಲಾಗಬಹುದು. 40 ಮಕ್ಕಳು ಐಸಿಯುನಲ್ಲಿ ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ. ಐಸಿಯುನಲ್ಲಿ ದಾಖಲಾಗುವ ಮಕ್ಕಳಿಗೆ ಬೇಕಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾಸ್ಪತ್ರೆಯಲ್ಲಿ 30ಕ್ಕಿಂತ ಹೆಚ್ಚು ಬೆಡ್‍ಗಳು, 36 ಐಸಿಯು ಮಕ್ಕಳ ಬೆಡ್‍ಗಳಿವೆ. ಅಗತ್ಯವಿರುವ ವೆಂಟಿಲೇಟರ್‌, ಐಸಿಯು ಬೆಡ್‌, ಮಲ್ಟಿಪ್ಯಾರಾ ಮಾನಿಟರ್ ಮತ್ತು ಇನ್ನುಳಿದವುಗಳನ್ನು ತರಿಸಲು ಈಗಾಗಲೇ ಏಜೆನ್ಸಿ ಗುರುತಿಸಲಾಗಿದೆ. 10 ದಿನಗಳ ಒಳಗಾಗಿ ತರಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT