ಭಾನುವಾರ, ಏಪ್ರಿಲ್ 2, 2023
31 °C

ಲಸಿಕೆ ವಿಚಾರದಲ್ಲಿ ರಾಜಕೀಯ ಬೇಡ: ಮಹಾನಗರಪಾಲಿಕೆ ಮೇಯರ್ ಎಸ್‌.ಟಿ.ವೀರೇಶ್ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾದಂತಹ ವಿಷಮ ಸಂದರ್ಭದಲ್ಲಿ ಲಸಿಕೆ ವಿಚಾರದಲ್ಲಿ ಯಾವ ಪಕ್ಷದವರು ರಾಜಕೀಯ ಮಾಡಬಾರದು. ಎಲ್ಲರಿಗೂ ಲಸಿಕೆ ಸಿಗುವಂತೆ ಮಾಡಲು ಶಕ್ತಿಮೀರಿ ಕೆಲಸ ಮಾಡಬೇಕು ಎಂದು ಮೇಯರ್ ಎಸ್‌.ಟಿ. ವೀರೇಶ್ ಸಲಹೆ ನೀಡಿದರು.

ಲಸಿಕೆ ವಿಚಾರದಲ್ಲಿ ನಡೆಯುತ್ತಿರುವ ವಾಗ್ವಾದ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆ.ಬಿ. ಬಡಾವಣೆಯಲ್ಲಿ ನಡೆದ ಲಸಿಕಾ ಶಿಬಿರದಲ್ಲಿ ಬಿಜೆಪಿಯಿಂದ ಗೊಂದಲ ಮೂಡಿಸುವ ಪ್ರಯತ್ನ ನಡೆದಿಲ್ಲ. ಬದಲಾಗಿ ಕಾಂಗ್ರೆಸ್‌ನವರು ಗೊಂದಲ ಮೂಡಿಸಿದ್ದಾರೆ. ಪಕ್ಷದ ಬ್ಯಾನರ್ ಅಡಿಯಲ್ಲಿ ಸರ್ಕಾರಿ ಲಸಿಕೆ ಹಾಕಿಸಲು ನಾವು ವಿರೋಧ ವ್ಯಕ್ತಪಡಿಸಿದೆವು. ಇದರಲ್ಲಿ ಸಂಸದರ ಪಾತ್ರವಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಶಾಮನೂರು ಶಿವಶಂಕರಪ್ಪ ಅವರು ಜನರಿಗೆ ಲಸಿಕೆ ನೀಡುತ್ತಿರುವುದು ಅಭಿನಂದನಾರ್ಹ. ಅದಕ್ಕೆ ನಮ್ಮ ವಿರೋಧವಿಲ್ಲ. ಸರ್ಕಾರದ ಲಸಿಕೆ ಪಡೆದು ಯಾರೋ ಪ್ರಚಾರ ಪಡೆದರೆ ಹೇಗೆ ಎಂದು ಪ್ರಶ್ನಿಸಿದ ಅವರು, ನನಗೆ ಲಸಿಕೆ‌ ನೀಡುವ ಕೇಂದ್ರಕ್ಕೆ ಬನ್ನಿ ಎಂದು ಯಾರೂ ಕರೆದಿಲ್ಲ. ಕೊರೊನಾ ಪರಿಸ್ಥಿತಿಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಪರಸ್ಪರ ಕೆಸರೆರಚಾಟದಿಂದ ಅಧಿಕಾರಿಗಳ ಮನೋಸ್ಥೈರ್ಯ ಕುಗ್ಗಲಿದೆ’ ಎಂದು ಹೇಳಿದರು.

‘ನಗರದ ಎಲ್ಲಾ ವಾರ್ಡ್‌ಗಳ ಜನರಿಗೂ ಲಸಿಕೆ ನೀಡುವ ಉದ್ದೇಶದಿಂದ 9 ಆರೋಗ್ಯ ಕೇಂದ್ರಗಳು ಹಾಗೂ ಅಂಗನವಾಡಿಗಳಲ್ಲಿ ಲಸಿಕೆ ನೀಡುವ ಕಾರ್ಯ ನಡೆಯುತ್ತಿದೆ. ಪಾಲಿಕೆ ಸದಸ್ಯರು ಸ್ಥಳ ನಿಗದಿ ಮಾಡಿ ಲಸಿಕೆ ಕೊಡಿಸುವ ಕಾರ್ಯ ಮಾಡುತ್ತಿದ್ದಾರೆ. ಬೆಸ್ಕಾಂ ಸಿಬ್ಬಂದಿ, ಬೀದಿ ಬದಿ ವ್ಯಾಪಾರಿಗಳು, ವೈದ್ಯಕೀಯ ಪ್ರತಿನಿಧಿಗಳಿಗೆ ಅವರು ಕೆಲಸ ಮಾಡುವ ಸ್ಥಳದಲ್ಲೇ ಲಸಿಕೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕೊರೊನಾ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಶಕ್ತಿ ಮೀರಿ ಪ್ರಯತ್ನಿಸಿದ್ದು, ನಗರದ ವಿವಿಧ ಸಂಘ-ಸಂಸ್ಥೆಗಳು ತಿಂಗಳುಗಟ್ಟಲೇ ಸಂಕಷ್ಟದಲ್ಲಿರುವವರಿಗೆ ಊಟೋಪಚಾರ ಸೇರಿದಂತೆ ವಿವಿಧ ರೀತಿಯಲ್ಲಿ ಸಹಕರಿಸಿವೆ. ಸಮಾಜಸೇವೆಗೆ ಎಲ್ಲರೂ ಕೈಜೋಡಿಸಬೇಕು’ ಎಂದು ಸಲಹೆ ನೀಡಿದರು.

ಇಷ್ಟು ದಿನ ಮಲಗಿದ್ದವರು ಈಗ ಎದ್ದಿದ್ದಾರೆ: ‘ಕೊರೊನಾ ಬಂದಾಗ ಜನರ ಸಂಕಷ್ಟ ಆಲಿಸದ 25ನೇ ವಾರ್ಡ್‌ನ ಪರಾಜಿತ ಅಭ್ಯರ್ಥಿ ಈಗ ಎದ್ದಿದ್ದಾರೆ. ಇಷ್ಟು ದಿನ ಮಲಗಿದ್ದವರು ಈಗ ಮಾತನಾಡುತ್ತಿದ್ದಾರೆ. ನಾವು ಎರಡು ಬಾರಿ ಆಯೋಜನೆ ಮಾಡಿ ಲಸಿಕೆ ನೀಡಿದ್ದೇವೆ‌. ಅವಶ್ಯಕತೆ ಬಿದ್ದರೆ ಮುಂದಿನ ದಿನಗಳಲ್ಲಿ ವಾರ್ಡ್‌ ಜನರಿಗೆ ಮತ್ತೆ ಲಸಿಕೆ ನೀಡಲಾಗುವುದು’ ಎಂದು ಹೇಳಿದರು.

ಉಪಮೇಯರ್ ಶಿಲ್ಪಾ ಜಯಪ್ರಕಾಶ್, ‘ನಮ್ಮ ವಾರ್ಡ್‌ನಲ್ಲೂ ಪಕ್ಷದ ಬ್ಯಾನರ್ ಅಡಿಯಲ್ಲಿ ಸರ್ಕಾರದ ಲಸಿಕೆಗಳನ್ನು ನೀಡುವ ಕಾರ್ಯ ನಡೆದಿತ್ತು. ಅಧಿಕಾರಿಗಳಿಗೆ ಹೇಳಿ ಅದನ್ನು ತಡೆಹಿಡಿದೆ. ಶ್ರೀಮಂತರು ತಮ್ಮ ಸ್ವಂತ ಹಣದಿಂದ ಲಸಿಕೆ ನೀಡುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಅವರ ಹಿಂಬಾಲಕರು ಹಾಗೂ ಕಾರ್ಯಕರ್ತರು ಅವರ ಹೆಸರನ್ನು ಕೆಡಿಸುತ್ತಿದ್ದಾರೆ’ ಎಂದು ಆರೋಪಿಸಿದರು. 

ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಲ್‌.ಡಿ.ಗೋಣೆಪ್ಪ, ಉಮಾ ಪ್ರಕಾಶ್‌ ಪಾಲಿಕೆ ಸದಸ್ಯರಾದ ಪ್ರಸನ್ನಕುಮಾರ್, ಸೋಗಿ ಶಾಂತಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು