ಶುಕ್ರವಾರ, ಅಕ್ಟೋಬರ್ 23, 2020
27 °C
ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್ ಹೇಳಿಕೆ

ನವೆಂಬರ್ 23ರಿಂದ ಮೂರನೇ ಹಂತದ ಪಾದಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನವೆಂಬರ್ 23ರಿಂದ ಮೂರನೇ ಹಂತದ ಕರ್ನಾಟಕದ ಕಲ್ಯಾಣ ಪಾದಯಾತ್ರೆ ಚನ್ನಗಿರಿ ತಾಲ್ಲೂಕಿನ ಕಾರಿಗನೂರಿನ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಸಮಾಧಿ ಸ್ಥಳದಿಂದ ಆರಂಭವಾಗಲಿದೆ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್ ತಿಳಿಸಿದರು.

ಬೆಂಗಳೂರಿನಿಂದ ಆರಂಭಿಸಿದ ಎರಡನೇ ಹಂತದ ಕರ್ನಾಟಕದ ಕಲ್ಯಾಣ ಪಾದಯಾತ್ರೆ ಬುಧವಾರ ದಾವಣಗೆರೆಗೆ ತಲುಪಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ‘ಗ್ರಾಮಗಳ ಸ್ವಾವಲಂಬನೆ ಉದ್ದೇಶ ಹೊಂದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನು ರಾಜಕೀಯದ ಬದಲು ಜನರಿಗಾಗಿ ಕೈಗೊಳ್ಳಲಾಗಿದ್ದು, ಇದು ಜನತಾ ಪರಿವಾರದ ಪಾದಯಾತ್ರೆಯೂ ಹೌದು’ ಎಂದರು.

‘ಗ್ರಾಮ ಪಂಚಾಯಿತಿಗಳು ಬಲಿಷ್ಠವಾದಾಗ ಮಾತ್ರ ರಾಜ್ಯ ಪ್ರಬಲವಾಗಲು ಸಾಧ್ಯವಾಗುತ್ತದೆ. ಆಗ ಕರ್ನಾಟಕದ ಕಲ್ಯಾಣ ಆಗಲು ಸಾಧ್ಯವಿದೆ. ಹಳ್ಳಿಗಳಲ್ಲಿ ಹಣವೇ ಮುಖ್ಯವಾಗುತ್ತಿದ್ದು, ಹಣಕ್ಕಾಗಿ ಬೆಳೆ ಬೆಳೆಲಾಗುತ್ತಿದೆ. ನಮ್ಮ ಪಂಚಾಯಿತಿ ಜನರ ಜೀವನಕ್ಕಾಗಿ ಬೆಳೆ ಎಂಬ ಕಲ್ಪನೆ ಭಾವನೆ ಬರಬೇಕಿದೆ. ರೈತರು ಬೆಳೆದ ಬೆಳೆಯನ್ನು ತಕ್ಷಣಕ್ಕೆ ಮಾರಾಟ ಮಾಡದೆ ಅವುಗಳ ಮೌಲವರ್ಧನೆ ಮಾಡಬೇಕು’ ಎಂದರು.

ರಂಗಕರ್ಮಿ ಪ್ರಸನ್ನ ಅವರ ಪವಿತ್ರ ಆರ್ಥಿಕತೆ ಕಲ್ಪನೆ ಸಾಕಾರವಾಗಬೇಕು. ಗ್ರಾಮಗಳು ಸ್ವಾವಲಂಬನೆ ಸಾಧಿಸಬೇಕು. ಎಲ್ಲರಲ್ಲೂ ಸಹಕಾರದಡಿ ಕಾರ್ಯಗಳಾಗಬೇಕು. ಎಲ್ಲರಿಗೂ ಉದ್ಯೋಗ ಸೃಜಿಸುವತ್ತ ಗಮನ ಹರಿಸಬೇಕಿದೆ ಎಂದರು.

ದೇಶದ ಕೇಂದ್ರ- ರಾಜ್ಯ ಸರ್ಕಾರಗಳು ದುರ್ಬಲವಾಗುತ್ತಿವೆ. ಜನರ ಮನದಲ್ಲಿ ಸರ್ಕಾರಗಳ ಅಸ್ತಿತ್ವದ ಪ್ರಶ್ನೆ ಮೂಡುತ್ತಿದ್ದು, ತಾವು ಬಿಳಿಆನೆ ಸಾಕುತ್ತಿದ್ದೇವಾ ಎಂಬ ಭಾವನೆ ಬರುತ್ತಿದೆ ಎಂದು ಅಭಿಪ್ರಾಯಪಟ್ಟರು.

ದೊಡ್ಡ ಬಳ್ಳಾಪುರದ ನಿರಂಜನ ದೇಶಿಕೇಂದ್ರ ಸ್ವಾಮೀಜಿ, ಅಶ್ವತ್ಥ ನಾರಾಯಣ್, ಸೂರ್ಯಪ್ರಕಾಶ್, ದೀಪಕ್, ಕೆ.ವಿ.ಶಿವರಾಮ್ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಡಿ. 12ರಂದು ಜೆ.ಎಚ್.ಪಟೇಲರ ಸ್ಮರಣೋತ್ಸವ:  ಜೆ.ಎಚ್.ಪಟೇಲರ ಅಭಿಮಾನಿಗಳು ಡಿ. 12ರಂದು ಕೂಡಲಸಂಗಮದಲ್ಲಿ ಅವರ ಸ್ಮರಣೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಆ ವೇಳೆಗೆ ತಲುಪುವಂತೆ ಮೂರನೇ ಹಂತದ ಪಾದಯಾತ್ರೆಯನ್ನು ನವೆಂಬರ್ 23ರಿಂದ ಕೈಗೊಳ್ಳಲಾಗುವುದು ಎಂದು ಮಹಿಮ ಪಟೇಲ್ ಹೇಳಿದರು.

ಮೊದಲ ಹಂತದ ಪಾದಯಾತ್ರೆಯನ್ನು ಬೆಂಗಳೂರಿನಿಂದ ಕೋಲಾರದವರೆಗೆ ನಡೆಸಲಾಯಿತು. ಅಕ್ಟೋಬರ್ 15ಕ್ಕೆ ಎರಡನೇ ಹಂತದ ಜಾಗೃತಿ ಜಾಥಾ ಕಾರಿಗನೂರಿನ ಪಟೇಲರ ಸಮಾಧಿ ಸ್ಥಳದಲ್ಲಿ ಮುಕ್ತಾಯಗೊಳ್ಳಲಿದ್ದು, ಈ ವೇಳೆ ಪಿಡಿಒಗೆ ಮನವಿ ಸಲ್ಲಿಸಲಾಗುವುದು.

ಈ ಮೂರು ಹಂತದ ಕಾರ್ಯಕ್ರಮಗಳು ಸೇರಿ ರಾಜ್ಯದಾದ್ಯಂತ 2ಸಾವಿರ ಕಿ.ಮೀ. ಕಾಲ್ನಡಿ ಜಾಥಾ ಮಾಡಿದಂತಾಗಲಿದೆ. ಈಗಾಗಲೇ ಎರಡು ಹಂತದ ಜಾಥಾದಲ್ಲಿ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು