ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷೇತರರ ಕೈಯಲ್ಲಿ ದಾವಣಗೆರೆ ಮೇಯರ್ ಗದ್ದುಗೆ

ನಾಳೆ ಮೇಯರ್ ಚುನಾವಣೆ: ಬಿಜೆಪಿ–ಕಾಂಗ್ರೆಸ್‌ ನಡುವೆ ಪೈಪೋಟಿ
Last Updated 23 ಫೆಬ್ರುವರಿ 2021, 2:27 IST
ಅಕ್ಷರ ಗಾತ್ರ

ದಾವಣಗೆರೆ: ಫೆ.24ರಂದು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಅಧಿಕಾರ ಹಿಡಿಯಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿವೆ.

ಎರಡೂ ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದ್ದು, ಬಿಜೆಪಿಯಿಂದ ಶಾಸಕ ಎಸ್‌.ಎ. ರವೀಂದ್ರನಾಥ್ ಅವರ ಪುತ್ರಿ ವೀಣಾ ನಂಜಪ್ಪ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಅವರ ಪುತ್ರ ರಾಕೇಶ್ ಜಾಧವ್, ಎಸ್.ಟಿ. ವೀರೇಶ್‌ ಹಾಗೂ ಕೆ.ಟಿ.ವೀರೇಶ್ (ಪೈಲ್ವಾನ್ ವೀರೇಶ್) ಅವರ ಹೆಸರುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್‌ನಲ್ಲಿ ದೇವರಮನಿ ಶಿವಕುಮಾರ್, ಗಡಿಗುಡಾಳ್ ಮಂಜುನಾಥ್, ಕಳೆದ ಬಾರಿಯ ಚುನಾವಣೆಗೆ ಗೈರಾಗಿದ್ದ ಜೆ.ಎನ್.ಶ್ರೀನಿವಾಸ್ ಅವರ ಹೆಸರುಗಳು ಕೇಳಿ ಬರುತ್ತಿವೆ.

ಶಾಸಕ ಎಸ್‌.ಎ. ರವೀಂದ್ರನಾಥ್ ಅವರ ನಿವಾಸದಲ್ಲಿ ನಡೆದ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಒಂದು ಸುತ್ತಿನ ಚರ್ಚೆ ನಡೆದಿದೆ. ಅಂತಿಮ ಸುತ್ತಿನ ಸಭೆ ಫೆ.23ರಂದು ನಡೆಯಲಿದ್ದು, ಅಲ್ಲಿ ಮೇಯರ್ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ವಿಧಾನ ಪರಿಷತ್ ಸದಸ್ಯರ ಮತದಾನ ಸಂಬಂಧ ಕಾಂಗ್ರೆಸ್‌ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿ ವಜಾವಾಗಿದ್ದು, ಬಿಜೆಪಿಗೆ ಇನ್ನಷ್ಟು ಬಲ ಬಂದಿದೆ.

ವಿಪ್ ಜಾರಿ

ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರೇ ಗೈರು ಹಾಜರಾಗಿದ್ದು, ಸೋಲನ್ನು ಅನುಭವಿಸಬೇಕಾಯಿತು. ಈ ನಿಟ್ಟಿನಲ್ಲಿ ಪಕ್ಷದ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರು ವಿಪ್ ಜಾರಿ ಮಾಡಲಿದ್ದಾರೆ. ಅಲ್ಲದೇ ಬಿಜೆಪಿಯೂ ವಿಪ್ ಜಾರಿ ಮಾಡಲು ನಿರ್ಧರಿಸಿದೆ.

ಪಕ್ಷೇತರರೇ ನಿರ್ಣಾಯಕ

ಮೇಯರ್ ಚುನಾವಣೆಯಲ್ಲಿ ಪಕ್ಷೇತರರೇ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಹೀಗಾಗಿ ಎರಡೂ ಪಕ್ಷಗಳ ಮುಖಂಡರು ಪಕ್ಷೇತರರನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಿವೆ. ‘ಒಬ್ಬ ಪಕ್ಷೇತರ ಸದಸ್ಯರು ನಮ್ಮ ಜೊತೆ ಇದ್ದಾರೆ.ಕಳೆದ ಬಾರಿ ಮೂವರು ಪಕ್ಷೇತರರು ಬಿಜೆಪಿ ಸದಸ್ಯತ್ವವನ್ನು ಪಡೆದಿದ್ದು, ಈಗಾಗಲೇ ಉಪಮೇಯರ್, ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಪಕ್ಷೇತರರ ಸ್ಥಾನ ಬಿಜೆಪಿಗೆ ಗಟ್ಟಿಯಾಗಿದೆ’ ಎನ್ನುತ್ತಾರೆ ಪಾಲಿಕೆಯ ಬಿಜೆಪಿ ಸದಸ್ಯ ಪ್ರಸನ್ನಕುಮಾರ್.

ಬಿಜೆಪಿಯ ಲೆಕ್ಕಾಚಾರದ ಪ್ರಕಾರ ಪಾಲಿಕೆಯ ನಾಲ್ವರು ಪಕ್ಷೇತರರೂ ಸೇರಿ 21 ಸದಸ್ಯರು, ತಲಾ ಒಬ್ಬ ಶಾಸಕ, ಸಂಸದರು ಹಾಗೂ ವಿಧಾನ ಪರಿಷತ್‌ನಏಳು ಸದಸ್ಯರು ಸೇರಿ ಒಟ್ಟು 30 ಮತಬಲ ಇದೆ.

ಕಾಂಗ್ರೆಸ್‌ನ ಲೆಕ್ಕಾಚಾರದಂತೆ ಒಬ್ಬ ಪಕ್ಷೇತರ ಸೇರಿ 22 ಸದಸ್ಯರು, ಒಬ್ಬ ಶಾಸಕ, ವಿಧಾನ ಪರಿಷತ್ತಿನ ನಾಲ್ವರು ಹಾಗೂ ಜೆಡಿಎಸ್‌ನ ಒಬ್ಬ ಸದಸ್ಯೆ ಸೇರಿ ಒಟ್ಟು 28 ಮತಬಲ ಇದೆ. ಒಂದು ಸ್ಥಾನಗಳು ಆಚೀಚೆಯಾದರೂ ಲಾಟರಿ ಮೂಲಕ ಆಯ್ಕೆ ಮಾಡಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿ ಇಲ್ಲ ಎಂಬುದು ವಿಶ್ಲೇಷಕರ ಲೆಕ್ಕಾಚಾರ.

ಪಾಲಿಕೆ ಚುನಾವಣೆಯಲ್ಲಿ 22 ಸ್ಥಾನಗಳನ್ನು ಕಾಂಗ್ರೆಸ್‌ ಗೆದ್ದುಕೊಂಡಿತ್ತು. ಆದರೆ, ಕಳೆದ ಬಾರಿಯ ಮೇಯರ್‌ ಚುನಾವಣೆಯ ಬಳಿಕ ಒಬ್ಬ ಸದಸ್ಯರು ರಾಜೀನಾಮೆ ನೀಡಿದ್ದರಿಂದ ಕಾಂಗ್ರೆಸ್ ಸದಸ್ಯರ ಬಲವು 21ಕ್ಕೆ ಕುಸಿದಿರುವುದು ‘ಕೈ’ ಪಾಳಯಕ್ಕೆ ಹಿನ್ನಡೆಯಾಗಿದೆ.

ಬಿಜೆಪಿ ಸದಸ್ಯರ ಪ್ರವಾಸ

ಬಿಜೆಪಿ ಸದಸ್ಯರೊಬ್ಬರ ಸಂಬಂಧಿಯ ವಿವಾಹ ಮೈಸೂರಿನಲ್ಲಿ ನಡೆಯುತ್ತಿದೆ ಎಂಬ ನೆಪವೊಡ್ಡಿ ಪಾಲಿಕೆ ಸದಸ್ಯರು ಪ್ರವಾಸ ಹೋಗಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಆದರೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ ಈ ಮಾತುಗಳನ್ನು ತಳ್ಳಿ ಹಾಕಿದ್ದು, ಎಲ್ಲರೂ ಇಲ್ಲಿಯೇ ಇದ್ದಾರೆ ಎಂದಿದ್ದಾರೆ.

ಲಕೋಟೆಯಲ್ಲಿ ಹೆಸರು

ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಪಾಲಿಗೆಕಾಂಗ್ರೆಸ್‌ನ ವರಿಷ್ಠರಾದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಶಾಸಕ ಶಾಮನೂರು ಶಿವಶಂಕರಪ್ಪ ಅವರು ಅಖಾಡಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ಅನ್ನು ಗೆಲ್ಲಿಸಲು ತಂತ್ರ ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೇಯರ್ ಸ್ಥಾನದ ಅಭ್ಯರ್ಥಿಯ ಹೆಸರನ್ನು ಮಂಗಳವಾರ ನಿರ್ಧರಿಸಿ, ಬುಧವಾರ ಬೆಳಿಗ್ಗೆ ಲಕೋಟೆಯಲ್ಲಿ ಕಳುಹಿಸಿಕೊಡಲಿದ್ದು, ಅವರೇ ನಾಮಪತ್ರ ಸಲ್ಲಿಸುತ್ತಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT