ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ | ಓವರ್ ಲೋಡ್ ಕಬ್ಬು ಸಾಗಣೆ; ಅಪಾಯಕ್ಕೆ ಆಹ್ವಾನ

Published 31 ಅಕ್ಟೋಬರ್ 2023, 14:43 IST
Last Updated 31 ಅಕ್ಟೋಬರ್ 2023, 14:43 IST
ಅಕ್ಷರ ಗಾತ್ರ

ಹರಿಹರ: ರಸ್ತೆ ಅಪಘಾತಗಳಿಗೆ ಸರಕು ಸಾಗಣೆ ವಾಹನಗಳಲ್ಲಿನ ಓವರ್ ಲೋಡ್ ಕೂಡ ಪ್ರಮುಖ ಕಾರಣ. ಈ ವಾಸ್ತವಾಂಶ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಪೊಲೀಸರಿಗೆ ಗೊತ್ತಿದ್ದರೂ, ನಿಯಮ ಉಲ್ಲಂಘಿಸುತ್ತಿರುವ ಕಬ್ಬು ಸಾಗಣೆ ವಾಹನಗಳ ಚಾಲಕರನ್ನು ಪ್ರಶ್ನಿಸುತ್ತಿಲ್ಲ.

ಕಬ್ಬು ಕಟಾವು ಮಾಡಿ ಸಕ್ಕರೆ ಕಾರ್ಖಾನೆಗಳಿಗೆ ಸಾಗಣೆ ಮಾಡಲಾಗುತ್ತಿದೆ. ಹರಿಹರ ನಗರದಲ್ಲಿ ನಿತ್ಯ ನೂರಾರು ಕಬ್ಬು ಸಾಗಣೆ ವಾಹನಗಳು ಸಂಚರಿಸುತ್ತವೆ.

ಮಿತಿಗಿಂತ ಹೆಚ್ಚು ಭಾರ ಹೊತ್ತು ನಗರದ ರಸ್ತೆಗಳಲ್ಲಿ ಸಾಗುವ ಡಬಲ್ ಟ್ರಾಲಿ ಟ್ರ್ಯಾಕ್ಟರ್ ಹಾಗೂ ಲಾರಿಗಳನ್ನು ಕಂಡು ಇತರೆ ವಾಹನಗಳ ಸವಾರರು ಭಯಪಡುವ ಸ್ಥಿತಿಯಿದೆ.

ಹಾವೇರಿ ಜಿಲ್ಲೆ ಭಾಗದಿಂದ ಕಬ್ಬು ಲೋಡ್ ಮಾಡಿದ ಲಾರಿ ಮತ್ತು ಟ್ರ್ಯಾಕ್ಟರ್‌ಗಳು ನಗರದೊಳಗೆ ಬೀರೂರು- ಸಮ್ಮಸಗಿ ಹೆದ್ದಾರಿ (ತುಂಗಭದ್ರಾ ಸೇತುವೆ) ಮೂಲಕ ಪ್ರವೇಶಿಸುತ್ತವೆ. ನಂತರ ಗಾಂಧಿ ವೃತ್ತದ ಮೂಲಕ ಹರಪನಹಳ್ಳಿ ಕಡೆಗೆ ಹೊಸಪೇಟೆ-ಶಿವಮೊಗ್ಗ ಹೆದ್ದಾರಿಯಲ್ಲಿ ಸಾಗುತ್ತವೆ.

ನಗರ ವ್ಯಾಪ್ತಿಯ 4 ಕಿ.ಮೀ. ಮಾರ್ಗದಲ್ಲಿ ಈ ವಾಹನಗಳು ಸಾಗುತ್ತವೆ. ಅತಿಯಾದ ಭಾರ ಹಾಗೂ ಗಾತ್ರದಿಂದಾಗಿ ಈ ವಾಹನಗಳು ತೆವಳುತ್ತಾ ಸಾಗುವಾಗ ಓಲಾಡುತ್ತವೆ. ಈ ವಾಹನದ ಹಿಂದೆ, ಅಕ್ಕ– ಪಕ್ಕ ಸಂಚರಿಸುವ ಬೇರೆ ವಾಹನ ಸವಾರರು ಓವರ್ ಟೇಕ್ ಮಾಡಲು ಹಿಂಜರಿಯುತ್ತಾರೆ.

ಬೆಳಿಗ್ಗೆ ಮತ್ತು ಸಂಜೆ ಶಾಲೆಗಳು ಆರಂಭ ಹಾಗೂ ಬಿಡುವ ಸಮಯದಲ್ಲಿ ನಗರದೊಳಗೆ ಶಾಲಾ ಮಕ್ಕಳನ್ನು ಸಾಗಿಸುವ ಆಟೊ, ಕಾರುಗಳ ಸಂಚಾರ ಅಧಿಕವಾಗಿರುತ್ತದೆ. ಆ ವೇಳೆಯೇ ಕಬ್ಬು ಸಾಗಣೆ ವಾಹನಗಳ ಸಂಚಾರವೂ ಅಧಿಕವಾಗಿರುತ್ತದೆ. ಇದು ಅಪಘಾತಕ್ಕೆ ಆಹ್ವಾನ ನೀಡುವಂತಿದೆ.

6 ಚಕ್ರದ ಲಾರಿ ಹಾಗೂ ಎರಡು ಟ್ರಾಲಿಗಳನ್ನು ಜೋಡಿಸಿದ ಟ್ರ್ಯಾಕ್ಟರ್‌ಗಳ ಮೂಲಕ ಕಬ್ಬು ಸಾಗಣೆ ಮಾಡಲಾಗುತ್ತಿದೆ. 6 ಚಕ್ರದ ಲಾರಿಯಲ್ಲಿ ನಿಯಮದ ಪ್ರಕಾರ ಗರಿಷ್ಠ 12.50 ಟನ್ ಕಬ್ಬು ಸಾಗಣೆ ಮಾಡಬಹುದು. ಆದರೆ, ಈ ಲಾರಿಗಳಲ್ಲಿ ಅಂದಾಜು 16 ರಿಂದ 20 ಟನ್ ಭಾರದ ಕಬ್ಬನ್ನು ಸಾಗಿಸಲಾಗುತ್ತಿದೆ.

ಇನ್ನು 6 ಟನ್ ಸಾಮರ್ಥ್ಯದ ಟ್ರ್ಯಾಕ್ಟರ್‌ಗಳಲ್ಲಿ 10 ರಿಂದ 12 ಟನ್ ಕಬ್ಬು ಸಾಗಿಸಲಾಗುತ್ತಿದೆ. ಸಕ್ಕರೆ ಕಾರ್ಖಾನೆಗಳ ಜೊತೆಗೆ ಸಾಗಣೆ ಒಪ್ಪಂದ ಮಾಡಿಕೊಳ್ಳುವ ಸಾಗಣೆದಾರರು ಲಾರಿ, ಟ್ಯ್ರಾಕ್ಟರ್‌ಗಳಲ್ಲಿ ಹೀಗೆ ನಿಯಮ ಮೀರಿ ಕಬ್ಬು ಸಾಗಣೆ ಮಾಡುತ್ತಿದ್ದಾರೆ. ಹೆಚ್ಚೂ ಕಡಿಮೆ 10 ಲೋಡ್‌ನಲ್ಲಿ ಸಾಗಿಸಬೇಕಾದ ಕಬ್ಬನ್ನು ಇವರು 5ರಿಂದ 6 ಲೋಡ್‌ಗಳಲ್ಲೇ ಸಾಗಣೆ ಮಾಡುತ್ತಿದ್ದಾರೆ.

ನಗರದ ನಾಡಬಂದ್ ಶಾವಲಿ ದರ್ಗಾ ಎದುರು 3 ವರ್ಷದ ಹಿಂದೆ ಕಬ್ಬಿನ ಟ್ರ್ಯಾಕ್ಟರ್‌ ಅಪಘಾತದಲ್ಲಿ 12 ವರ್ಷದ ಬಾಲಕ ಮೃತಪಟ್ಟಿದ್ದ, ಕಳೆದ ನ.22ರಂದು ನಗರದ ಹೊರವಲಯದಲ್ಲಿ ಕಬ್ಬಿನ 1 ಲಾರಿ ಹಾಗೂ ಟ್ರ್ಯಾಕ್ಟರ್‌ಗಳ ಉರುಳಿ ಬಿದ್ದಿದ್ದವು.

ಹರಿಹರ ಹೊರವಲಯದ ತುಂಗಭದ್ರಾ ಸೇತುವೆ ಬಳಿ ಬೀರೂರು-ಸಮ್ಮಸಗಿ ಹೆದ್ದಾರಿಯಲ್ಲಿ ಕಳೆದ ವರ್ಷ ಕಬ್ಬು ಸಾಗಣೆಯ ಲಾರಿ ಮತ್ತು ಟ್ರಾಲಿ ಉರುಳಿ ಬಿದ್ದಿದ್ದ ದೃಶ್ಯ
ಹರಿಹರ ಹೊರವಲಯದ ತುಂಗಭದ್ರಾ ಸೇತುವೆ ಬಳಿ ಬೀರೂರು-ಸಮ್ಮಸಗಿ ಹೆದ್ದಾರಿಯಲ್ಲಿ ಕಳೆದ ವರ್ಷ ಕಬ್ಬು ಸಾಗಣೆಯ ಲಾರಿ ಮತ್ತು ಟ್ರಾಲಿ ಉರುಳಿ ಬಿದ್ದಿದ್ದ ದೃಶ್ಯ
ಕಬ್ಬು ಸಾಗಣೆದಾರರಿಗೆ ಓವರ್‌ಲೋಡ್ ಮಾಡದಂತೆ ಹಲವು ಬಾರಿ ಜಾಗೃತಿ ಮೂಡಿಸಲಾಗಿದೆ. ಈಗ ಮತ್ತೊಮ್ಮೆ ಜಾಗೃತಿ ಮೂಡಿಸುತ್ತೇವೆ
ಶ್ರೀಧರ್ ಮಲ್ಲಾಳ್ ಪ್ರಾದೇಶಿಕ ಸಾರಿಗೆ ಅಧಿಕಾರಿ
ಬಹುತೇಕ ಸಕ್ಕರೆ ಕಾರ್ಖಾನೆಗಳು ಶಾಸಕರು ಸಂಸದರು ಸಚಿವರ ಕುಟುಂಬಗಳಿಗೆ ಸೇರಿವೆ. ಹೀಗಾಗಿ ಅಧಿಕಾರಿಗಳೂ ಮೌನಕ್ಕೆ ಜಾರಿದ್ದಾರೆ. ಜನಸಾಮಾನ್ಯರು ವಾಹನಗಳಲ್ಲಿ ಹೆಚ್ಚಿನ ಭಾರ ಹೇರಿದರೆ ದಂಡ ವಿಧಿಸುತ್ತಾರೆ
ದಾದಾ ಖಲಂದರ್ ನಗರಸಭಾ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT