ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಹೆದ್ದಾರಿ ಶಿಸ್ತು ಗೊತ್ತೇ ಇಲ್ಲ; ದಂಡ ಪಾವತಿಗೆ ಹಣವಿಲ್ಲ!

ಪಥ ಶಿಸ್ತು ಉಲ್ಲಂಘನೆಗೆ ₹ 26.45 ಲಕ್ಷ ದಂಡ ವಸೂಲಿ
Last Updated 13 ಮಾರ್ಚ್ 2023, 23:13 IST
ಅಕ್ಷರ ಗಾತ್ರ

ದಾವಣಗೆರೆ: ‘ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ– 48ರಲ್ಲಿ ಪಥ ಶಿಸ್ತು (ಲೇನ್‌ ಡಿಸಿಪ್ಲೀನ್‌) ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ವಿಧಿಸುವ ಅಭಿಯಾನ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭವಾಗಿದೆ. ಆದರೆ, ಪಥ ಶಿಸ್ತು ಕುರಿತು ಬಹುತೇಕ ಚಾಲಕರಿಗೆ ತಿಳಿವಳಿಕೆ ಇಲ್ಲ. ಶಿಸ್ತು ಉಲ್ಲಂಘನೆಗೆ ಕ್ರಮ ಕೈಗೊಳ್ಳುತ್ತಿರುವ ವಿಷಯವೂ ತಿಳಿದಿಲ್ಲ.

ಶಿಸ್ತು ಉಲ್ಲಂಘನೆ ಪ್ರಕರಣ ಪತ್ತೆ ಹಚ್ಚುತ್ತಿರುವ ಪೊಲೀಸರು ದಂಡ ಪಾವತಿಸುವಂತೆ ಸೂಚಿಸಿದರೆ, ತಕರಾರು ತೆಗೆಯುವ ವಾಹನ ಚಾಲಕರು, ‘ಈ ಬಗ್ಗೆ ನಮಗೆ ಗೊತ್ತೇ ಇಲ್ಲ, ದಂಡ ಪಾವತಿಸಲು ಹಣವಿಲ್ಲ’ ಎನ್ನುತ್ತಿದ್ದಾರೆ. ಇದರಿಂದಾಗಿ ದಂಡ ವಸೂಲಿಗೆ ಹರಸಾಹಸ ಪಡುವಂತಾಗಿದೆ.

ಅಪಘಾತಗಳಿಗೆ ಕಡಿವಾಣ ಹಾಕಲು ಆರಕ್ಕಿಂತ ಅಧಿಕ ಚಕ್ರಗಳ ಭಾರಿ ವಾಹನಗಳಾದ ಲಾರಿ, ಟ್ರಕ್, ಟ್ಯಾಂಕರ್‌ಗಳು ಹೊರ ಪಥ (ಔಟರ್ ಲೇನ್‌)ದಲ್ಲಿ, ಆರು ಚಕ್ರದ ಬಸ್‌, ಲಾರಿಗಳು ಮಧ್ಯದ ಪಥದಲ್ಲಿ, ನಾಲ್ಕು ಚಕ್ರದ ವಾಹನಗಳಾದ ಕಾರು ಮತ್ತು ಜೀಪ್‌ಗಳಿಗೆ ಬಲ ಭಾಗದಲ್ಲಿರುವ ಮೊದಲ ಪಥದಲ್ಲಿ, ಎಡ ಭಾಗದಲ್ಲಿನ ಕೊನೆ ಪಥದ ಪಕ್ಕದಲ್ಲಿರುವ ಸಣ್ಣ ಪಥದಲ್ಲಿ ದ್ವಿಚಕ್ರ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಿ ನಿಯಮ ರೂಪಿಸಲಾಗಿದೆ. ಯಾವುದೇ ವಾಹನ ಅಕಸ್ಮಾತ್‌ ಸೂಚಿತ ಪಥ ಬಿಟ್ಟು ಬೇರೆ ಪಥ ಪ್ರವೇಶಿಸಿದರೆ ಅಂತಹ ವಾಹನ ಚಾಲಕರಿಗೆ ₹ 500 ದಂಡ ವಸೂಲಿ ಮಾಡಲಾಗುತ್ತಿದೆ.

ಶಿಸ್ತು ಉಲ್ಲಂಘಿಸುವ ವಾಹನಗಳನ್ನು ತಡೆದು ದಂಡ ವಿಧಿಸಲೆಂದು ತಾಲ್ಲೂಕಿನ ಹೆಬ್ಬಾಳು ಟೋಲ್‌ ಬಳಿ ತಡೆಯಲಾಗುತ್ತಿದ್ದು, ಬಹುತೇಕ ಹೊರ ರಾಜ್ಯಗಳ ಚಾಲಕರು ಪೊಲೀಸರೊಂದಿಗೆ ವಾಗ್ವಾದ ನಡೆಸುವ ದೃಶ್ಯಗಳು ಕಂಡುಬರುತ್ತಿವೆ. ‘ನಮ್ಮ ಬಳಿ ಹಣವಿಲ್ಲ. ಏನಾದರೂ ಮಾಡಿಕೊಳ್ಳಿ’ ಎಂದು ಪೊಲೀಸರ ಜೊತೆ ವಾಗ್ವಾದ ನಡೆಸುವುದು ಸಾಮಾನ್ಯವಾಗಿದೆ.

ಅಲ್ಲದೇ, ದಂಡದ ಹಣವನ್ನು ಡಿಜಿಟಲ್ ಪೇಮೆಂಟ್ ಮೂಲಕ ಪಾವತಿಸಲು ಅವಕಾಶ ಇಲ್ಲದಿರುವುದೂ ಸಮಸ್ಯೆಗೆ ಕಾರಣವಾಗಿದೆ.

‘ದಾವಣಗೆರೆ ಜಿಲ್ಲೆಯ 70 ಕಿ.ಮೀ. ವ್ಯಾಪ್ತಿಯಲ್ಲಿರುವ ಹೆದ್ದಾರಿಯಲ್ಲಿ ಶೇ 90ರಷ್ಟು ಕಡೆ 6 ಪಥಗಳಿವೆ. ಪಥ ಶಿಸ್ತು ಉಲ್ಲಂಘಿಸುವ ವಾಹನಗಳನ್ನು ಪತ್ತೆ ಮಾಡಲೆಂದೇ ಆಟೊಮ್ಯಾಟಿಕ್ ನಂಬರ್‌ ಪ್ಲೇಟ್ ರೆಕಗ್ನಿಷನ್ ಕ್ಯಾಮೆರಾ ಅಳವಡಿಸಲಾಗಿದೆ. ಫೆ. 20ರಿಂದ ದಂಡ ವಿಧಿಸುವ ಅಭಿಯಾನ ನಡೆದಿದೆ. ಡಿಸೆಂಬರ್ ತಿಂಗಳಿಂದಲೇ ದಂಡ ವಸೂಲಿ ಮಾಡಲಾಗುತ್ತಿದೆ. ಮಾರ್ಚ್ 10ರ ವರೆಗೆ 5,290 ಪ್ರಕರಣ ದಾಖಲಿಸಿ ₹ 26.45 ಲಕ್ಷ ದಂಡ ಸಂಗ್ರಹಿಸಲಾಗಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ನಂಬರ್ ಪ್ಲೇಟ್ ಗುರುತಿಸುವ 9 ಸ್ವಯಂ ಚಾಲಿತ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಪಥ ಶಿಸ್ತು ಉಲ್ಲಂಘಿಸಿದ ವಾಹನಗಳ ನಂಬರ್, ಸ್ಥಳ, ಸಮಯದ ಸಮೇತ ಚಿತ್ರಗಳು ಟೋಲ್‌ಗಳಲ್ಲಿನ ಮಲ್ಟಿ ಫಂಕ್ಷನಲ್ ಡಿವೈಸ್‌ಗೆ ರವಾನೆಯಾಗುತ್ತದೆ. ಟೋಲ್‌ ಗೇಟ್‌ಗಳಲ್ಲಿ ವಾಹನಗಳು ನಿಂತಾಗ ಅಲ್ಲಿ ದಂಡ ವಿಧಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಎಗ್ಗಿಲ್ಲದೇ ಸಾಗಿದ ಶಿಸ್ತು ಉಲ್ಲಂಘನೆ
ಪಥ ಶಿಸ್ತಿನ ಕುರಿತು ಹೆದ್ದಾರಿಯಲ್ಲಿ 5 ಕಿ.ಮೀ.ಗೆ ಒಂದರಂತೆ ಹಸಿರು ಬಣ್ಣದಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ. ಅಲ್ಲದೇ ಹೆದ್ದಾರಿಯಲ್ಲಿಯೇ ಬಿಳಿ ಬಣ್ಣದಲ್ಲಿ ಆಯಾ ವಾಹನಗಳ ಚಿತ್ರಗಳನ್ನು ಬಿಡಿಸಿದ್ದರೂ ಸಂಚಾರ ನಿಯಮ ಉಲ್ಲಂಘನೆ ಎಗ್ಗಿಲ್ಲದೇ ಸಾಗುತ್ತಿದೆ.

ಕೆಲವೆಡೆ ಭಾರಿ ವಾಹನಗಳು, ಲಾರಿ, ಬಸ್‌ಗಳು ಸೂಚಿತ ಪಥ ಬಿಟ್ಟು ಪಕ್ಕದ ಪಥದಲ್ಲಿ ಸಂಚರಿಸಿದಾಗ ಹಿಂದಿನಿಂದ ವೇಗದಿಂದ ಬರುವ ಕಾರುಗಳು ಅಪಘಾತಕ್ಕೆ ಈಡಾಗುತ್ತಿವೆ. ಇದನ್ನು ತಪ್ಪಿಸುವುದಕ್ಕೇ ಶಿಸ್ತು ಉಲ್ಲಂಘನೆ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುತ್ತಿದೆ.

**

ಡಿಜಿಟಲ್ ಪೇಮೆಂಟ್‌ ಮೂಲಕ ದಂಡ ಸಂಗ್ರಹಿಸುವ ಕುರಿತು ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು.
ಸಿ.ಬಿ. ರಿಷ್ಯಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

**

ಕೆಲವೊಮ್ಮೆ ನಾವು ಬರುವ ಪಥದಲ್ಲೇ ಅಪಘಾತವಾದರೆ ಒಳಪಥದಲ್ಲೇ ಸಾಗಬೇಕಾಗುತ್ತದೆ. ಡಿಜಿಟಲ್ ಪೇಮೆಂಟ್ ಮೂಲಕ ದಂಡ ಪಾವತಿಗೆ ಅವಕಾಶ ನೀಡಬೇಕು.
–ಜಾವೇದ್, ಲಾರಿ ಚಾಲಕ, ಜಮ್ಮ ಮತ್ತು ಕಾಶ್ಮೀರ

**

ಪಥ ಶಿಸ್ತು ಉಲ್ಲಂಘನೆಗೆ ದಂಡ ವಿಧಿಸುವ ವಿಷಯ ನಮಗೆ ಗೊತ್ತೇ ಇಲ್ಲ. ಭಾರಿ ವಾಹನಗಳಿಗಷ್ಟೇ ದಂಡ ವಿಧಿಸಲಾಗುತ್ತಿದೆ. ಕಾರ್‌ ಚಾಲಕರೂ ಶಿಸ್ತು ಉಲ್ಲಂಘಿಸುತ್ತಿದ್ದಾರೆ.
–ರಮಾ ಶಂಕರ್‌, ಲಾರಿ ಚಾಲಕ, ಉತ್ತರ ಪ್ರದೇಶ

**

ಡಿಜಿಟಲ್ ಪೇಮೆಂಟ್‌ ಮೂಲಕ ದಂಡ ಸಂಗ್ರಹಿಸುವ ಕುರಿತು ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು.
–ಸಿ.ಬಿ. ರಿಷ್ಯಂತ್, ಪೊಲೀಸ್ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT