ಸೋಮವಾರ, ಫೆಬ್ರವರಿ 17, 2020
27 °C
ಕೇಂದ್ರ ಸರ್ಕಾರದ ವಿರುದ್ಧ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆ

ಸಮಾನತೆ ಕಿತ್ತು ಹಾಕುವ ಪ್ರಯತ್ನ ಸಲ್ಲದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಹರ: ಎಲ್ಲರಿಗೂ ಸಮಾನ ಹಕ್ಕುಗಳು, ಸಮಾನ ಅವಕಾಶಗಳು ಸಿಗಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇರಬೇಕು ಎಂಬ ಆಶಯಗಳನ್ನು ಇಟ್ಟುಕೊಂಡು ಬಾಬಾ ಸಾಹೇಬ ಅಂಬೇಡ್ಕರ್‌ ಸಂವಿಧಾನ ರಚಿಸಿದರು. ಈಗ ಅದನ್ನು ಕಿತ್ತು ಹಾಕುವ ಪ್ರಯತ್ನಗಳಾಗುತ್ತಿವೆ. ಈ ಪ್ರಯತ್ನ ಸಫಲವಾಗಲು ಬಿಡಬಾರದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ರಾಜನಹಳ್ಳಿಯಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಯಲ್ಲಿ ಪುಣ್ಯಾನಂದ ಶ್ರೀಗಳ ಪ್ರತಿಮೆ ಅನಾವರಣ ಮಾಡಿ ಅವರು ಮಾತನಾಡಿದರು.

ಮುಸ್ಲಿಮರನ್ನು ಗುರಿಯಾಗಿಸಿಟ್ಟುಕೊಂಡು ತರುತ್ತಿರುವ ಕಾಯ್ದೆಗಳು ಮುಸ್ಲಿಮರಿಗಷ್ಟೇ ಅಲ್ಲ, ಎಲ್ಲ ಬಡವರಿಗೆ, ಕಾಡಲ್ಲಿ ಇರುವವರಿಗೆ, ಅಲೆಮಾರಿಗಳಿಗೆ ತೊಂದರೆ ನೀಡಲಿದೆ ಎಂದು ಎಚ್ಚರಿಸಿದರು.

ಜಾತಿಯ ಕಾರಣಕ್ಕೆ ಯಾವೆಲ್ಲ ಸಮುದಾಯಗಳು ಶೋಷಣೆಗೆ ಒಳಗಾಗಿದ್ದಾವೋ ಅವರಿಗೆಲ್ಲ ಅಧಿಕಾರ ಸಿಗಬೇಕು. ಅಭಿವೃದ್ಧಿಯಾಗಬೇಕು. ಈ ಪೀಠಗಳು ಒಂದು ಸಮುದಾಯಕ್ಕೆ ಸೀಮಿತವಾಗದೇ ಹಿಂದುಳಿದಿರುವ ಎಲ್ಲ ವರ್ಗಗಳ ಪೀಠಗಳಾಗಬೇಕು. ಸಾಮಾಜಿಕ, ಧಾರ್ಮಿಕ, ಆರ್ಥಿಕ ಜಾಗೃತಿ ಎಲ್ಲರಲ್ಲಿಯೂ ಬರಬೇಕು. ಅದರಲ್ಲಿಯೂ ಶೋಷಿತ ವರ್ಗಗಳಲ್ಲಿ ಬರಲೇಬೇಕು ಎಂದು ತಿಳಿಸಿದರು.

‘ಜಾತಿ ವ್ಯವಸ್ಥೆಯಿಂದಾಗಿ ಅಸಮಾನತೆ ಸಮಾಜದಲ್ಲಿದೆ. ಕಾಯಕ ಜೀವಿಗಳಿಗೆ ಶಿಕ್ಷಣ ಕೊಡಲಿಲ್ಲ. ಅಕ್ಷರ ಸಂಸ್ಕೃತಿಯಿಂದ ದೂರ ಇಟ್ಟರು. ಹಾಗಾಗಿ ಸ್ವಾತಂತ್ರ್ಯ ಸಿಗುವಾಗ ಶೇ 12ರಷ್ಟು ಮಂದಿ ಮಾತ್ರ ವಿದ್ಯಾವಂತರಿದ್ದರು. ಅಧಿಕಾರದಲ್ಲಿ ಇರಲಿ, ಬಿಡಲಿ ಸಾಮಾಜಿಕ ನ್ಯಾಯದಲ್ಲಿ ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ನೀವು ಕೇಳುತ್ತಿರುವ ಮೀಸಲಾತಿ ಹಕ್ಕಿನ ಹೋರಾಟಕ್ಕೆ ನನ್ನ ಬೆಂಬಲವಿದೆ’ ಎಂದು ಹೇಳೀದರು.

‘ಉಳುವವನೇ ಹೊಲದೊಡೆಯ ಕಾನೂನನ್ನು ಅರಸು ಅವರು ಮಾಡಿದಂತೆ ವಾಸಿಸುವವನೇ ಮನೆಯೊಡೆಯ ಕಾನೂನು ಮಾಡಿದೆ. ಎಸ್‌ಸಿಪಿ, ಟಿಎಸ್‌ಪಿ ತರುವ ಮೂಲಕ ಒಟ್ಟು ಅನುದಾನದಲ್ಲಿ ಶೇ 24.1ನ್ನು ಪರಿಶಿಷ್ಟ ಜಾತಿ, ಪಂಗಡಕ್ಕೆ ಇಡಲೇಬೇಕು ಎಂಬ ನಿಯಮ ಮಾಡಿದೆ. ಇದನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಗುತ್ತಿಗೆಯಲ್ಲೂ ಮೀಸಲಾತಿ ತಂದೆ. ದೇಶಕ್ಕೆ ಸಿಕ್ಕಿದ ಸ್ವಾತಂತ್ರ್ಯ ಸಾರ್ಥಕವಾದರೆ ಎಲ್ಲರಿಗೂ ಓಟಿನ ಹಕ್ಕು ಸಿಕ್ಕಿದರೆ ಸಾಲದು, ಆರ್ಥಿಕ, ಸಾಮಾಜಿಕವಾಗಿ ಸಮಾನರಾಗುವ ಅವಕಾಶ ಸಿಗಬೇಕು’ ಎಂದು ಪ್ರತಿಪಾದಿಸಿದರು.

ಪ್ರಸನ್ನಾನಂದ ಸ್ವಾಮೀಜಿ, ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ವಚನಾನಂದ ಸ್ವಾಮೀಜಿ, ಕನಕ ಗುರುಪೀಠದ ನಿರಂಜನಾನಂದ ಸ್ವಾಮೀಜಿ, ಶಾಸಕರಾದ ಎಸ್. ರಾಮಪ್ಪ, ಅಬ್ದುಲ್‌ ಜಬ್ಬಾರ್‌ ಪಿ.ಟಿ. ಪರಮೇಶ್ವರ ನಾಯ್ಕ್‌, ರಘುಮೂರ್ತಿ, ವಿವಿಧ ಶಾಸಕರು, ಮಾಜಿ ಶಾಸಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು