ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌ ಗುರಿ ತಲುಪಲು ಅನಧಿಕೃತ ದಾರಿ !

Last Updated 4 ಜುಲೈ 2021, 5:12 IST
ಅಕ್ಷರ ಗಾತ್ರ

ದಾವಣಗೆರೆ: ‘ಕೋವಿಡ್‌ ನಿರೋಧಕ ಲಸಿಕೆ ಎರಡನೇ ಡೋಸ್ ಹಾಕಿಸಿಕೊಳ್ಳಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿದ್ದೆ. ಕೋವಿಡ್‌ ಟೆಸ್ಟ್‌ ಮಾಡಿಸುವಂತೆ ತಿಳಿಸಿದರು. ನನಗೆ ಕೊರೊನಾ ಲಕ್ಷಣಗಳಿಲ್ಲ ಎಂದು ಹೇಳಿದೆ. ಪರೀಕ್ಷೆ ಮಾಡಿದವರಿಗಷ್ಟೇ ಲಸಿಕೆ ನೀಡಲಾಗುವುದು ಎಂದು ಒತ್ತಡ ಹಾಕಿದರು. ಕೊನೆಗೆ ಪರೀಕ್ಷೆ ಮಾಡಿಸಿಕೊಂಡೆ. ಆಮೇಲೆ ಲಸಿಕೆ ಹಾಕಿದರು’..

ಇದು ನಿಟುವಳ್ಳಿ ನಿವಾಸಿ ಸರೋಜ ಬಿರಾದಾರ್‌ ಅವರ ಅನುಭವ. ಒಂದು ವಾರದಿಂದ ಇಂಥ ಅನುಭವವು ಲಸಿಕೆ ಹಾಕಿಸಿಕೊಳ್ಳಲು ಬರುತ್ತಿರುವ ಬಹುತೇಕರಿಗೆ ಆಗಿದೆ.

‘ನನ್ನ ತಂದೆ, ತಾಯಿ, ತಮ್ಮ ಎಲ್ಲರೂ ಪರೀಕ್ಷೆ ಮಾಡಿಸಿ ಆನಂತರ ಲಸಿಕೆ ಪಡೆದರು. ಕೋವಿಡ್‌ ಪರೀಕ್ಷೆ ಯಾಕೆ ಎಂದು ಕಾರಣ ಕೇಳಿದರೆ ಜಿಲ್ಲಾಧಿಕಾರಿ, ತಹಶಿಲ್ದಾರ್‌ ಸೂಚನೆ ನೀಡಿದ್ದಾರೆ ಎಂದು ಆರೋಗ್ಯ ಸಿಬ್ಬಂದಿ ಹೇಳುತ್ತಿದ್ದಾರೆ. ಪರೀಕ್ಷೆಗೂ, ಲಸಿಕೆಗೂ ಸಂಬಂಧವೇನು ಎಂದು ಪ್ರಶ್ನಿಸಿದರೆ ಸರಿಯಾಗಿ ಉತ್ತರ ನೀಡುತ್ತಿಲ್ಲ. ಪಾಸಿಟಿವ್‌ ಬಂದವರಿಗೆ ಲಸಿಕೆ ನೀಡಲಾಗುವುದಿಲ್ಲ ಎಂದು ಸಬೂಬು ಹೇಳುತ್ತಾರೆ. ಅತ್ತ ಕೊರೊನಾ ಪರೀಕ್ಷಗೆ ಗಂಟಲುದ್ರವ ನೀಡಿದರೆ ಇತ್ತ ಕೂಡಲೇ ಲಸಿಕೆ ಹಾಕುತ್ತಾರೆ. ಪಾಸಿಟಿವ್‌ ಅಥವಾ ನೆಗೆಟಿವ್‌ ರಿಪೋರ್ಟ್‌ ಬರುವುದೇ ಮರುದಿನ ಇಲ್ಲವೇ ಎರಡು ದಿನ ಬಿಟ್ಟು. ಇದು ಯಾವ ರೀತಿಯ ಸಂಬಂಧ ಎಂಬುದು ಅರ್ಥವಾಗುತ್ತಿಲ್ಲ’ ಎಂದು ಜಯನಗರ ನಿವಾಸಿ ಆನಂದ್‌ ವಿ. ಹಳ್ಳೂರು ದೂರಿದರು.

‘ಹಿಂದೆ ಜಿಲ್ಲೆಯಲ್ಲಿ 1800 ಮಂದಿಯನ್ನು ಪರೀಕ್ಷೆ ಮಾಡುವ ಗುರಿ ಇತ್ತು. ಜಿಲ್ಲೆಯಲ್ಲಿ ಅದನ್ನು ಮೀರಿ ಗುರಿ ಸಾಧಿಸಲಾಗುತ್ತಿತ್ತು. ಆದರೆ ಈಗ ದಿನಕ್ಕೆ 4700ಕ್ಕೂ ಅಧಿಕ ಗುರಿ ನೀಡಲಾಗಿದೆ. ಹಾಗಾಗಿ ಒತ್ತಡ ಹಾಕಿ ಪರೀಕ್ಷೆ ಮಾಡಿಸಬೇಕಾಗುತ್ತದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಒಳಗುಟ್ಟು ಬಿಚ್ಚಿಟ್ಟಿದ್ದಾರೆ.

ಲಸಿಕೆ ಹಾಕಲು ಬರುವವರಿಗೆ ಕೊರೊನಾ ಪರೀಕ್ಷೆ ಮಾಡಿಸಿ ಎಂದು ಅಧಿಕೃತ ಆದೇಶ ಅಥವಾ ಸುತ್ತೋಲೆಗಳಿಲ್ಲ. ಆದರೆ ಮೌಖಿಕ ಸೂಚನೆಗಳಿವೆ. ಹಾಗಾಗಿ ಮಾಡಬೇಕಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಕೊರೊನಾ ನಿರೋಧಕ ಲಸಿಕೆ ಹಾಕಿಸಿಕೊಳ್ಳಲು ಬರುತ್ತಿರುವವರು ಈಗ ಕೋವಿಡ್‌ ಟೆಸ್ಟ್‌ ಇದೆ ಎಂದು ಗೊತ್ತಾಗಿ ಹಿಂಜರಿಯತೊಡಗಿದ್ದಾರೆ. ಕೋವಿಡ್‌ ಟೆಸ್ಟ್‌ ಮಾಡಿಸಿಕೊಂಡಾದರೂ ಲಸಿಕೆ ಹಾಕಿಸಿಕೊಳ್ಳೋದೇ ಎಂದು ತೀರ್ಮಾನಿಸಿ ಬಂದವರು ಕೋವಿಡ್‌ ಟೆಸ್ಟ್‌ಗೆ ಒಮ್ಮೆ, ಲಸಿಕೆಗೆ ಒಮ್ಮೆ ಎರಡು ಬಾರಿ ಸರದಿಯಲ್ಲಿ ನಿಲ್ಲುವಂತಾಗಿದೆ.

ಕಡ್ಡಾಯ ಮಾಡಿದ್ದರೆ ಕ್ರಮ: ಡಿಸಿ

ಎಲ್ಲೂ ಕೊರೊನಾ ಪರೀಕ್ಷೆ ಕಡ್ಡಾಯ ಮಾಡಿಲ್ಲ. ಸರ್ಕಾರದ ಮಾರ್ಗಸೂಚಿ ಪ್ರಕಾರ ಕಡ್ಡಾಯ ಮಾಡಲು ಅವಕಾಶವೂ ಇಲ್ಲ. ಒಂದು ವೇಳೆ ಎಲ್ಲಿಯಾದರೂ ಕಡ್ಡಾಯ ಮಾಡಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸ್ಪಷ್ಟಪಡಿಸಿದ್ದಾರೆ.

ಕೊರೊನಾ ಸೋಂಕು ಕಡಿಮೆ ಮಾಡಲು ಪರೀಕ್ಷೆ ಹೆಚ್ಚಿಸಲಾಗಿದೆ. ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆದರೆ ಲಸಿಕೆ ಹಾಕಬೇಕಿದ್ದರೆ ಪರೀಕ್ಷೆ ಕಡ್ಡಾಯ ಎಂಬುದು ಇಲ್ಲ ಎಂದು ವಿವರಿಸಿದರು.

ಕೋವಿಡ್‌ ಪರೀಕ್ಷೆ ಕಡ್ಡಾಯವಲ್ಲ: ಡಿಎಚ್‌ಒ

ಕೊರೊನಾ ನಿರೋಧಕ ಲಸಿಕೆ ಹಾಕಿಸಿಕೊಳ್ಳಲು ಬರುವವರಿಗೆ ಶೀತಜ್ವರ, ಇನ್ನಿತರ ಲಕ್ಷಣಗಳು ಕಂಡು ಬಂದರೆ ಕೂಡಲೇ ಫಲಿತಾಂಶ ಗೊತ್ತಾಗಲಿ ಎಂಬ ಕಾರಣಕ್ಕೆ ಅಂಥವರಿಗೆ ರ‍್ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ ಮಾಡಲಾಗುತ್ತಿದೆ. ಉಳಿದವರಿಗೆ ಆರ್‌ಟಿಪಿಸಿಆರ್‌ ಟೆಸ್ಟ್‌ ಮಾಡಲು ಅವಕಾಶ ಇದೆ. ಯಾರಿಗೂ ಕಡ್ಡಾಯ ಮಾಡಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕೋಟ್‌

ಒತ್ತಾಯಪೂರ್ವಕವಾಗಿ ನನಗೆ ಕೊರೊನಾ ಪರೀಕ್ಷೆ ಮಾಡಿಸಿದರು. ಲಸಿಕೆಯೂಬೇಡ, ಪರೀಕ್ಷೆಯೂ ಬೇಡ ಎಂದು ನಮ್ಮ ಪಕ್ಕದ ಮನೆಯವರು ವಾಪಸ್ಸಾದರು.

ಸರೋಜ ಬಿರಾದಾರ್, ನಿಟುವಳ್ಳಿ ನಿವಾಸಿ

ಕೊರೊನಾ ಇದ್ದರೆ ಲಸಿಕೆ ಹಾಕಲು ಬರುವುದಿಲ್ಲ ಎನ್ನುತ್ತಾರೆ. ಆದರೆ, ಗಂಟಲು ದ್ರವ ನೀಡಿದ ಕೂಡಲೇ ಲಸಿಕೆ ಹಾಕುತ್ತಾರೆ. ವರದಿ ಬರಲು ಎರಡು ದಿನ ಬೇಕಂತೆ.

ಆನಂದ್‌ ವಿ. ಹಳ್ಳೂರು, ಜಯನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT