ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಂ ವೈದ್ಯರ ನೇಮಕಕ್ಕೆ ಒತ್ತಾಯ

Last Updated 29 ನವೆಂಬರ್ 2022, 5:12 IST
ಅಕ್ಷರ ಗಾತ್ರ

ಸಾಸ್ವೆಹಳ್ಳಿ: ‘ಆರು ತಿಂಗಳಿಂದ ಹೋಬಳಿಯ ಬೆನಕನಹಳ್ಳಿ ಗ್ರಾಮದ ಪಶು ಚಿಕಿತ್ಸಾ ಕೇಂದ್ರದಲ್ಲಿ ಕಾಯಂ ಪಶು ವೈದ್ಯರಿಲ್ಲ. ಚರ್ಮ ರೋಗ, ಕಾಲುಬಾಯಿ ಜ್ವರದಿಂದ ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೇ ಅಪಾರ ಸಂಖ್ಯೆಯಲ್ಲಿ ಜಾನುವಾರು ಸಾಯುತ್ತಿವೆ. ಆದ್ದರಿಂದ ಇಲ್ಲಿಗೆ ಪಶು ವೈದ್ಯರನ್ನು ನೇಮಕ ಮಾಡಿ’ ಎಂದು ಒತ್ತಾಯಿಸಿ ಗ್ರಾಮಸ್ಥರು ಪಶು ಚಿಕಿತ್ಸಾ ಕೇಂದ್ರದ ಎದುರು ಜಾನುವಾರುಗಳೊಂದಿಗೆ ಬಂದು ಪ್ರತಿಭಟಿಸಿದರು.

‘ಹೋಬಳಿಯಲ್ಲಿಯೇ ಈ ಗ್ರಾಮ ದೊಡ್ಡದು. ಇಲ್ಲಿ ಜಾನುವಾರು ಸಂಖ್ಯೆ ಅಧಿಕವಾಗಿದ್ದು ಇಲ್ಲಿನ ಪಶು ಚಿಕಿತ್ಸಾ ಕೇಂದ್ರಕ್ಕೆ ಅಕ್ಕಪಕ್ಕದ ಗ್ರಾಮಗಳಾದ ಹುಣಸೆಹಳ್ಳಿ, ಚಿಕ್ಕಬಾಸುರು, ವಿಜಯಪುರ, ಕಮ್ಮಾರಗಟ್ಟೆ, ಗಂಟ್ಯಾಪುರ, ತಕ್ಕನಹಳ್ಳಿ ಸೇರಿದಂತೆ ವಿವಿಧ ಭಾಗಗಳಿಂದ ನಿತ್ಯವೂ ರೋಗದಿಂದ ನರಳುವ ಜಾನುವಾರನ್ನು ಕರೆ ತಂದು ಪಶು ಆಸ್ಪತ್ರೆ ಮುಂದೆ ಕಾಯುವುದೇ ಇಲ್ಲಿನ ರೈತರ ಕಾಯಕವಾಗಿದೆ’ ಎಂದು ಗ್ರಾಮದ ಲಿಂಗರಾಜು ಬೇಸರ
ವ್ಯಕ್ತಪಡಿಸಿದರು.

‘ಇಲ್ಲಿ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಶಶಿಕುಮಾರ್ ಎಂಬ ಪಶು ವೈದ್ಯರು ಆರು ತಿಂಗಳ ಹಿಂದೆಯೇ ವರ್ಗಾವಣೆಯಾಗಿ ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಎರಡು ಹುದ್ದೆಗಳು ಖಾಲಿ ಇವೆ. ಲಿಂಗಾಪುರ ಪಶು ಚಿಕಿತ್ಸಾ ಕೇಂದ್ರದಿಂದ ಪಶು ವೈದ್ಯರನ್ನು ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ. ಅವರು ಸರ್ಕಾರದ ಆದೇಶದಂತೆ ಹಳ್ಳಿಗಳ ಮೇಲೆ ಜಾನುವಾರಿಗೆ ಲಸಿಕೆ ನೀಡಲು ತೆರಳುತ್ತಾರೆ. ದಿನವಿಡೀ ಆಸ್ಪತ್ರೆಗೆ ಬೀಗ ಹಾಕಲಾಗಿರುತ್ತದೆ. ರೋಗಗ್ರಸ್ತ ಜಾನುವಾರನ್ನು ಕರೆ ತಂದರೆ ರೈತರು ಇಂಜೆಕ್ಷನ್‌ಗಾಗಿ ದಿನವಿಡೀ ಕಾಯುವ ಅನಿವಾರ್ಯತೆ ಇದೆ. ರೈತರು ಖಾಸಗಿ ಪಶು ವೈದ್ಯರಿಗೆ ದುಬಾರಿ ವೆಚ್ಚ ನೀಡಲಾಗದ ಕಾರಣ ಜಾನುವಾರು ಅಸು ನೀಗುತ್ತಿವೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣ ಇಲ್ಲಿನ ಪಶು ಆಸ್ಪತ್ರೆಯಲ್ಲಿ ಖಾಲಿ ಇರುವ ಎರಡು ಹುದ್ದೆಗಳನ್ನು ಭರ್ತಿ ಮಾಡಿ ಜಾನುವಾರು ರೋಗ ನಿಯಂತ್ರಣಗೊಳಿಸಬೇಕು. ಪಶು ವೈದ್ಯರ ನೇಮಕ ವಿಳಂಬವಾದಲ್ಲಿ, ತಾಲ್ಲೂಕು ಆಡಳಿತ ಕಚೇರಿಯ ಎದುರು ಜಾನುವಾರುಗಳೊಂದಿಗೆ ಬಂದು ಧರಣಿ ಮಾಡಲಾಗುವುದು’ ಎಂದು ಎಚ್ಚರಿಸಿದ್ದಾರೆ.

‘ಖಾಲಿಯಾಗಿರುವ ಹುದ್ದೆಗಳಿಗೆ ಸರ್ಕಾರವೇ ನೇಮಕಾತಿ ಮಾಡಬೇಕು ಅಥವಾ ವರ್ಗಾವಣೆಯಾಗಬೇಕು. ತಾತ್ಕಾಲಿಕವಾಗಿ ಅರಕೆರೆಯ ವೈದ್ಯರು ಹೆಚ್ಚುವರಿಯಾಗಿ ಕೆಲಸ ಮಾಡುತ್ತಿದ್ದಾರೆ. ಗಂಭೀರ ಸಮಸ್ಯೆ ಇದ್ದಾಗ ಅವರಿಗೆ ಮಾಹಿತಿ ನೀಡಿದರೆ ಸ್ಥಳಕ್ಕೆ ಬರುತ್ತಾರೆ. ಈಗ ಹಿರಿಯ ಪಶು ವೈದ್ಯಕೀಯ ಪರೀಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಇದರ ಸದುಪಯೋಗ ಪಡಿಸಿಕೊಳ್ಳಬಹುದು’ ಎಂದು ತಾಲ್ಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ. ವಿಶ್ವ ನಟೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಲಿಂಗ ನಾಯ್ಕ, ಗಣೇಶಪ್ಪ, ಶಿವಲಿಂಗಪ್ಪ, ಗಜೇಂದ್ರ ಗೌಡ, ವೆಂಕಟೇಶ್, ಲಕ್ಷ್ಮಣ ನಾಯ್ಕ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT