ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ: ವಿ.ಎಸ್.ಉಗ್ರಪ್ಪ

ರಾಮಲಿಂಗೇಶ್ವರ ಸ್ವಾಮಿಗಳ ಮುಳ್ಳುಗದ್ದುಗೆ ಉತ್ಸವದಲ್ಲಿ ವಿ.ಎಸ್.ಉಗ್ರಪ್ಪ
Published 10 ಮಾರ್ಚ್ 2024, 6:01 IST
Last Updated 10 ಮಾರ್ಚ್ 2024, 6:01 IST
ಅಕ್ಷರ ಗಾತ್ರ

ಬಸವಾಪಟ್ಟಣ: ‘ಭಾರತ ಸಂಪೂರ್ಣ ಸಾಕ್ಷರತೆಯನ್ನು ಸಾಧಿಸಿದಾಗ ಮಾತ್ರ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ಕಾಂಗ್ರೆಸ್‌ ಮುಖಂಡ ವಿ.ಎಸ್‌.ಉಗ್ರಪ್ಪ ಹೇಳಿದರು.

ಶನಿವಾರ ಮುಂಜಾನೆ ಸಮೀಪದ ಹರನಹಳ್ಳಿ ಕೆಂಗಾಪುರದ ಹೊರಮಠದಲ್ಲಿ ನಡೆದ ರಾಮಲಿಂಗೇಶ್ವರ ಸ್ವಾಮಿ ಮುಳ್ಳುಗದ್ದುಗೆ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಹಸ್ರಾರು ವರ್ಷಗಳಿಂದ ಭಾರತೀಯ ಸಮಾಜ ಶಿಕ್ಷಣದಿಂದ ವಂಚಿತವಾಗಿದ್ದು, ಶಿಕ್ಷಣದ ಅಭಿವೃದ್ಧಿಗೆ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಕೈಗೊಂಡಿವೆ. ಆದರೂ ಈಗಲು ಗ್ರಾಮೀಣ ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದ ಸಾಕ್ಷರತೆಯ ಗುರಿಯನ್ನು ಸಾಧಿಸಲು ಸಾಧ್ಯವಾಗಿಲ್ಲ. ಇಲ್ಲಿನ ರಾಮ ಲಿಂಗೇಶ್ವರ ಸ್ವಾಮೀಜಿ ಅವರು ಇಂತಹ ಬೇಚರಾಕ್‌ ಗ್ರಾಮದಲ್ಲಿ ಬೃಹತ್‌ ವಿದ್ಯಾ ಸಂಸ್ಥೆ ಸ್ಥಾಪಿಸಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಶ್ರಮಿಸುತ್ತಿದ್ದಾರೆ’ ಎಂದು ಶ್ಲಾಘಿಸಿದರು.

‘ಇಲ್ಲಿ ವಸತಿಯುತ ಶಾಲೆ– ಕಾಲೇಜು ಸ್ಥಾಪಿಸಿ ಸಹಸ್ರಾರು ಮಕ್ಕಳಿಗೆ ಉಚಿತ ವಿದ್ಯಾರ್ಥಿನಿಲಯ ತೆರೆದು ವಿದ್ಯಾರ್ಥಿಗಳು ನೆಮ್ಮದಿಯಿಂದ ವಿದ್ಯಾಭ್ಯಾಸ ಮಾಡಲು ನೆರವಾಗಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿಸದೇ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ ಅವರನ್ನು ಭಾರತದ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಮಾಡಬೇಕು’ ಎಂದು ಉಗ್ರಪ್ಪ ಹೇಳಿದರು.

ಜಾನಪದ ಮೇಳದ ಸಂಭ್ರಮದಲ್ಲಿ ಹೊರಟ ಮುಳ್ಳುಗದ್ದುಗೆಯ ಮೆರವಣಿಗೆ ಒಂದು ಕಿ.ಮೀ ಸಾಗಿ, ಕೆಂಗಾಪುರದ ಒಳ ಮಠವನ್ನು ತಲುಪಿದಾಗ ರಾಮಲಿಂಗೇಶ್ವರಸ್ವಾಮೀಜಿಯವರು ಕಾರ್ಮೋಡ ಕವಿದೀತು,ಜಲರಾಶಿ ತುಂಬೀತು, ಆಕಾಶದಿಂದ ಮುತ್ತುಗಳು ಉದುರ್ಯಾವು ಎಂಬ ಕಾರ್ಣೀಕ ನುಡಿದರು.

ಶನಿವಾರ ಮಧ್ಯಾಹ್ನ ಮಠದಲ್ಲಿ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿದ ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವಸ್ವಾಮೀಜಿಯವರು, ಶಿವರಾತ್ರಿಯ ನಿಜವಾದ ಅರ್ಥವನ್ನು ವಿವರಿಸಿ, ಪ್ರತಿಯೊಬ್ಬರೂ ಭಕ್ತಿ ಶ್ರದ್ಧೆ, ಪ್ರಾಮಾಣಿಕತೆ, ಸಮಾನತೆಯನ್ನು ಬೆಳೆಸಿಕೊಂಡು ಬಸವಣ್ಣನವರಂತೆ ವರ್ಗ ರಹಿತ ಸಮಾಜದ ರಚನೆಗೆ ಕಾರಣರಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಮಲಿಂಗೇಶ್ವರಸ್ವಾಮೀಜಿಯವರು ಮಾತನಾಡಿ, 48 ವರ್ಷಗಳಿಂದ ನಮ್ಮ ಮಠದಲ್ಲಿ ಆಡಂಬರದ ಮದುವೆಗಳಿಗೆ ಕಡಿವಾಣ ಹಾಕಲು ಉಚಿತ ಸಾಮೂಹಿಕ ಮದುವೆಗಳನ್ನು ನಡೆಸುತ್ತಿದ್ದೇವೆ. ವಧೂ ವರರಿಗೆ ಮಾಂಗಲ್ಯ ಮತ್ತು ಉಡುಪುಗಳನ್ನು ಉಚಿತವಾಗಿ ನೀಡುತ್ತಿದ್ದೇವೆ. ಆದರೆ ಇತ್ತೀಚೆಗೆ ಸಾರ್ವಜನಿಕರು ಇತಹ ಮದುವೆಗಳಿಗೆ ಪ್ರೋತ್ಸಾಹ ನೀಡದೇ, ವೈಭೋಗದ ಮದುವೆಗಳ ಕಡೆಗೆವಾಲುತ್ತಿರುವುದು ದುರದೃಷ್ಠಕರ ಎಂದರು.

ಸರ್ದಾರ್‌ ಸೇವಾಲಾಲ್‌ ಸ್ವಾಮೀಜಿ ಮಾತನಾಡಿ, ರಾಮಲಿಂಗೇಶ್ವರ ಸ್ವಾಮೀಜಿಯವರ ಸಾಮಾಮಾಜಿಕ ಮತ್ತು ಶೈಕ್ಷಣಿಕ ಸೇವೆ ದೇಶಕ್ಕೆ ಮಾದರಿಯಾಗಿದೆ. ಜನತೆ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವುದು ಮತ್ತು ತಮ್ಮಮನೆಯ ಸದಸ್ಯರ ಮದುವೆಗಳನ್ನು ಇಂತಹ ಉಚಿತ ಸಾಮೂಹಿಕ ವಿವಾಹಗಳಲ್ಲಿ ನೆರವೇರಿಸುವುದರ ಮೂಲಕ ಸ್ವಾಮೀಜಿಯವರಿಗೆ ಭಕ್ತಿ ಸಮರ್ಪಣೆ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಮುಖಂಡರಾದ ಕೆ.ಪಿ.ಓಂಕಾರನಾಯ್ಕ್‌, ಪಿ.ಮಂಜಪ್ಪ, ಮಂಜುನಾಥಜಾಧವ್‌, ಆಡಳಿತಾಧಿಕಾರಿ ಎಚ್‌.ಆರ್‌.ವಿಜಯಕುಮಾರ್‌ ಹಾಗೂ ಸಹಸ್ರಾರು ಭಕ್ತರು ಭಾಗವಹಿಸಿದ್ದರು. ಬಿ.ಇ.ಡಿ.ಕಾಲೇಜು ಪ್ರಾಂಶುಪಾಲ ಎಚ್‌.ಎಸ್‌.ನಾಗರಾಜ್‌ ಕಾರ್ಯಕ್ರಮ ನಿರೂಪಿಸಿದರು.

ಬಸವಾಪಟ್ಟಣ ಸಮೀಪದ ಹರನಹಳ್ಳಿ ಕೆಂಗಾಪುರದ ರಾಮಲಿಂಗೇಶ್ವರ ಮಠದಲ್ಲಿ ಶನಿವಾರ ನಡೆದ ಉಚಿತ ಸಾಮೂಹಿಕ ವಿವಾಹದಲ್ಲಿ ಪಾಂಡೋಮಟ್ಟಿಯ ಗುರುಬಸವಸ್ವಾಮೀಜಿ ಸರ್ದಾರ್ ಸೇವಾಲಾಲ್ ಸ್ವಾಮೀಜಿ ರಾಮಲಿಂಗೇಶ್ವರ ಸ್ವಾಮೀಜಿಯವರು ನೂತನ ವಧೂ ವರರನ್ನು ಆಶೀರ್ವದಿಸಿದರು
ಬಸವಾಪಟ್ಟಣ ಸಮೀಪದ ಹರನಹಳ್ಳಿ ಕೆಂಗಾಪುರದ ರಾಮಲಿಂಗೇಶ್ವರ ಮಠದಲ್ಲಿ ಶನಿವಾರ ನಡೆದ ಉಚಿತ ಸಾಮೂಹಿಕ ವಿವಾಹದಲ್ಲಿ ಪಾಂಡೋಮಟ್ಟಿಯ ಗುರುಬಸವಸ್ವಾಮೀಜಿ ಸರ್ದಾರ್ ಸೇವಾಲಾಲ್ ಸ್ವಾಮೀಜಿ ರಾಮಲಿಂಗೇಶ್ವರ ಸ್ವಾಮೀಜಿಯವರು ನೂತನ ವಧೂ ವರರನ್ನು ಆಶೀರ್ವದಿಸಿದರು
ಬಸವಾಪಟ್ಟಣ ಸಮೀಪದ ಹರನಹಳ್ಳಿ ಕೆಂಗಾಪುರದ ರಾಮಲಿಂಗೇಶ್ವರ ಮಠದಲ್ಲಿ ಶನಿವಾರ ಮುಂಜಾನೆ ಮುಳ್ಳುಗದ್ದುಗೆ ಉತ್ಸವವನ್ನು ಉದ್ಘಾಟಿಸಿದ ರಾಜ್ಯಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪನವರನ್ನು ರಾಮಲಿಂಗೇಶ್ವರ ಸ್ವಾಮೀಜಿ ಅಭಿನಂದಿಸಿದರು
ಬಸವಾಪಟ್ಟಣ ಸಮೀಪದ ಹರನಹಳ್ಳಿ ಕೆಂಗಾಪುರದ ರಾಮಲಿಂಗೇಶ್ವರ ಮಠದಲ್ಲಿ ಶನಿವಾರ ಮುಂಜಾನೆ ಮುಳ್ಳುಗದ್ದುಗೆ ಉತ್ಸವವನ್ನು ಉದ್ಘಾಟಿಸಿದ ರಾಜ್ಯಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪನವರನ್ನು ರಾಮಲಿಂಗೇಶ್ವರ ಸ್ವಾಮೀಜಿ ಅಭಿನಂದಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT