ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿ ಸಮುದಾಯಕ್ಕೆ ದೊರೆಯದ ಪ್ರಾತಿನಿಧ್ಯ: ಸ್ವಾಮೀಜಿ ಸಭೆ

ಬೆಂಗಳೂರಿನಲ್ಲಿ ಇಂದು ಮತ್ತೊಂದು ಸುತ್ತಿನ ಸಭೆಯಲ್ಲಿ ನಿರ್ಧಾರ ಪ್ರಕಟ
Published 15 ಏಪ್ರಿಲ್ 2024, 16:30 IST
Last Updated 15 ಏಪ್ರಿಲ್ 2024, 16:30 IST
ಅಕ್ಷರ ಗಾತ್ರ

ದಾವಣಗೆರೆ: ಲೋಕಸಭಾ ಚುನಾವಣೆಯ ಟಿಕೆಟ್‌ ಹಂಚಿಕೆಯಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರಾತಿನಿಧ್ಯ ದೊರೆತಿಲ್ಲ ಎಂಬ ಕಾರಣದಿಂದ ಅಸಮಾಧಾನಗೊಂಡಿರುವ ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಅವರೊಂದಿಗೆ ಸಮುದಾಯದ ಮುಖಂಡರು ಭಾನುವಾರ ಸಭೆ ನಡೆಸಿದರು.

ಪ್ರಮುಖ ಪಕ್ಷಗಳು ಪಂಚಮಸಾಲಿ ಸಮುದಾಯವನ್ನು ಮತ ಬ್ಯಾಂಕ್‌ ಆಗಿ ಬಳಸಿಕೊಳ್ಳುತ್ತಿವೆ. ಟಿಕೆಟ್‌ ಹಂಚಿಕೆಯಲ್ಲಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿಲ್ಲ ಎಂದು ಸ್ವಾಮೀಜಿ ವಿವಿಧ ಪಕ್ಷಗಳ ಮುಖಂಡರ ವಿರುದ್ಧ ಅಸಮಾಧಾನಗೊಂಡಿದ್ದರು. ಇದು ಲೋಕಸಭಾ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಬಿಜೆಪಿಯ ಕೇಂದ್ರ ಮುಖಂಡರು ಸ್ವಾಮೀಜಿ ಮನವೊಲಿಸುವ ಪ್ರಯತ್ನ ನಡೆಸಿದ್ದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಹರಿಹರದ ಪೀಠದಲ್ಲಿ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಅವರೊಂದಿಗೆ ಈ ಸಭೆ ನಡೆಸಲಾಯಿತು.

ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವಲ್ಲಿ ಆಗಿರುವ ಅನ್ಯಾಯದ ಕುರಿತು ಸ್ವಾಮೀಜಿ ತಳೆದಿರುವ ನಿಲುವಿಗೆ ಮುಖಂಡರು ಬೆಂಬಲ ನೀಡಿದರು. ‘ಈ ನಿಟ್ಟಿನಲ್ಲಿ ನಮ್ಮ ನಿರ್ಧಾರವೇ ಅಂತಿಮ ಎಂಬ ತೀರ್ಮಾನಕ್ಕೆ ಎಲ್ಲ ಮುಖಂಡರೂ ಬದ್ಧರಾಗಿದ್ದಾರೆ’ ಎಂದು ವಚನಾನಂದ ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜಕೀಯ ಪ್ರಾತಿನಿಧ್ಯದ ವಿಷಯದಲ್ಲಿ ಸಮುದಾಯಕ್ಕೆ ಅನ್ಯಾಯ ಆಗಿರುವುದು ನಿಜ. ಈ ಬಗ್ಗೆ ಸ್ವಾಮೀಜಿ ತಾಳುವ ನಿಲುವನ್ನು ಎಲ್ಲರೂ ಬೆಂಬಲಿಸೋಣ ಎಂಬ ನಿರ್ಧಾರ ಕೈಗೊಳ್ಳಲಾಯಿತು. ಲೋಕಸಭಾ ಚುನಾವಣೆಯಲ್ಲಿ ಸಮುದಾಯದ ಅಭ್ಯರ್ಥಿಗಳು ಸ್ಪರ್ಧಿಸಿರುವ ಕಡೆ ಅವರನ್ನು ಪಕ್ಷಾತೀತವಾಗಿ ಬೆಂಬಲಿಸುವ ತೀರ್ಮಾನ ಕೈಗೊಳ್ಳಲಾಯಿತು’ ಎಂದು ಅವರು ಹೇಳಿದರು.

ರಾಜ್ಯದ 16 ಜಿಲ್ಲೆಗಳಲ್ಲಿ ಪಂಚಮಸಾಲಿ ಸಮುದಾಯದ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಪದಾಧಿಕಾರಿಗಳು, ಯುವ ಘಟಕ, ಮಹಿಳಾ ಘಟಕ, ಹರ ಘಟಕ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸ್ವಾಮೀಜಿ ಸಭೆ ನಡೆಸಿದರು. ಬಿಜೆಪಿಯ ಪ್ರಮುಖ ನಾಯಕರು ವಿಡಿಯೊ ಸಂವಾದದ ಮೂಲಕವೂ ಭಾಗವಹಿಸಿದ್ದರು.

‘ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಬಿಜೆಪಿಯ ಪ್ರಮುಖ ನಾಯಕರು ಮತ್ತೆ ಮಾತುಕತೆಗೆ ಒಪ್ಪಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಅಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಸ್ವಾಮೀಜಿ ತಿಳಿಸಿದರು.

ಸಮುದಾಯದ ನಿಲುವು ಲೋಕಸಭಾ ಚುನಾವಣೆಯಲ್ಲಿ ಪರಿಣಾಮ ಬೀರಬಹುದು ಎಂಬ ಆತಂಕದಲ್ಲಿರುವ ರಾಜ್ಯ ಬಿಜೆಪಿ ನಾಯಕರು ಕೇಂದ್ರ ನಾಯಕರ ಸೂಚನೆ ಮೇರೆಗೆ ಸ್ವಾಮೀಜಿ ಮನವೊಲಿಸಲು ಕಸರತ್ತು ನಡೆಸಿದ್ದಾರೆ. ಅದರ ಭಾಗವಾಗಿ ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT