ಭಾನುವಾರ, ಸೆಪ್ಟೆಂಬರ್ 19, 2021
28 °C

ಕೆಆರ್‌ಎಸ್‌ ಪಕ್ಷದ ಕಾರ್ಯಕರ್ತರ ಮೇಲೆ ದೌರ್ಜನ್ಯ: ಎಸ್‌ಪಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಪೊಲೀಸರ ದಬ್ಬಾಳಿಕೆ ಮತ್ತು ದೌರ್ಜನ್ಯದ ವಿರುದ್ಧ ದೂರು ನೀಡಲು ಹೋದ ಕೆಆರ್‌ಎಸ್‌ ಪಕ್ಷದ ಪದಾಧಿಕಾರಿಗಳನ್ನು ಸುಳ್ಳು ಕೇಸ್‌ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಕೆಆರ್‌ಎಸ್‌ ಪಕ್ಷದಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಅವರಿಗೆ ದೂರು ನೀಡಲಾಗಿದೆ.

ದಾವಣಗೆರೆಯ ಆಸ್ಪತ್ರೆಯೊಂದರಲ್ಲಿ ವ್ಯಾಕ್ಸಿನ್ ಕೊಡುವಲ್ಲಿ ಆಗುತ್ತಿದ್ದ ಅವ್ಯವಹಾರ, ಅವ್ಯವಸ್ಥೆ, ಮತ್ತು ಬೆಳಿಗ್ಗೆ ಐದು ಗಂಟೆಯಿಂದ ಕಾಯುತ್ತಿದ್ದವರಿಗೆ ಕೊಡದೆ ಬೇರೆಯವರಿಗೆ ಲಸಿಕೆ ನೀಡುತ್ತಿರುವ ಬಗ್ಗೆ ವೈದ್ಯಾಧಿಕಾರಿಗಳ ಗಮನಕ್ಕೆ ತರಲು ವಿಡಿಯೊ ಮಾಡಲಾಗುತ್ತಿತ್ತು. ಅಲ್ಲಿಯೇ ಇದ್ದ ಪೊಲೀಸರು ದಾಂಧಲೆ ಮಾಡಿ, ಅವರ ಫೋನ್ ಕಸಿದುಕೊಂಡು, ವಿಡಿಯೊ ಡಿಲೀಟ್ ಮಾಡಿ, ಪೋಲಿಸ್ ಠಾಣೆಗೆ ಕರೆದುಕೊಂಡು ಹೋಗಿ ಅವಚ್ಯ ಬೈಗುಳಗಳಿಂದ ನಿಂದಿಸಿ, ಬೆದರಿಸಿದ್ದಾರೆ. ಪೊಲಿಸರೇ ಸ್ವಯಂ ಮುಚ್ಚಳಿಕೆ ಬರೆದುಕೊಂಡು ಸಹಿ ಮಾಡಿಸಿಕೊಂಡು ಕಳುಹಿಸಿದ್ದಾರೆ. ಈ ಬಗ್ಗೆ ದೂರು ನೀಡಲು ಕೆಟಿಜೆ ನಗರ ಪೊಲೀಸ್‌ ಠಾಣೆಗೆ ಕೆಆರ್‌ಎಸ್‌ ಪಕ್ಷದ ಯುವ ಘಟಕ ಹೋದರೆ ದೂರು ತೆಗೆದುಕೊಳ್ಳಲು ವಿಳಂಬ ಮಾಡಿದ್ದಲ್ಲದೇ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಮತ್ತು ಸುಲಿಗೆ ಹೆಸರಿನಲ್ಲಿ ಸುಳ್ಳು ಕೇಸ್ ಮಾಡಿ ರಾತ್ರಿಯೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ದೂರಲ್ಲಿ ತಿಳಿಸಲಾಗಿದೆ.

ಕೆಟಿಜೆ ನಗರ ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಹಾಗೂ ಸಬ್‌ಇನ್‌ಸ್ಪೆಕ್ಟರ್‌ ತಮ್ಮ ಕರ್ತವ್ಯ ಲೋಪ ಮತ್ತು ದುರ್ನಡತೆಯ ಪ್ರಕರಣವನ್ನು ಮುಚ್ಚಿಕೊಳ್ಳುವ ಕಾರಣಕ್ಕಾಗಿ ಪಿತೂರಿ ಮೂಲಕ ದಾಖಲಿಸಿರುವ ಸುಳ್ಳು ಕೇಸು ಎಂದು ಸಾಕ್ಷ್ಯಾಧಾರಗಳ ಸಹಿತ ವಿವರಿಸಿದ್ದಾರೆ.

ತನಿಖೆ ನಡೆಸುವುದಾಗಿ ಎಸ್‌ಪಿ ಭರವಸೆ ನೀಡಿದ್ದಾರೆ. ಸುಳ್ಳು ಪ್ರಕರಣಗಳಿಗೆ ಕೆಆರ್‌ಎಸ್‌. ಪಕ್ಷದ ಕಾರ್ಯಕರ್ತರು ಹೆದರುವುದಿಲ್ಲ. ರಾಜಕೀಯ ಮತ್ತು ಸಾಮಾಜಿಕವಾಗಿ ವ್ಯವಸ್ಥೆಯನ್ನು ಸುಧಾರಿಸಲು ಮಾಡುತ್ತಿರುವ ಹೋರಾಟವನ್ನು ನಿಲ್ಲಿಸುವುದಿಲ್ಲ. ಕೆಟಿಜೆ ನಗರ ಠಾಣೆಯ ಪೊಲೀಸರು ಸತ್ಯವಂತರು, ನ್ಯಾಯವಂತರು, ಪ್ರಾಮಾಣಿಕರೂ ಆಗಿದ್ದಲ್ಲಿ ಅವರು ಮಾಡುತ್ತಿರುವ ಸುಳ್ಳು ಆರೋಪಗಳನ್ನು ಸಾಬೀತು ಪಡಿಸಬೇಕು ಎಂದು ಯುವಘಟಕದ ಅಧ್ಯಕ್ಷ ರಘು ಜಾಣಗೆರೆ ಮತ್ತು ಸದಸ್ಯರು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.