ಸೋಮವಾರ, ಜೂನ್ 21, 2021
30 °C
ಕೊರೊನಾ ಕಾಲದಲ್ಲಿ ಸಮಾಜ ಸೇವೆ ಮಾಡುತ್ತಿರುವ ಐಟಿಐ ವಿದ್ಯಾರ್ಥಿನಿ ಹಬೀಬಾ ಉನ್ನಿಸಾ

ಜಂಬೋ ಸಿಲಿಂಡರ್‌ ಒಯ್ದು ನೀಡಿದ ವಾಲಿಬಾಲ್‌ ಆಟಗಾರ್ತಿ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕಾಡಜ್ಜಿಯ ಮಹಿಳೆಗೆ ಭಾನುವಾರ ತುರ್ತಾಗಿ ಆಮ್ಲಜನಕ ಬೇಕಿತ್ತು. ಯುವತಿಯೊಬ್ಬರು ಜಂಬೋ ಸಿಲಿಂಡರ್‌ ಎಲ್ಲಿ ಸಿಗುತ್ತದೆ ಎಂದು ಹುಡುಕಾಡಿ ಪತ್ತೆ ಹಚ್ಚಿ, ತನ್ನ ಸಹೋದರನ ಬೈಕ್‌ನಲ್ಲಿ ಒಯ್ದು ನೀಡಿದರು. ಸೋಮವಾರ ಎಸ್‌ಎಸ್‌ ಹೈಟೆಕ್‌ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ರಕ್ತ ಬೇಕು ಎಂದಾಗ ತನ್ನ ಸ್ನೇಹಿತರನ್ನು ಕೂಡಲೇ ಕರೆದುಕೊಂಡು ಹೋಗಿ ರಕ್ತ ಕೊಡಿಸಿದರು.

ಕೊರೊನಾ ಕಾಲದಲ್ಲಿ ಈ ರೀತಿ ಸಮಾಜ ಸೇವೆಗೆ ಇಳಿದವರು ಐಟಿಐ ವಿದ್ಯಾರ್ಥಿನಿ, ಅಂತರರಾಷ್ಟ್ರೀಯ ವಾಲಿಬಾಲ್‌ ಆಟಗಾರ್ತಿ, ಟಿಕಾಂಡೊ ಆಟಗಾರ್ತಿ (ಮಾರ್ಷಲ್ ಆರ್ಟ್‌) ಹಬೀಬಾ ಉನ್ನಿಸಾ.

2017ರಲ್ಲಿ ಶ್ರೀಲಂಕಾದಲ್ಲಿ ನಡೆದ ಅಂತರರಾಷ್ಟ್ರೀಯ ವಾಲಿಬಾಲ್‌ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ತಂಡವು ಚಿನ್ನದ ಪದಕ ಪಡೆಯುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.

‘ಕ್ರೀಡೆಯಲ್ಲಿ ಭಾರತಕ್ಕೆ ಹೆಸರು ತರಬೇಕು. ಪೊಲೀಸ್‌ ಇಲಾಖೆಗೆ ಸೇರಿ ದೇಶ ಸೇವೆ ಮಾಡಬೇಕು ಎಂಬ ಕನಸು ಇಟ್ಟುಕೊಂಡಿದ್ದೇನೆ. ಸಂಕಷ್ಟದಲ್ಲಿ ಇರುವವರಿಗೆ ಸ್ಪಂದಿಸುವ ಸಮಾಜ ಸೇವೆಯನ್ನು ಜೀವನ ಪರ್ಯಂತ ಮುಂದುವರಿಸುತ್ತೇನೆ’ ಎಂದು ಹಬೀಬಾ ಉನ್ನಿಸಾ ‘ಪ್ರಜಾವಾಣಿ’ ಜತೆ ಮುಂದಿನ ಗುರಿ ಹಂಚಿಕೊಂಡರು.

‘ಆಟೋ ಓಡಿಸಿ ಜೀವನ ನಡೆಸುವ ಮಹಮ್ಮದ್‌ ಜಾಬೀರ್‌ಸಾಬ್‌ ಅವರ ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಒಟ್ಟು ಆರು ಮಂದಿಯಲ್ಲಿ ಹಬೀಬಾ ಉನ್ನಿಸಾ ಐದನೇಯವರು. ಕಷ್ಟಪಟ್ಟು ಓದುತ್ತಿರುವ ಜತೆಗೆ ಯುವ ಕಾಂಗ್ರೆಸ್‌ ಜತೆ ಗುರುತಿಸಿಕೊಂಡಿದ್ದಾರೆ. ಯುವಕಾಂಗ್ರೆಸ್‌ ದಕ್ಷಿಣ ಕ್ಷೇತ್ರದ ಉಪಾಧ್ಯಕ್ಷರಾಗಿದ್ದಾರೆ. ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಉತ್ಸಾಹ ಇರುವವರು. ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ’ ಎಂದು ಟಿ. ಜಪ್ಪು ಅವರು ತಿಳಿಸಿದರು.

‘ಹಬೀಬಾ ಉನ್ನಿಸಾ ಜನರ ಸಂಕಷ್ಟಕ್ಕೆ ಸ್ಪಂದಿಸುವ ಸೂಕ್ಷ್ಮ ಮನಸ್ಸಿನವರು. ಅವರಿಗೆ ಆಮ್ಲಜನಕ ಸಿಲಿಂಡರ್‌ ಬೇಕು ಎಂದು ನನ್ನನ್ನು, ಉತ್ತರ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ರಫೀಕ್‌ ಅವರನ್ನು ಸಂಪರ್ಕಿಸಿದ್ದರು. ಎಲ್ಲಿ ಸಿಗುತ್ತದೆ ಎಂದು ಮಾಹಿತಿ ನೀಡಿದಾಗ ಹಬೀಬಾ ಅಲ್ಲಿಗೆ ಹೋಗಿ ತಗೊಂಡು ಮುಟ್ಟಿಸಿದ್ದಾರೆ. ಅದರ ವಿಡಿಯೊ ಈಗ ಹರಿದಾಡಿದೆ’ ಎಂದು ಜಿಲ್ಲಾ ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಎಲ್‌.ಎಚ್‌. ಸಾಗರ್‌ ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು