ಮಂಗಳವಾರ, ಜನವರಿ 18, 2022
15 °C
ಕೋವಿಡ್ ನಿಯಂತ್ರಣಕ್ಕೆ ಹಲವು ನಿರ್ಬಂಧಗಳು ಜಾರಿ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ವಾರಾಂತ್ಯದ ಕರ್ಫ್ಯೂ: ಶನಿವಾರ ಶಾಲೆಯೂ ಇರಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸರ್ಕಾರದ ಅಧಿಸೂಚನೆಯಂತೆ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲಾಗಿದೆ. ಶನಿವಾರ ಶಾಲಾ, ಕಾಲೇಜುಗಳು ಕೂಡ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಓಮೈಕ್ರಾನ್‌, ಕೊರೊನಾ ನಿಯಂತ್ರಣ ಕ್ರಮಗಳ ಬಗ್ಗೆ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ವಿವರ ನೀಡಿದರು.

‘ನೂತನ ಮಾರ್ಗಸೂಚಿಯು ಜ.19ರ ಬೆಳಿಗ್ಗೆ 5ರವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ರೋಗಿಗಳನ್ನು  ಆಸ್ಪತ್ರೆಗೆ ದಾಖಲಿಸುವುದೂ ಸೇರಿ ತುರ್ತು ಸೇವೆಯ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಉಳಿದಂತೆ ಎಲ್ಲ ಬಗೆಯ ಸಾರ್ವಜನಿಕರ ಸಂಚಾರ ನಿಷೇಧಿಸಲಾಗಿದೆ. ಎಲ್ಲ ಕಚೇರಿಗಳು ವಾರದ 5 ದಿನ ಕಾರ್ಯ ನಿರ್ವಹಿಸಲಿವೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕೋವಿಡ್ ನಿಯಂತ್ರಣ ಮಾರ್ಗಸೂಚಿಯಂತೆ ಜಾರಿಯಲ್ಲಿರುತ್ತದೆ’ ಎಂದು ಮಾಹಿತಿ ನೀಡಿದರು.

ಪಬ್ಸ್, ಕ್ಲಬ್ಸ್, ರೆಸ್ಟೋರಂಟ್ಸ್, ಬಾರ್‌, ಹೋಟೆಲ್‌ಗಳು, ಚಿತ್ರಮಂದಿರ, ಮಲ್ಟಿಪ್ಲೆಕ್ಸ್, ರಂಗಮಂದಿರಗಳು, ಆಡಿಟೋರಿಯಂ, ಈಜುಕೊಳ, ಜಿಮ್, ಕ್ರೀಡಾ ಕಾಂಪ್ಲೆಕ್ಸ್ ಇತ್ಯಾದಿ ಸ್ಥಳಗಳಲ್ಲಿ ಶೇ 50 ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಬಹುದು. ಕೈಗಾರಿಕೆ, ಕಂಪನಿಗಳ ಕಾರ್ಯನಿರ್ವಹಣೆ ಇರುತ್ತದೆ. ಅಧಿಕೃತ ಗುರುತಿನ ಚೀಟಿಯೊಂದಿಗೆ ಸಂಬಂಧಪಟ್ಟವರು ಹೋಗಬೇಕು ಎಂದರು.

‘ಟೆಲಿಕಾಂ, ಇಂಟರ್‌ನೆಟ್ ಸೇವೆ ಪೂರೈಕೆದಾರರು, ತುರ್ತು ಸೇವೆಗೆ ಸಂಬಂಧಿಸಿದ ವಾಹನ ಹಾಗೂ ಸಿಬ್ಬಂದಿ ಗುರುತಿನ ಕಾರ್ಡ್ ತೋರಿಸಬೇಕು. ವೈದ್ಯಕೀಯ, ಔಷಧಿ ಸೇವೆ ಸಂಬಂಧಪಟ್ಟವರಿಗೆ ನಿರ್ಬಂಧ ಇರುವುದಿಲ್ಲ. ಸರಕು ಸಾಗಾಣಿಕೆ ಸಾಗಿಸುವ ವಾಹನ, ಟ್ರಕ್, ಗೃಹ ಪೂರೈಕೆ ವಾಹನಗಳು, ಇ-ಕಾಮರ್ಸ್ ಚಟುವಟಿಕೆಗಳಿಗೆ ನಿರ್ಬಂಧ ಇಲ್ಲ. ಬಸ್, ರೈಲು, ಸಾರ್ವಜನಿಕ ಸಾಗಾಣಿಕೆ ವಾಹನ, ಟ್ಯಾಕ್ಸಿ ಇತ್ಯಾದಿ ವಾಹನಗಳ ಓಡಾಟಕ್ಕೆ ಅಡ್ಡಿ ಇರುವುದಿಲ್ಲ. ಇದಕ್ಕೆ ಸಂಬಂಧಿಸಿದ ದಾಖಲೆ, ಟಿಕೆಟ್ ಹೊಂದಿರಬೇಕು’ ಎಂದು ತಿಳಿಸಿದರು.

ಶುಕ್ರವಾರ ರಾತ್ರಿ 8ರಿಂದ ಸೋಮವಾರ ಬೆಳಿಗ್ಗೆ 5ರವರೆಗೆ ಸಂಪೂರ್ಣ ಕರ್ಫ್ಯೂ ಜಾರಿಯಲ್ಲಿರುತ್ತದೆ. ರಾಜ್ಯ, ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕೋವಿಡ್‌ ನಿಯಂತ್ರಣ ನಿರ್ವಹಣೆಗೆ ಅಡ್ಡಿ ಇಲ್ಲ. ನಿರ್ವಹಣೆಗೆ, ತುರ್ತು ಸೇವೆಗೆ ನಿರ್ಬಂಧವಿಲ್ಲ.  ಪಾರ್ಕ್‌ಗಳು ಮುಚ್ಚಲಾಗುತ್ತದೆ. ಆಹಾರ ಧಾನ್ಯ, ಆಹಾರ, ಹಣ್ಣು, ತರಕಾರಿ, ಮಾಂಸ, ಮೀನು, ಹಾಲು ಮತ್ತು ಇತರೆ ಡೈರಿ ಪದಾರ್ಥಗಳು, ಪಶು ಆಹಾರಕ್ಕೆ ಸಂಬಂಧಿಸಿದ ಅಂಗಡಿಗಳು ತೆರೆಯಲು ಅವಕಾಶವಿದೆ. ತಳ್ಳುಗಾಡಿಯಲ್ಲಿ ತರಕಾರಿ, ಹಣ್ಣುಗಳ ವ್ಯಾಪಾರಕ್ಕೆ ನಿರ್ಬಂಧ ಇಲ್ಲ. ಹೋಟೆಲ್, ರೆಸ್ಟೋರಂಟ್‍ಗಳಲ್ಲಿ ಪಾರ್ಸಲ್ ಸೇವೆ ಮಾತ್ರ ಇರುತ್ತದೆ. ಹೋಂ ಡೆಲಿವರಿ ವ್ಯವಸ್ಥೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಬಟ್ಟೆ, ಪಾತ್ರೆ, ಬೆಳ್ಳಿ-ಬಂಗಾರ ಸಹಿತ ಇತರ ಅಂಗಡಿಗಳಿಗೆ ಅವಕಾಶ ಇಲ್ಲ ಎಂದರು.

ಜಿಲ್ಲೆಯಲ್ಲಿ ನಿತ್ಯ ಸುಮಾರು 3 ಸಾವಿರ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. 3ನೇ ಅಲೆ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ಸುಮಾರು 3 ಸಾವಿರದಷ್ಟು ಬೆಡ್ ವ್ಯವಸ್ಥೆ ಮಾಡಿಕೊಂಡಿದ್ದು, ಖಾಸಗಿ ಮೆಡಿಕಲ್ ಕಾಲೇಜುಗಳು ಶೇ 75ರಷ್ಟು ಹಾಗೂ ಖಾಸಗಿ ಆಸ್ಪತ್ರೆಗಳು ಶೇ 50ರಷ್ಟು ಬೆಡ್‍ಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗೆ ಒದಗಿಸುವಂತೆ ಈಗಾಗಲೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ವೈದ್ಯಕೀಯ ಆಕ್ಸಿಜನ್ ಪೂರೈಕೆ, ಪ್ರಯೋಗಾಲಯಗಳು, ವೆಂಟಿಲೇಟರ್ ಮುಂತಾದ ಉಪಕರಣಗಳನ್ನು ಸಿದ್ಧಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಎಲ್ಲ ಆಕ್ಸಿಜನ್ ಪ್ಲಾಂಟ್ ನಿರ್ವಹಣೆಗಾಗಿ 11 ಜನ ತಂತ್ರಜ್ಞರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಅಂತಿಮಗೊಂಡಿದೆ. ಡಿಎಚ್‌ಒ ನೇತೃತ್ವದ 5 ಜನರ ತಂಡ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ವರದಿ ನೀಡಲಿದ್ದಾರೆ ಎಂದರು.

ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಿಗೆ ಜ.10ರಿಂದ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುವುದು. ಓಮೈಕ್ರಾನ್ ಪತ್ತೆಗೆ ನಾವು ಹಾಸನಕ್ಕೆ ಮಾದರಿ ಕಳುಹಿಸುತ್ತಿದ್ದೇವೆ ಎಂದರು.

‘ಧರಣಿ, ರ‍್ಯಾಲಿ, ಪ್ರತಿಭಟನೆಗೆ ಅವಕಾಶವಿಲ್ಲ’

ಜ. 19 ರವರೆಗೆ ಜಿಲ್ಲೆಯಲ್ಲಿ ಯಾವುದೇ ಧರಣಿ, ಪ್ರತಿಭಟನೆ, ರ‍್ಯಾಲಿ, ಉತ್ಸವ, ಜಾತ್ರೆಗಳಿಗೆ ಅವಕಾಶವಿಲ್ಲ. ಮದುವೆಗಳಲ್ಲಿ ಹೊರಾಂಗಣದಲ್ಲಿ ಗರಿಷ್ಠ 200, ಒಳಾಂಗಣದಲ್ಲಿ ಗರಿಷ್ಠ 100 ಜನ ಮಾತ್ರ ಭಾಗವಹಿಸಲು ಅವಕಾಶವಿದೆ. ದೇವಾಲಯಗಳಲ್ಲಿಯೂ ಕೇವಲ ದರ್ಶನಕ್ಕೆ ಮಾತ್ರ ಅವಕಾಶವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ತಿಳಿಸಿದರು.

ಮಾಸ್ಕ್ ಧರಿಸದೇ ಇದ್ದರೆ, ಕೋವಿಡ್‌ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

‘ಜನ ಇದ್ದರೆ ಓಡಲಿವೆ ಬಸ್‌’

ದಾವಣಗೆರೆ: ವಾರಾಂತ್ಯ ಕರ್ಫ್ಯೂ ಇದ್ದರೂ ಪ್ರಯಾಣಿಕರು ಇದ್ದರೆ ಬಸ್‌ಗಳನ್ನು ಓಡಿಸಲಾಗುವುದು. ಬೇಡಿಕೆಗೆ ಅನುಗುಣವಾಗಿ ಬಸ್‌ಗಳು ರಸ್ತೆಗೆ ಇಳಿಯಲಿವೆ ಎಂದು ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗೀಯ ನಿಯಂತ್ರಕ ಸಿದ್ದೇಶ್ವರ ಹೆಬ್ಬಾಳ ತಿಳಿಸಿದ್ದಾರೆ.

ರಾತ್ರಿ ಕರ್ಫ್ಯೂ ವಿಧಿಸಿದ ಬಳಿಕ ರಾತ್ರಿ ಪ್ರಯಾಣಿಸುವವ ಸಂಖ್ಯೆ ಇಳಿದಿದೆ. ವಾರಾಂತ್ಯ ಕರ್ಫ್ಯೂ ಜಾರಿ ಮಾಡಿರುವುದರಿಂದ ಶನಿವಾರ, ಭಾನುವಾರ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಪ್ರಯಾಣಿಕರು ಇದ್ದರೆ ಬಸ್‌ ಓಡಿಸಲಾಗುವುದು ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.