ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ಸಚಿವರ ಎದುರು ಕಣ್ಣೀರಿಟ್ಟ ಮಹಿಳೆ

ಜವಳಿ ಪಾರ್ಕ್‌ಗಾಗಿ ಕೆಐಡಿಬಿಗೆ ಜಾಗ ನೀಡಿದ್ದ ಸಂತ್ರಸ್ತರು: ಸರಿಪಡಿಸುವ ಭರವಸೆ ನೀಡಿದ ಜಗದೀಶ ಶೆಟ್ಟರ್‌
Last Updated 28 ಜನವರಿ 2021, 2:38 IST
ಅಕ್ಷರ ಗಾತ್ರ

ದಾವಣಗೆರೆ: ಜವಳಿ ಪಾರ್ಕ್‌ ಮಾಡುವುದಾಗಿ ತಿಳಿಸಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಯಾವ ಉದ್ದೇಶಕ್ಕೆ ಸ್ವಾಧೀನ ಪಡಿಸಿಕೊಂಡಿರುತ್ತಾರೋ ಅದಕ್ಕೆ ಬಳಸದೇ ಇದ್ದರೆ ವಾಪಸ್‌ ನೀಡಬೇಕು ಎಂಬ ನಿಯಮ ಇದೆ. ಆದರೆ ಭೂಮಿಯೂ ನೀಡಿಲ್ಲ. ಅದರ ಬೆಲೆಯನ್ನೂ ನೀಡಿಲ್ಲ ಎಂದು ಕರೂರಿನ ಮಹಿಳೆ ಮತ್ತು ಅವರ ಅಣ್ಣ ಕಣ್ಣೀರು ಸುರಿಸಿದರು. ಅವರ ಬೆಂಬಲಕ್ಕೆ ನಿಂತ ರೈತ ಸಂಘದ ಮುಖಂಡರನ್ನು ಹೊರಗೆ ಕಳುಹಿಸಲಾಯಿತು.

ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಈ ಸನ್ನಿವೇಶಗಳು ನಡೆದವು. ‘ಜಿಲ್ಲಾಧಿಕಾರಿ ಕಚೇರಿ ಇರುವುದೇ ನಮ್ಮ ಭೂಮಿಯಲ್ಲಿ’ ಎಂದು ಸಂತ್ರಸ್ತರು ತಿಳಿಸಿದರು.

ಕರೂರಿನಲ್ಲಿ ಜವಳಿ ಪಾರ್ಕ್‌ಗಾಗಿ ಒಟ್ಟು 143 ಎಕರೆ ಭೂಮಿಯನ್ನು ರೈತರಿಂದ ಸ್ವಾಧೀನ ಪಡಿಸಿಕೊಂಡಿದ್ದರು. ಆದರೆ ಜವಳಿ ಪಾರ್ಕ್‌ ಆರಂಭಗೊಳ್ಳಲಿಲ್ಲ. ಭೂಮಿಯನ್ನು ರೈತರಿಗೆ ವಾಪಸ್‌ ಮಾಡಲಿಲ್ಲ. ಆಗ ಎಕರೆಗೆ 4 ಲಕ್ಷ ನಿಗದಿ ಮಾಡಿದರು. ಭೂಮಿ ವಾಪಸ್‌ ಮಾಡಬೇಕು ಇಲ್ಲದೇ ಇದ್ದರೆ ಭೂಮಿಗೆ ಈಗ ಎಕರೆಗೆ ₹ 3.30 ಕೋಟಿ ಬೆಲೆ ಇದೆ. ಅದರಂತೆ ನೀಡಬೇಕು ಎಂದು ಸಂತ್ರಸ್ತರಾದ ಸೈ್ಯದ್‌ ನಯಾಜ್‌, ಸೈಯದ್‌ ಹಫೀಜಾ ಕಣ್ಣೀರಿಟ್ಟರು. ಅವರಿಗೆ ರೈತ ಮುಖಂಡ ಮರಡಿ ನಾಗಣ್ಣ ಬೆಂಬಲ ನೀಡಿದರು.

‘ನನ್ನ ಗಮನಕ್ಕೆ ಈಗ ತಂದಿದ್ದೀರಿ. ಸರಿಪಡಿಸುತ್ತೇನೆ’ ಎಂದು ಜಗದೀಶ ಶೆಟ್ಟರ್‌ ಭರವಸೆ ನೀಡಿದರು. ‘ಈಗಲ್ಲ. ನೀವು ಮುಖ್ಯಮಂತ್ರಿ ಆಗಿರುವಾಗಲೇ ಗಮನಕ್ಕೆ ತಂದಿದ್ದೆವು. ಯಾವುದೇ ಕ್ರಮ ಕೈಗೊಂಡಿಲ್ಲ. ನನ್ನ ತಾಯಿ ಇದೇ ನೋವಿನಲ್ಲಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಕ್ಕಪ್ಪ ಅಂದರೆ ನಯಾಜ್‌ ಅವರ ತಂದೆ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. ಸಂತ್ರಸ್ತರೆಲ್ಲ ಸತ್ತ ಮೇಲೆ ಪರಿಹಾರ ಯಾರಿಗೆ ನೀಡುತ್ತೀರಿ’ ಎಂದು ಸಂತ್ರಸ್ತೆ ಸೈಯದ್‌ ಹಫೀಜಾ ಪ್ರಶ್ನಿಸಿದರು. ಇದೇ ವೇಳೆ ಮರಡಿ ನಾಗಣ್ಣ ಧ್ವನಿ ಎತ್ತರಿಸಿ ಮಾತನಾಡಿದ ಕಾರಣಕ್ಕೆ ಪೊಲೀಸರು ಹೊರಗೆ ಕರೆದುಕೊಂಡು ಹೋದರು.

ಸಚಿವರು ಮತ್ತು ನಮ್ಮ ಮೇಲೆ ಭರವಸೆ ಇಡಿ. ಸಮಸ್ಯೆ ಪರಿಹಾರ ಮಾಡಲಾಗುವುದು ಎಂದು ಕೆಎಸ್‌ಎಸ್‌ಐಡಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಪ್ರಸಾದ್‌ ಮನೋಹರ್‌ ಭರವಸೆ ನೀಡಿದರು.

ಗಾರ್ಮೆಂಟ್‌ ಉದ್ಯಮಿಯೂ ಕಣ್ಣೀರು: ಕೊರೊನಾದಿಂದ ನಷ್ಟವಾಗಿದೆ. ನನ್ನ ಗಾರ್ಮೆಂಟ್ಸ್‌ ಅನ್ನು ಉಳಿಸಿಕೊಳ್ಳಲು ಹೊಲ ಮಾರಿದ್ದೇನೆ. ಉದ್ಯಮ ಬದಲಾಯಿಸಲು ಇಲಾಖೆಯವರು ಅವಕಾಶ ನೀಡುತ್ತಿಲ್ಲ. ಫ್ಲೈವುಡ್‌, ಅಲ್ಯುಮಿನಿಯಂ ತಯಾರಿ, ರಟ್‌ಬಾಕ್ಸ್ ಇನ್ನೇನಾದರೂ ಮಾಡಲು ಅವಕಾಶ ನೀಡಬೇಕು ಎಂದು ಮಾಗನೂರು ಗಾರ್ಮೆಂಟ್ಸ್‌ನ ಗುರುಪಾದಪ್ಪ ಅವರು ಕಣ್ಣೀರು ಸುರಿಸಿದರು.

ಸಂಕಷ್ಟದಲ್ಲಿರುವವರ ನೆರವಿಗಾಗಿ ಆತ್ಮನಿರ್ಭರ್‌ ಯೋಜನೆಯನ್ನು ಮೋದಿಯವರು ಜಾರಿಗೆ ತಂದಿದ್ದಾರೆ. ₹ 3 ಲಕ್ಷ ಕೋಟಿ ನೆರವನ್ನು ದೇಶದಾದ್ಯಂತ ನೀಡಲಾಗಿದೆ. ಇವರಿಗೆ ಯಾಕೆ ನೆರವು ಒದಗಿಸಿಲ್ಲ ಎಂದು ಪ್ರಶ್ನಿಸಿದ ಸಚಿವರು, ‘ಅವರಿಗೆ ಬೇಕಾದ ಉದ್ಯಮ ನಡೆಸಲು ಅವಕಾಶ ನೀಡಿ’ ಎಂದು ಸೂಚನೆ ನೀಡಿದರು.

ಶಾಸಕ ಎಸ್.ಎ.ರವೀಂದ್ರನಾಥ್, ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್, ಗ್ರಾಮಾಂತರ ಕೈಗಾರಿಕೆ ಇಲಾಖೆ ಉಪ ನಿರ್ದೇಶಕರ ಮನ್ಸೂರ್, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಜಯಪ್ರಕಾಶ್ ನಾರಾಯಣ್, ಉಪ ನಿರ್ದೇಶಕ ಮಂಜುನಾಥ್, ಭೂಸ್ವಾಧೀನ ಅಧಿಕಾರಿ ಸರೋಜಾ, ಕೆಎಸ್‍ಎಫ್‍ಸಿ ಪ್ರಧಾನ ವ್ಯವಸ್ಥಾಪಕ ಬಸವರಾಜು, ಜಿಲ್ಲಾ ಪರಿಸರ ಅಧಿಕಾರಿ ಮಹೇಶ್ವರಪ್ಪ, ಉಪ ಜಿಲ್ಲಾ ಪರಿಸರ ಅಧಿಕಾರಿ ಸಂತೋಷ್, ಹರಿಹರ ನಗರಸಭೆ ಆಯುಕ್ತ ಉದಯ್ ಕುಮಾರ್.ಬಿ.ಟಿ, , ಕಾರ್ಮಿಕ ಅಧಿಕಾರಿ ಇಬ್ರಾಹೀಂ ಸಾಬ್ ಅವರೂ
ಇದ್ದರು.

ಕ್ರಯಪತ್ರ ನೀಡಲು ಸೂಚನೆ

10 ವರ್ಷ ಆದವರಿಗೆ ನಿವೇಶನಗಳ ಕ್ರಯಪತ್ರ ನೀಡಬೇಕು. ಈ ನಿವೇಶನಗಳಿಗೆ ಖಾತೆ ಈಗ ಮಾಡಲಾಗಿದೆ. ಇನ್ನೊಂದು ವಾರದಲ್ಲಿ ಪೋಡಿ ಮಾಡಬೇಕು. ಹರಿಹರ ಕೈಗಾರಿಕಾ ವಲಯಕ್ಕೆ ರಸ್ತೆ, ಚರಂಡಿ ಸಹಿತ ಮೂಲ ಸೌಲಭ್ಯ ಒದಗಿಸಬೇಕು. ತೆರಿಗೆ ಹಿಂದಿನ ಬಾಕಿ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಅಲ್ಲಿಯವರೆಗೆ ಈಗಿನ ತೆರಿಗೆಯನ್ನು ಕಟ್ಟಿಸಿಕೊಳ್ಳಬೇಕು ಎಂದು ಸಚಿವ ಜಗದೀಶ ಶೆಟ್ಟರ್‌ ಸೂಚಿಸಿದರು.

ಜವಳಿ ಪಾರ್ಕ್‌ ಯೋಜನೆಯಡಿ 71 ಮಂದಿಯಲ್ಲಿ 51 ಮಂದಿ ಮಾತ್ರ ಉದ್ಯಮ ಆರಂಭಿಸಿದ್ದಾರೆ. ಅದರಲ್ಲಿ 28 ಮಾತ್ರ ಸಕ್ರಿಯವಾಗಿವೆ. ಅದರಲ್ಲಿ ಬೇರೆ ಉದ್ಯಮ ಮಾಡಲು ಅವಕಾಶ ನೀಡಲು ಸಾಧ್ಯವೇ ಎಂದು ಶೆಟ್ಟರ್‌ ಪ್ರಶ್ನಿಸಿದರು. ಬೇರೆ ಉದ್ಯಮಕ್ಕೆ ಅವಕಾಶ ನೀಡಿದರೆ ಜವಳಿಗೆ ತೊಂದರೆಯಾಗುತ್ತದೆ. ಜವಳಿ ಉದ್ಯಮಕ್ಕೆ ಪೂರಕವಾದ ಉದ್ಯಮ ಬರುವುದಾದರೆ ನಮ್ಮ ಆಕ್ಷೇಪವಿಲ್ಲ ಎಂದು ಉದ್ಯಮಿಗಳು ತಿಳಿಸಿದರು.

ಕಾರ್ಮಿಕರ ಇಲಾಖೆ ಸಹಿತ ಯಾರೂ ಉದ್ಯಮಿಗಳಿಗೆ ಕಿರುಕುಳ, ತೊಂದರೆ ಕೊಡಬಾರದು. ಅವರು ಉದ್ಯಮ ಮುಚ್ಚಿ ಹೋಗುವಂತೆ ಮಾಡಬಾರದು. ಎಲ್ಲವನ್ನು ತಾಂತ್ರಿಕವಾಗಿ ನೋಡದೇ ಪ್ರಾಯೋಗಿಕವಾಗಿ ನೋಡಬೇಕು. ಬ್ಯಾಂಕ್‌ ಬಗ್ಗೆ ಇರುವ ತಕರಾರು ಸರಿಪಡಿಸಬೇಕು ಎಂದು ಸಚಿವರು ಸಲಹೆ ನೀಡಿದರು.

ಉದ್ಯಮಿಗಳಾದ ಮಂಜುನಾಥ ಆರ್‌.ನಾಯಕ್‌, ಮಂಜುನಾಥ ಜಿ.ಎಲ್‌., ಸತ್ಯನಾರಾಯಣ, ದೇವಯ್ಯ, ಹನುಮಂತಪ್ಪ, ಚನ್ನಮಲ್ಲಪ್ಪ, ಹರಿಹರೇಶ್ವರ ಸಣ್ಣ ಕೈಗಾರಿಕಾ ಮಾಲೀಕರ ಸಂಘದ ಅಧ್ಯಕ್ಷ ಸಿದ್ದನಗೌಡ ಮುದೀಗೌಡ, ಮೆಕ್ಕೆಜೋಳ ಉದ್ಯಮಿ ಬಸವರಾಜಪ್ಪ, ಶಂಭುಲಿಂಗಪ್ಪ, ಎಸ್.ಎನ್ ಬಾಲಾಜಿ, ರೈಸ್‌ಮಿಲ್‌ ಮಾಲೀಕರು ಸಮಸ್ಯೆಗಳನ್ನು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT