ದಾವಣಗೆರೆ ಕ್ಷೇತ್ರದಲ್ಲಿ ಮಹಿಳೆಯರಿಗೆ ಒಂದು ಬಾರಿಯೂ ಟಿಕೆಟ್ ಸಿಕ್ಕಿಲ್ಲ

ಬುಧವಾರ, ಏಪ್ರಿಲ್ 24, 2019
24 °C

ದಾವಣಗೆರೆ ಕ್ಷೇತ್ರದಲ್ಲಿ ಮಹಿಳೆಯರಿಗೆ ಒಂದು ಬಾರಿಯೂ ಟಿಕೆಟ್ ಸಿಕ್ಕಿಲ್ಲ

Published:
Updated:

ದಾವಣಗೆರೆ: ಈ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಯಾವ ಪಕ್ಷಗಳೂ ಮಹಿಳೆಗೆ ಸ್ಪರ್ಧಿಸಲು ಅವಕಾಶ ನೀಡಿಲ್ಲ. ಈ ಬಾರಿಯೂ ಕಣದಲ್ಲಿ ಒಬ್ಬ ಮಹಿಳೆಯೂ ಇಲ್ಲ. ಪಕ್ಷೇತರರಾಗಿ ಒಬ್ಬರಷ್ಟೇ ಎರಡು ಬಾರಿ ಇಳಿದಿದ್ದು ಇಲ್ಲಿನ ದಾಖಲೆಯಾಗಿದೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ 1977ರಲ್ಲಿ ಬೇರ್ಪಟ್ಟ ಬಳಿಕ ಇಲ್ಲಿವರೆಗೆ 11 ಮಹಾ ಚುನಾವಣೆಗಳು ನಡೆದಿವೆ. ಈಗ 12ನೇ ಚುನಾವಣೆ ನಡೆಯುತ್ತಿದೆ. ಈ ಬಾರಿ ಸ್ಪರ್ಧೆಯಲ್ಲಿರುವ 25 ಹುರಿಯಾಳುಗಳೂ ಸೇರಿ 151 ಮಂದಿ ಕಣಕ್ಕೆ ಇಳಿದಿದ್ದರು. ಅವರಲ್ಲಿ ಪೀಕಿಬಾಯಿ ಎಂಬುವವರನ್ನು ಹೊರತುಪಡಿಸಿ ಎಲ್ಲರೂ ಪುರುಷರು. ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಹೇಗೆ ಅವಗಣನೆಗೆ ಒಳಗಾಗಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ.

ಈ ಕ್ಷೇತ್ರದಲ್ಲಿ ಒಟ್ಟು ಮತದಾರರಲ್ಲಿ ಶೇ 49.45ರಷ್ಟು ಮಹಿಳೆಯರಿದ್ದಾರೆ. ಮಾತೆತ್ತಿದರೆ ಮಹಿಳೆಯರ ಹಕ್ಕುಗಳ ಬಗ್ಗೆ, ಮಹಿಳಾ ಸಬಲೀಕರಣದ ಬಗ್ಗೆ, ರಕ್ಷಣೆ ಬಗ್ಗೆ ಮಾತನಾಡುವ ರಾಜಕೀಯ ನಾಯಕರ ದಂಡನ್ನೇ ಈ ಕ್ಷೇತ್ರ ಕಂಡಿದೆ. ಆದರೆ ಅದು ಬಾಯಿಮಾತಿಗಷ್ಟೇ ಸೀಮಿತ ಎಂಬುದನ್ನು ಇಲ್ಲಿಯವರೆಗಿನ ಇತಿಹಾಸ ಸಾರಿ ಹೇಳುತ್ತಿದೆ.

ಸ್ಥಳೀಯ ಆಡಳಿತ ಚುನಾವಣೆಗಳಲ್ಲಿ ಶೇ 50ರಷ್ಟು ಮೀಸಲಾತಿ ನೀಡಿರುವುದರಿಂದ ಮಹಿಳೆಯರಿಗೆ ಜನಪ್ರತಿನಿಧಿಗಳಾಗಲು ಅವಕಾಶ ಸಿಕ್ಕಿದೆ. ಮಹಿಳೆಯರಿಗೆ ಶೇ 33 ಮೀಸಲಾತಿ ನೀಡಬೇಕು ಎಂಬ ಚರ್ಚೆ ಲೋಕಸಭೆಯಲ್ಲಿ ದಶಕಗಳಿಂದ ನಡೆಯುತ್ತಿದೆ. ಆದರೆ ಈ ಮಸೂದೆಗೆ ಸಂಸತ್ತಿನಲ್ಲಿ ಇನ್ನೂ ಅನುಮೋದನೆ ಸಿಕ್ಕಿಲ್ಲ.

ಪೀಕಿಬಾಯಿ: ಚಿತ್ರದುರ್ಗ ಜಿಲ್ಲೆಯಲ್ಲಿರುವ ಭರಮಸಾಗರ ಆಗ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. ಭರಮಸಾಗರದ ಪೀಕಿಬಾಯಿ ಅವರು 1991ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಅವರಿಗೆ 1,330 (ಶೇ 0.22) ಮತಗಳಷ್ಟೇ ಬಂದಿದ್ದವು. ಕಣದಲ್ಲಿ 14 ಮಂದಿ ಇದ್ದು, ಮತಗಳಿಕೆಯಲ್ಲಿ ಪೀಕಿಬಾಯಿ 8ನೇ ಸ್ಥಾನ ಪಡೆದಿದ್ದರು. 1996ರ ಚುನಾವಣೆಯಲ್ಲಿ ಮತ್ತೆ ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಆಗ ಇನ್ನೂ ಕಡಿಮೆ ಮತಗಳು ಬಿದ್ದವು. 966 (0.13) ಮತಗಳಿಗಷ್ಟೇ ಅವರು ತೃಪ್ತಿ ಪಡಬೇಕಾಯಿತು. ಕಣದಲ್ಲಿದ್ದ 24 ಮಂದಿಯಲ್ಲಿ ಅವರು ಮತ ಗಳಿಕೆಯಲ್ಲಿ 14ನೇ ಸ್ಥಾನದಲ್ಲಿದ್ದರು.

ಎರಡು ಬಾರಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡ ಬಳಿಕ ಅವರು ಮತ್ತೆ ಸ್ಪರ್ಧಿಸಲು ಮನಸ್ಸು ಮಾಡಲಿಲ್ಲ. ಮತ್ಯಾವ ಮಹಿಳೆಯೂ ಕಣಕ್ಕೆ ಈವರೆಗೆ ಇಳಿಯದ ಕಾರಣ ಲೋಕಸಭೆಗೆ ಸ್ಪರ್ಧಿಸಿದ ಏಕೈಕ ಮಹಿಳೆ ಎಂಬ ದಾಖಲೆ ಪೀಕಿಬಾಯಿ ಹೆಸರಲ್ಲಿ ಹಾಗೇ ಉಳಿದಿದೆ.

ಅವಕಾಶ ಕೊಡಿ

‘ಮಹಿಳೆಯರು ಸಶಕ್ತರಾಗಿಲ್ಲ ಎಂಬ ಭಾವನೆ ರಾಷ್ಟ್ರೀಯ, ರಾಜ್ಯ ಪಕ್ಷಗಳಿಗೆ ಇರಬಹುದು. ಅದನ್ನು ಮನಸ್ಸಿನಿಂದ ಕಿತ್ತು ಹಾಕಿ ಮುಂದಿನ ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಬೇಕು’ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಎಚ್‌.ಸಿ. ಜಯಮ್ಮ ಅಭಿಪ್ರಾಯಪಟ್ಟರು.

‘ಸ್ಥಳೀಯ ಆಡಳಿತದಲ್ಲಿ ಶೇ 50 ಮೀಸಲಾತಿ ಸಿಕ್ಕಮೇಲೆ ಮಹಿಳೆಯರಿಗೆ ಅವಕಾಶ ಸಿಕ್ಕಿದೆ. ಶೇ 33 ಮೀಸಲಾತಿ ಸಂಸತ್ತಿನಲ್ಲಿ ಅಂಗೀಕಾರಗೊಳ್ಳಬೇಕು. ಆಗ ಮುಂದಿನ ಬಾರಿ ಖಂಡಿತ ಸಿಗಬಹುದು ಎಂಬ ವಿಶ್ವಾಸ ಇದೆ’ ಎಂದು ಕಾಂಗ್ರೆಸ್‌ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್‌ ಹೇಳಿದರು.
 

ದಾವಣಗೆರೆ ಲೋಕಸಭಾ ಕ್ಷೇತ್ರದ ಮತದಾರರ ಸಂಖ್ಯೆ

ಪುರುಷರು 8,14,413

ಮಹಿಳೆಯರು 7,96,874

ಇತರರು 110

ಸೇವಾ ಮತದಾರರು 568‌

ಒಟ್ಟು 16,11,965

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !