ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮವಿಶ್ವಾಸಕ್ಕೆ ಸಂಘಟನೆಯ ಇಂಧನ

Last Updated 8 ಮಾರ್ಚ್ 2020, 11:26 IST
ಅಕ್ಷರ ಗಾತ್ರ

ದಾವಣಗೆರೆ: ‘ವಿಧಾನಸೌಧದ ಎದುರು ಸೆಲ್ಫಿ ತೆಗೆದುಕೊಳ್ಳಲು ಸೀಮಿತವಾಗಿದ್ದ ನಾನು ಇಂದು ವಿಧಾನಸೌಧದ ಒಳಗೆ ಹೋಗಿ ಸಂಘಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡಿಕೊಂಡು ಬರುತ್ತೇನೆ. ಆರಂಭದಲ್ಲಿ ಅತ್ತೆ, ಮಾವ, ಗಂಡ ಮನೆಯಿಂದ ಹೊರಗೆ ಯಾಕೆ ಹೋಗಬೇಕು ಎಂದು ಪ್ರಶ್ನಿಸುತ್ತಿದ್ದರು. ಇಂದು ಅವರೇ ಪ್ರೋತ್ಸಾಹ ನೀಡುತ್ತಿದ್ದಾರೆ.’

ಇದು ದುರ್ಗಾಂಬಿಕಾ ಸ್ತ್ರೀಶಕ್ತಿ ಜಿಲ್ಲಾ ಒಕ್ಕೂಟದ ಅಧ್ಯಕ್ಷೆ ಜಿ.ಸಿ. ಮಂಗಳಾ ಅವರ ಅನುಭವದ ಮಾತು.

‘ನನಗೆ ವ್ಯವಹಾರ ಜ್ಞಾನವೇ ಇರಲಿಲ್ಲ. ಸಂಘಟನೆಗೆ ಸೇರಿದ ಮೇಲೆ ಸಾಕಷ್ಟು ತಿಳಿದುಕೊಂಡೆ. ಪ್ರತಿಯೊಂದಕ್ಕೂ ಮನೆಯವರ ಮುಂದೆ ಕೈಯೊಡ್ಡಿ ನಿಲ್ಲಬೇಕಿತ್ತು. ಆದರೆ, ಇಂದು ಮತ್ತೊಬ್ಬರಿಗೆ ಸಹಾಯ ಮಾಡುವ ಮಟ್ಟಿಗೆ ಬೆಳೆದಿದ್ದೇನೆ. ಗುಂಪಿನ ಅತ್ಯುತ್ತಮ ಕೆಲಸಕ್ಕೆ 2015ರಲ್ಲಿ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದೇವೆ’ ಎಂದು ಹೆಮ್ಮೆ ಪಡುತ್ತಾರೆ ಹರಿಹರ ತಾಲ್ಲೂಕು ಸ್ತ್ರೀಶಕ್ತಿ ಬ್ಲಾಕ್‌ ಸೊಸೈಟಿ ಅಧ್ಯಕ್ಷೆ ಎ.ಎಸ್‌. ಇಂದ್ರಮ್ಮ.

ಜಗಳೂರು ತಾಲ್ಲೂಕು ಸ್ತ್ರೀಶಕ್ತಿ ಬ್ಲಾಕ್‌ ಸೊಸೈಟಿ ಅಧ್ಯಕ್ಷೆ ಕೆ.ಬಿ. ಚೌಡಮ್ಮ ಅವರ ಅನುಭವ ಮತ್ತೊಂದು ಬಗೆಯದು. ಆರಂಭದಲ್ಲಿ ಟೈಲರಿಂಗ್‌ ಮಾಡಿಕೊಂಡು, ನಂತರ ಸಣ್ಣ ಅಂಗಡಿ ಇಟ್ಟುಕೊಂಡಿದ್ದ ಅವರು ಸಂಘಟನೆ ಮೂಲಕ ರಾಜಕೀಯ ಪ್ರವೇಶಿಸಿದರು. ಗ್ರಾಮ ಪಂಚಾಯಿತಿ ಸದಸ್ಯೆ, ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿರುವ ಅವರು ಹಾಲಿ ಪಿಎಲ್‌ಡಿ ಬ್ಯಾಂಕ್‌ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಂಘಟನೆ ಶಕ್ತಿಯಿಂದ ತಮಗೆ ಸೇರಬೇಕಿದ್ದ ಪತಿಯ ಆಸ್ತಿ ಪಾಲನ್ನು ದಕ್ಕಿಸಿಕೊಂಡವರು ಚನ್ನಗಿರಿ ತಾಲ್ಲೂಕು ಸ್ತ್ರೀಶಕ್ತಿ ಬ್ಲಾಕ್‌ ಸೊಸೈಟಿ ಅಧ್ಯಕ್ಷೆ ಕೆ.ಎನ್‌. ದಿವ್ಯಾ. ‘ಒಬ್ಬಂಟಿಯಾಗಿದ್ದರೆ ತುಳಿದುಬಿಡುತ್ತಾರೆ. ಅಧಿಕಾರಿಗಳೂ ಮಾತು ಕೇಳುವುದಿಲ್ಲ. ಅದೇ ಸಂಘಟಿತರಾಗಿದ್ದರೆ ಏನನ್ನು ಬೇಕಾದರೂ ಜಯಿಸಬಹುದು. ಇದಕ್ಕೆ ನಾನೇ ಉದಾಹರಣೆ’ ಎನ್ನುತ್ತಾರೆ ಅವರು.

ಇದು ಇವರ ಅನುಭವ ಮಾತ್ರವಲ್ಲ; ಮನೆ, ಮಕ್ಕಳು, ಕುಟುಂಬಕ್ಕೆ ಸೀಮಿತವಾಗಿದ್ದ ಗ್ರಾಮೀಣ ಪ್ರದೇಶಗಳ ಬಹುತೇಕ ಮಹಿಳೆಯರ ಅನುಭವವೂ ಆಗಿದೆ. ಇಂತಹ ಮಹಿಳೆಯರು ಇಂದು ಸ್ವಾವಲಂಬಿಗಳಾಗಿ ಆತ್ಮವಿಶ್ವಾಸದ ಹೆಜ್ಜೆಗಳನ್ನು ಇಡಲು ‘ಸ್ತ್ರೀಶಕ್ತಿ’ ಯೋಜನೆ ಸಹಕಾರಿಯಾಗಿದೆ.

ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣದ ಉದ್ದೇಶದಿಂದ 2000–2001ರಲ್ಲಿ ಆರಂಭವಾದ ಯೋಜನೆ ಅಡಿ ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ 1.50 ಲಕ್ಷ ಗುಂಪುಗಳು, ಜಿಲ್ಲೆಯಲ್ಲಿ 5 ಸಾವಿರಕ್ಕೂ ಹೆಚ್ಚು ಗುಂಪುಗಳು ಕಾರ್ಯನಿರ್ವಹಿಸುತ್ತಿರುವುದು ಗಮನಾರ್ಹ.

ಬಡತನ ರೇಖೆಗಿಂತ ಕೆಳಗಿರುವವರು, ಭೂರಹಿತ ಕೃಷಿ ಕಾರ್ಮಿಕರು, ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು, ವಿಧವೆಯರು, ಎಚ್‌ಐವಿ ಪೀಡಿತರು, ನಿರ್ಗತಿಕರು, ಅಂಗವಿಕಲರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಆದ್ಯತೆ ಮೇರೆಗೆ ಗುಂಪುಗಳು ರಚನೆಗೊಂಡಿವೆ.

ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಗುಂಪುಗಳ ಸದಸ್ಯರಿಗೆ ಓರಿಯಂಟೇಶನ್‌, ಲೆಕ್ಕಪತ್ರ ನಿರ್ವಹಣೆ, ಸಾಲ ನಿರ್ವಹಣೆ, ಸಾಮಾಜಿಕ ವಿಷಯಗಳು, ಸಂವಹನ, ನಾಯಕತ್ವ, ಲಿಂಗ ಸಂವೇದನೆ ಮತ್ತು ಉದ್ಯಮ ಅಭಿವೃದ್ಧಿ ಬಗ್ಗೆ ವಿವಿಧ ಹಂತಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಹೆಚ್ಚು ಉಳಿತಾಯ ಮಾಡಿರುವ ಗುಂಪುಗಳಿಗೆ ₹ 15 ಸಾವಿರದಿಂದ ₹ 20 ಸಾವಿರದವರೆಗೆ ಪ್ರೋತ್ಸಾಹ ಧನವನ್ನೂ ಒದಗಿಸಲಾಗುತ್ತಿದೆ.

ಮಲ್ಲಿಗೆಹೂವು, ತರಕಾರಿ, ಅಣಬೆ, ನರ್ಸರಿ, ಎರೆಹುಳು ಗೊಬ್ಬರ ತಯಾರಿಕೆ, ಸಿದ್ಧ ಉಡುಪು ಮಾರಾಟ, ಉಪ್ಪಿನಕಾಯಿ, ಹಪ್ಪಳ, ಸಾಂಬಾರುಪುಡಿ ತಯಾರಿಕೆ, ಕಂಬಳಿ ನೇಯ್ಗೆ, ಬ್ಯೂಟಿ ಪಾರ್ಲರ್‌, ಎಲೆಕ್ಟ್ರಾನಿಕ್‌ ವಸ್ತುಗಳ ರಿಪೇರಿ, ಎಂಬ್ರಾಯಿಡರಿ, ಫ್ಯಾಷನ್‌ ಡಿಸೈನಿಂಗ್‌, ಅಲಂಕಾರಿಕ ವಸ್ತುಗಳ ತಯಾರಿಕೆ ಇತರೆ ವ್ಯಾಪಾರ ಚಟುವಟಿಕೆಯಲ್ಲೂ ಮಹಿಳೆಯರು ತೊಡಗಿದ್ದಾರೆ.

ಸ್ತ್ರೀಶಕ್ತಿ ಗುಂಪುಗಳು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಸೌಲಭ್ಯವಿಲ್ಲದ ಕಾರಣ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಗುಂಪುಗಳ ಕೈ ಬಲಪಡಿಸಲು ಇಲಾಖೆಯು ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಮಳಿಗೆಗಳನ್ನು ನಿರ್ಮಿಸಿಕೊಡುವ ಅಗತ್ಯವಿದೆ. ಈ ಮೂಲಕ ಮಹಿಳೆಯರು ಆರ್ಥಿಕವಾಗಿ ಉತ್ತಮ ಸ್ಥಿತಿ ತಲುಪುವುದರ ಜತೆಗೆ ಕುಟುಂಬ, ಸಮುದಾಯ, ಸಮಾಜದ ಬದಲಾವಣೆಗೆ ಮುನ್ನುಡಿ ಬರೆಯಲು ಸಾಧ್ಯವಾಗಲಿದೆ.

ಸಾಮಾಜಿಕ ಪಿಡುಗುಗಳಾದ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ವರದಕ್ಷಿಣೆ, ಕೌಂಟುಂಬಿಕ ದೌರ್ಜನ್ಯ, ಅಕ್ರಮ ಮದ್ಯ ಮಾರಾಟದ ವಿರುದ್ಧ ಹೋರಾಟ, ಬೆತ್ತಲೆ ಬೇವಿನ ಸೇವೆ ಸಲ್ಲಿಸದಂತೆ ಅರಿವು ಮೂಡಿಸುವ ಕೆಲಸಗಳನ್ನು ಸ್ತ್ರೀಶಕ್ತಿ ಗುಂಪುಗಳು ಅಲ್ಲಲ್ಲಿ ಬಿಡಿ ಬಿಡಿಯಾಗಿ ಮಾಡುತ್ತಿದ್ದು, ಇನ್ನಷ್ಟು ವ್ಯವಸ್ಥಿತವಾಗಿ ನಡೆಸಿದರೆ ಸದೃಢ ಹಾಗೂ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ನಾಂದಿಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT