ಮಂಗಳವಾರ, ಏಪ್ರಿಲ್ 7, 2020
19 °C
ನಿರಾಶೆ ಮೂಡಿಸಿದ ಬೆಳ್ಳಿಗದೆ ಪಂದ್ಯ

ಕುಸ್ತಿ: ಕಾರ್ತಿಕ್ ಕಾಟೆಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಗರದೇವತೆ ದುರ್ಗಾಂಬಿಕಾ ದೇವಿ ಜಾತ್ರೆ ಪ್ರಯುಕ್ತ ಇಲ್ಲಿನ ಬೀರಲಿಂಗೇಶ್ವರ ಕುಸ್ತಿ ಅಖಾಡದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಮೊದಲ ಕುಸ್ತಿ ಸಮಬಲ ಸಾಧಿಸಿತು.

ದೆಹಲಿಯ ಮೋನು ಹಾಗೂ ಹರಿಯಾಣದ ಅಜಯ್ ಗುಜ್ಜಾರ್ ನಡುವೆ ಈ ಪಂದ್ಯ ಆರಂಭದಲ್ಲಿ ಸಾಕಷ್ಟು ಕೂತುಹಲ ಕೆರಳಿಸಿತ್ತು. ಕೊನೆಯಲ್ಲಿ ಸಮಬಲ ಸಾಧಿಸುವ ಮೂಲಕ ಒಂದೂವರೆ ಕೆ.ಜಿ ಬೆಳ್ಳಿಗದೆ ಎತ್ತಿ ಹಿಡಿಯುವ ಪೈಲ್ವಾನನನ್ನು ನೋಡಲು ಕಾಯುತ್ತಿದ್ದ ಪ್ರೇಕ್ಷಕರಿಗೆ ನಿರಾಶೆ ಮೂಡಿಸಿತು.

ಇದಕ್ಕೂ ಮೊದಲು ನಡೆದ 2ನೇ ಪಂದ್ಯದಲ್ಲಿ ದಾವಣಗೆರೆಯ ಕ್ರೀಡಾ ಹಾಸ್ಟೆಲ್‌ನ  ಕ್ರೀಡಾಪಟು, ರಾಣೆಬೆನ್ನೂರಿನ ಕಾರ್ತಿಕ್ ಕಾಟೆ ಹರಿಯಾಣದ ಮನದೀಪ್ ಅವರನ್ನು ಸೋಲಿಸಿ ₹ 40 ಸಾವಿರ ಬಹುಮಾನ ಪಡೆದರು. ಸಾಕಷ್ಟು ರೋಚಕವಾಗಿದ್ದ ಈ ಪಂದ್ಯ ದಾವಣಗೆರೆಯ ಕುಸ್ತಿ ಪ್ರಿಯರನ್ನು ರಂಜಿಸಿತು.

ಸಾವಿರಾರು ಪ್ರೇಕ್ಷಕರು ಪೈಲ್ವಾನರ ಪಟ್ಟುಗಳನ್ನು ವೀಕ್ಷಿಸಿದರು. ಹಲಗೆ ಹೊಡೆಯುವ ಮೂಲಕ ಕುಸ್ತಿ ಪಟುಗಳನ್ನು ಹುರಿದುಂಬಿಸಲಾಯಿತು. ಶಿಳ್ಳೆ, ಚಪ್ಪಾಳೆಗಳ ಮೂಲಕ ಪೈಲ್ವಾರನ್ನು ಪ್ರೋತ್ಸಾಹಿಸುತ್ತಿದ್ದರು. ದೆಹಲಿಯ ಮೋನು ಹಾಗೂ ಹರಿಯಾಣದ ಅಜಯ್ ಗುಜ್ಜಾರ್ 45 ನಿಮಿಷಗಳ ಕಾಲ ಕಾದಾಡಿದರೂ ಯಾರೂ ಚಿತ್ ಆಗಲಿಲ್ಲ. ಆನಂತರ ಆಯೋಜಕರು 20 ನಿಮಿಷ ಗಡುವು ನೀಡಿದರು. ಆದರೂ ಯಾರೊಬ್ಬರೂ ಗೆಲುವು ಸಾಧಿಸಲಿಲ್ಲ. ಕೊನೆಗೆ ಬೆಳ್ಳಿಗದೆಯನ್ನು ತಮ್ಮಲ್ಲೇ ಉಳಿಸಿಕೊಂಡ ಆಯೋಜಕರು, ₹ 80 ಸಾವಿರವನ್ನು ಇಬ್ಬರಿಗೂ ಹಂಚಿದರು.  

ಮೂರು ದಿವಸಗಳ ಈ ಪಂದ್ಯದಲ್ಲಿ 250ಕ್ಕೂ ಹೆಚ್ಚು ಜೋಡಿಗಳು ತಮ್ಮ ಶಕ್ತಿ ಪ್ರದರ್ಶಿದವು. ₹ 15 ಲಕ್ಷ
ದಷ್ಟು ನಗದು ಬಹುಮಾನ ನೀಡಲಾಯಿತು. ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಂ.ಪಿ.ರೇಣುಕಾಚಾರ್ಯ ಹಾಗೂ ಉದ್ಯಮಿ ಅಥಣಿ ವೀರಣ್ಣ ಪೈಲ್ವಾನರನ್ನು ಪ್ರೋತ್ಸಾಹಿಸಿದರು. ಕುಸ್ತಿ ಸಮಿತಿ ಅಧ್ಯಕ್ಷ ಎಚ್.ಬಿ. ಗೋಣೆಪ್ಪ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಗೌಡ್ರ ಚನ್ನಬಸಪ್ಪ, ಪಾಲಿಕೆ ಸದಸ್ಯ ಸೋಗಿ ಶಿವಕುಮಾರ್ ಇದ್ದರು. ಕೆ.ಎಂ. ವೀರೇಶ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು