ಗುರುವಾರ , ಮಾರ್ಚ್ 30, 2023
24 °C
ಕ್ರೀಡಾ ತರಬೇತುದಾರರಿಗೆ ಅನುಕೂಲ ಮಾಡಿಕೊಡುವರೇ ಜಿಲ್ಲಾಧಿಕಾರಿ?

ದಾವಣಗೆರೆ: ಕೈತಪ್ಪುವ ಭೀತಿಯಲ್ಲಿ ಯಲ್ಲಮ್ಮ ಮಿಲ್ಸ್ ಗರಡಿ ಮನೆ ಜಾಗ

ಡಿ.ಕೆ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: 35 ವರ್ಷಗಳ ಇತಿಹಾಸವಿರುವ ಇಲ್ಲಿನ ತೋಳಹುಣಸೆಯ ಯಲ್ಲಮ್ಮ ಮಿಲ್ಸ್ ಗರಡಿ ಮನೆಯ ಜಾಗ ಕೈತಪ್ಪಿ ಹೋಗುವ ಭೀತಿ ಎದುರಾಗಿದೆ.

ರಾಷ್ಟ್ರೀಯ ಜವಳಿ ನಿಗಮದವರು (ನ್ಯಾಷನಲ್ ಟೆಕ್ಸ್‌ಟೈಲ್ ಕಾರ್ಪೊರೇಷನ್‌) ಈ ಜಾಗ ಬಿಡಬೇಕು ಎಂದು ಪಟ್ಟು ಹಿಡಿದಿದ್ದು, ಸಾವಿರಾರು ಕ್ರೀಡಾಪಟುಗಳಿಗೆ ತರಬೇತಿ ನೀಡಿದ ಈ ಗರಡಿ ಮನೆಯ ಜಾಗ ಕೈತಪ್ಪಿ ಹೋಗುವ ಭೀತಿ ಎದುರಿಸುತ್ತಿದೆ.

ದೇಸಿ ಕ್ರೀಡೆಗಳಾದ ಕುಸ್ತಿ, ಕಬಡ್ಡಿಗಳನ್ನು ಜೀವಂತವಾಗಿರಿಸುವಲ್ಲಿ ಶ್ರೀ ಯಲ್ಲಮ್ಮ ಮಿಲ್ಸ್ ಗರಡಿ ಮನೆ ಕೊಡುಗೆ ಅಪಾರ. ಈ ಗರಡಿಯಲ್ಲಿ ಪಳಗಿದ 150ಕ್ಕೂ ಹೆಚ್ಚು ಯುವಕರು ದೇಶ ಸೇವೆಗಾಗಿ ಭೂಸೇನೆ, ಸಿಆರ್‌ಪಿಎಫ್‌ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.   

ಅಕ್ಕಪಕ್ಕದ ಗ್ರಾಮಗಳಾದ ಚಂದ್ರನಹಳ್ಳಿ, ನಾಗೇನಹಳ್ಳಿ, ಚಟ್ಟೋಭನಹಳ್ಳಿ, ಕುರ್ಕಿ ಮುಂತಾದ ಗ್ರಾಮಗಳಿಂದಲೂ ಕುಸ್ತಿಪಟುಗಳು ಇಲ್ಲಿ ತರಬೇತಿ ಪಡೆದಿದ್ದಾರೆ. ಇಂತಹ ಇತಿಹಾಸ ಹೊಂದಿರುವ ಗರಡಿ ಮನೆಯನ್ನು ಖಾಲಿ ಮಾಡಿ ಎಂದು ಎನ್‌ಟಿಸಿಯವರು ಹೇಳುತ್ತಿದ್ದಾರೆ.

ಹಿರಿಯ ಕುಸ್ತಿಪಟು ರೇಖ್ಯಾನಾಯ್ಕ್ ಅವರ ಕಾಲದಿಂದಲೂ ತನ್ನದೇ ವೈಶಿಷ್ಟ್ಯವನ್ನು ಹೊಂದಿರುವ ಈ ಜಾಗದಲ್ಲಿ ಸಾಕಷ್ಟು ಕ್ರೀಡಾ ಪಟುಗಳು ತಯಾರಾಗಿದ್ದಾರೆ. ಕುಸ್ತಿ, ಕಬಡ್ಡಿ ಕ್ರೀಡೆಗಳಲ್ಲಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳನ್ನು ಗೆದ್ದು ತಂದು ಖ್ಯಾತಿ ಪಡೆದಿದ್ದಾರೆ. ದೇಶಕ್ಕಾಗಿ ಪದಕಗಳನ್ನು ತಂದಿದ್ದಾರೆ. 35 ವರ್ಷಗಳಿಂದಲೂ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪಂದ್ಯಾವಳಿಗಳನ್ನು ಆಯೋಜಿಸಿದೆ. ಯುವಕರಲ್ಲಿ ಕುಸ್ತಿಯ ಕಿಚ್ಚುಹಚ್ಚುವ ಕೆಲಸ ಮಾಡುತ್ತಿದೆ. 

ಅಂತರರಾಷ್ಟ್ರೀಯ ಕುಸ್ತಿ ತರಬೇತುದಾರ ಶಿವಾನಂದ್ ಅವರೂ ಇದೇ ಗರಡಿಮನೆಯಲ್ಲಿ ಪಳಗಿರುವುದು ವಿಶೇಷ. ಅಂತರರಾಷ್ಟ್ರೀಯ ಕ್ರೀಡಾಪಟು ಗಳಾದ ಅರ್ಜುನ್ ಹಲಕುರ್ಕಿ, ರಫೀಕ್ ಹೊಳಿ, ಕಾರ್ತಿಕ್ ಕಾಟೆ ಮುಂತಾದವರಿಗೆ ತರಬೇತಿ ನೀಡಿರುವ ಹೆಮ್ಮೆ ಇವರದು. ರಾಜ್ಯ ಪ್ರಶಸ್ತಿ ಪುರಸ್ಕೃತರೂ ಹೌದು. ಇವರ ಸಹೋದರ ಪೈಲ್ವಾನ್ ಸುರೇಶ್ ನಾಯ್ಕ್ ಹೆಸರಾಂತ ಕುಸ್ತಿಪಟು. ಮತ್ತೊಬ್ಬ ಸಹೋದರ ನಾಗರಾಜ್ ನಾಯ್ಕ್ ಕಬಡ್ಡಿ ಆಟಗಾರ. ಹಲವು ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿದ್ದಾರೆ.

ವಿವಾದ ಏನು?: ‘ಒಂದು ಎಕರೆಯ ಈ ಜಾಗವನ್ನು ಈ ಹಿಂದೆ ಯಲ್ಲಮ್ಮ ಕಾಟನ್, ವುಲ್ಲನ್ ಅಂಡ್ ಸಿಲ್ಕ್ ಮಿಲ್ಸ್‌ನವರು ನೋಡಿಕೊಳ್ಳುತ್ತಿದ್ದರು. ಆನಂತರ ನ್ಯಾಷನಲ್ ಟೆಕ್ಸ್‌ಟೈಲ್‌ ಕಾರ್ಪೊರೇಷನ್‌ ವಹಿಸಿಕೊಂಡಿತು. ಕೇಂದ್ರ ಸರ್ಕಾರದ ಜಾಗವನ್ನು ಆಸ್ಪತ್ರೆ, ಕ್ರೀಡೆಗಳಿಗೆ ಬಳಸಿಕೊಳ್ಳಬಹುದು ಎಂಬ ಕಾರಣಕ್ಕೆ ಅಂದಿನ ಜನರಲ್ ಮ್ಯಾನೇಜರ್ ಆಗಿದ್ದ ಎಸ್‌.ಕೆ.ಜಿ ರಾವ್ ಅವರು ನಮ್ಮ ತಂದೆಯವರಿಗೆ ಜಾಗವನ್ನು ಬಳಸಿಕೊಳ್ಳಲು ಅನುಮತಿ ನೀಡಿದ್ದರು. ಆ ಜಾಗಕ್ಕೆ ಅಂದು ₹ 20 ಸಾವಿರ ಶುಲ್ಕವನ್ನು ಭರಿಸಿದ್ದರು’ ಎಂದು ಕುಸ್ತಿ ತರಬೇತುದಾರ ಶಿವಾನಂದ್ ಹೇಳುತ್ತಾರೆ.

‘1983ರಿಂದಲೂ ನಾವು ಈ ಜಾಗದಲ್ಲಿ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿದ್ದೇವೆ. ಬಹಳಷ್ಟು ಜನ ಭಾರತೀಯ ಸೈನ್ಯದಲ್ಲಿ ಇದ್ದಾರೆ. ಈ ದೇಶಕ್ಕೆ ಕೊಡುಗೆಗಳನ್ನು ನೀಡಿದ್ದಾರೆ. ಏಕಾಏಕಿ ಜಾಗ ಕಸಿದುಕೊಳ್ಳುವುದು ತರವಲ್ಲ’ ಎನ್ನುತ್ತಾರೆ ಸಹೋದರ ನಾಗರಾಜ್.

‘ನಮ್ಮ ಅಣ್ಣ ಪೈಲ್ವಾನ್ ಸುರೇಶ್ ನಾಯ್ಕ ಸತ್ತಾಗ ಆ ಜಾಗದಲ್ಲಿಯೇ ಸಮಾಧಿ ಮಾಡಲಾಯಿತು. ಆಗ ಯಾವುದೇ ತಕರಾರು ಎತ್ತದ ಇಲಾಖೆ ಯವರು ಮೊನ್ನೆ ಅವರ ಸಮಾಧಿಯನ್ನು ನಿರ್ಮಾಣ ಮಾಡುತ್ತಿರುವಾಗ ತಕರಾರು ತೆಗೆದಿದ್ದಾರೆ. ಇದು ಯಾವ ನ್ಯಾಯ’ ಎಂಬುದು ನಾಗರಾಜ್ ಅವರ
ಪ್ರಶ್ನೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು