ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ:‘ಯುವನಿಧಿ’ಗೆ ಸಿಗದ ನಿರೀಕ್ಷಿತ ಸ್ಪಂದನೆ

‘ನಿರುದ್ಯೋಗಿ ಸ್ವಯಂ ಘೋಷಣೆಗೆ’ ನಿರಾಸಕ್ತಿ, ಅರ್ಧದಷ್ಟು ಫಲಾನುಭವಿಗಳಿಗೂ ಸಿಗದ ಭತ್ಯೆ
–ಜಿ.ಬಿ.ನಾಗರಾಜ್‌
Published 11 ಆಗಸ್ಟ್ 2024, 6:02 IST
Last Updated 11 ಆಗಸ್ಟ್ 2024, 6:02 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯ ಸರ್ಕಾರದ ‘ಐದನೇ ಗ್ಯಾರಂಟಿ’ ಯುವನಿಧಿ ಫಲಾನುಭವಿಯಾಗಲು ಪ್ರತಿ ತಿಂಗಳು ‘ನಿರುದ್ಯೋಗಿ’ ಎಂಬ ಸ್ವಯಂ ಘೋಷಣಾ ಪತ್ರ ನೀಡಲು ಪದವೀಧರರು ಹಿಂದೇಟು ಹಾಕುತ್ತಿರುವ ಪರಿಣಾಮ ಯೋಜನೆಗೆ ನಿರೀಕ್ಷಿತ ಸ್ಪಂದನೆ ಸಿಗುತ್ತಿಲ್ಲ. ಜಿಲ್ಲೆಯಲ್ಲಿ ನೋಂದಣಿಯಾಗಿರುವ 5,500 ನಿರುದ್ಯೋಗಿಗಳಲ್ಲಿ ಭತ್ಯೆ ಪಡೆಯುತ್ತಿರುವವರ ಸಂಖ್ಯೆ ಶೇ 50ರಷ್ಟು ಮೀರಿಲ್ಲ.

ಪದವೀಧರರಿಗೆ ಪ್ರತಿ ತಿಂಗಳು ₹ 3,000 ಹಾಗೂ ಡಿಪ್ಲೊಮಾ ಉತ್ತೀರ್ಣರಾದವರಿಗೆ ₹ 1,500 ನಿರುದ್ಯೋಗಿ ಭತ್ಯೆಯನ್ನು ರಾಜ್ಯ ಸರ್ಕಾರ ಜನವರಿಯಿಂದ ನೀಡುತ್ತಿದೆ. ಪದವೀಧರರಿಗಿಂತ ಡಿಪ್ಲೊಮಾ ಪೂರೈಸಿದವರಲ್ಲಿ ಭತ್ಯೆ ಪಡೆಯಲು ನಿರಾಸಕ್ತಿ ಇರುವುದು ಕಂಡುಬಂದಿದೆ. ಜಿಲ್ಲೆಯಲ್ಲಿ ನಿರುದ್ಯೋಗಿ ಭತ್ಯೆ ಪಡೆದ ಡಿಪ್ಲೊಮಾ ಫಲಾನುಭವಿಗಳ ಸಂಖ್ಯೆ 49 ಮಾತ್ರ.

2023ರಲ್ಲಿ ಪದವಿ ಅಥವಾ ಡಿಪ್ಲೊಮಾ ಉತ್ತೀರ್ಣರಾದವರು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು. ಪರೀಕ್ಷಾ ಫಲಿತಾಂಶ ಹೊರಬಿದ್ದ ಆರು ತಿಂಗಳ ಒಳಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಯೋಜನೆಯಡಿ ಜಿಲ್ಲೆಯಲ್ಲಿ 5,500 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿ ತಿಂಗಳು ಸ್ವಯಂ ಘೋಷಣಾ ಪತ್ರ ಒದಗಿಸಲು ಉತ್ಸುಕತೆ ತೋರದಿರುವುದರಿಂದ ಎಲ್ಲರಿಗೂ ಭತ್ಯೆ ಸಿಗುತ್ತಿಲ್ಲ.

‘ಉದ್ಯೋಗ ಸಿಕ್ಕಿಲ್ಲ’ ಅಥವಾ ‘ಉನ್ನತ ವ್ಯಾಸಂಗಕ್ಕೆ ಹೋಗಿಲ್ಲ’ ಎಂಬ ಸ್ವಯಂ ಘೋಷಣಾ ಪತ್ರವನ್ನು ಪ್ರತಿ ತಿಂಗಳು 25ನೇ ತಾರೀಖಿನ ಒಳಗೆ ಆನ್‌ಲೈನ್‌ ಮೂಲಕ ಸಲ್ಲಿಸಬೇಕು. ಈ ಘೋಷಣಾ ಪತ್ರ ಒದಗಿಸದೇ ಇದ್ದರೆ ಫಲಾನುಭವಿಗೆ ಆ ತಿಂಗಳ ಭತ್ಯೆ ದೊರೆಯುವುದಿಲ್ಲ. ತಾನು ನಿರುದ್ಯೋಗಿ ಎಂಬುದಾಗಿ ಘೋಷಣೆ ಮಾಡಿಕೊಳ್ಳಲು ಪದವೀಧರರು ಹಿಂದೇಟು ಹಾಕುತ್ತಿರುವುದರಿಂದ ಈ ಷರತ್ತು ಪಾಲನೆಯಾಗುತ್ತಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ.

‘ನಿರುದ್ಯೋಗಿ ಭತ್ಯೆ ಪಡೆಯುವವರ ಸಂಖ್ಯೆ ಇಳಿಮುಖವಾಗಿರುವ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಸ್ವಯಂ ಘೋಷಣಾ ಪತ್ರ ಒದಗಿಸುವಂತೆ ಅರಿವು ಮೂಡಿಸಲಾಗಿದೆ. ಉದ್ಯೋಗ ಪಡೆದವರ ಮಾಹಿತಿಯನ್ನು ಭವಿಷ್ಯ ನಿಧಿ (ಪಿಎಫ್‌) ಸಂಸ್ಥೆಗಳು ಒದಗಿಸುತ್ತಿವೆ. ಇಂತಹ ಫಲಾನುಭವಿಗಳಿಗೆ ಭತ್ಯೆ ಸ್ಥಗಿತಗೊಂಡಿದೆ’ ಎನ್ನುತ್ತಾರೆ ಜಿಲ್ಲಾ ಉದ್ಯೋಗಾಧಿಕಾರಿ ಡಿ.ರವೀಂದ್ರ.

2024ರಲ್ಲಿ ಪದವಿ ಅಥವಾ ಡಿಪ್ಲೊಮಾ ಪೂರೈಸಿದವರು ಭತ್ಯೆ ಫಲಾನುಭವಿಗಳಾಗಲು ಕಾಯುತ್ತಿದ್ದಾರೆ. ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವನ್ನು ಸಂಪರ್ಕಿಸುತ್ತಿದ್ದಾರೆ. ಸರ್ಕಾರದ ಅನುಮೋದನೆ ಸಿಗದಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT