ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಚ್ಛಾಶಕ್ತಿ ಕೊರತೆಯಿಂದ ಭಾಷೆ ಶಕ್ತಿಹೀನ

Last Updated 9 ಜುಲೈ 2012, 7:25 IST
ಅಕ್ಷರ ಗಾತ್ರ

ಹರಿಹರ: `ರೊಕ್ಕ ಕೊಟ್ಟು ಸೇವೆ ಮಾಡುವ ಜನರಿದ್ದಾರೆ ಎಂದರೆ ನಂಬುವುದು ಕಷ್ಟ~ ಎಂದು ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥೆ ಮಲ್ಲಿಕಾ ಘಂಟಿ ಮಾರ್ಮಿಕವಾಗಿ ನುಡಿದರು.
ನಗರದಲ್ಲಿ ಭಾನುವಾರ ನಡೆದ ಕಸಾಪ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.


ಕೇಂದ್ರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚುನಾವಣೆ ಸ್ಪರ್ಧಿಸಿದರೆ ಪ್ರಚಾರ ಪತ್ರ ವ್ಯವಹಾರಕ್ಕೆ ಕನಿಷ್ಠ ್ಙ 5ರಿಂದ ್ಙ 10 ಲಕ್ಷ ವೆಚ್ಚಾಗುತ್ತದೆ. ಕನ್ನಡದ ಸೇವೆ ಮಾಡಲು ಸಾಕಷ್ಟು ಆಸಕ್ತರಿದ್ದಾರೆ. ಆದರೆ, ಅಷ್ಟೊಂದು ಹಣ ವೆಚ್ಚ ವ್ಯಯಿಸಿ ಸೇವೆ ಮಾಡಲು ಎಷ್ಟು ಜನರಿಗೆ ಶಕ್ತಿ ಇದೆ? ಕೇಂದ್ರ ಅಧ್ಯಕ್ಷರಿಂದ ತಾಲ್ಲೂಕು ಘಟಕ ಅಧ್ಯಕ್ಷರವರೆಗೂ ಸಾಮಾಜಿಕ ಹೊಣೆಗಾರಿಕೆ ಜೀವಂತವಾಗಿಯೇ ಎಂಬ ಅನುಮಾನ ಕಾಡುತ್ತದೆ ಎಂದರು.

ಸರ್ಕಾರಿ ಶಾಲಾ ಶಿಕ್ಷಕರು, ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರು ತಮ್ಮ ಮಕ್ಕಳನ್ನು ಯಾವ ಮಧ್ಯಮದ ಶಾಲೆಗೆ ಸೇರಿಸುತ್ತಿದ್ದಾರೆ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳಲಿ. ಇಂಥವರೇ ಹೆಚ್ಚಾಗಿರುವ ಪರಿಷತ್ತು ನೈತಿಕ ಬಲ ಕಳೆದುಕೊಂಡಿದೆ. ಇದರಿಂದಾಗಿ ಸರ್ಕಾರಗಳೂ ಪರಿಷತ್ತಿನ ಹೋರಾಟಕ್ಕೆ ಕಿಮ್ಮತ್ತು ನೀಡುತ್ತಿಲ್ಲ. ಭಾವನಾತ್ಮಕ ಹಾಗೂ ಭೌತಿಕ ಭ್ರಷ್ಟತೆ ತ್ಯಜಿಸಿ ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುವ ಮೂಲಕ ಸಾಹಿತ್ಯ ಪರಿಷತ್ತು ಸದೃಢವಾಗಬೇಕಿದೆ ಎಂದರು.

ಆಂಗ್ಲಭಾಷೆ ಕಲಿಯದಿದ್ದರೆ, ಜೀವನ ಸಾಗಿಸುವುದು ದುಸ್ತರ ಎಂಬ ಭಾವನೆ ಜನಸಾಮಾನ್ಯರಲ್ಲಿ ಮೂಡಿದೆ. ಕನ್ನಡ ಭಾಷೆಗೆ ಅನ್ನ ನೀಡುವ ಶಕ್ತಿ ಬಂದಾಗ, ಭಾಷೆಯ ಬಗ್ಗೆ ಹೆಚ್ಚಿನ ಗೌರವ ಮೂಡುತ್ತದೆ.  ಇಚ್ಛಾಶಕ್ತಿಯ ಕೊರತೆ ಕಾರಣ ಕನ್ನಡ ಭಾಷೆ ಶಕ್ತಿಹೀನವಾಗಿದೆ. ಸರ್ಕಾರಗಳು ನೀಡುವ ಅನುದಾನ ಪಡೆದಾಗ ಅದು ಹೇಳಿದಂತೆ ಕೇಳಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಇದರಿಂದ ಪರಿಷತ್ತಿನ ನೈತಿಕ ಹೊಣೆಗಾರಿಕೆ ಕುಸಿಯುತ್ತದೆ. ಸಾಹಿತ್ಯ ಪರಿಷತ್ತು ಆರ್ಥಿಕವಾಗಿ ಸಬಲವಾದರೂ, ಸಾಮಾಜಿಕವಾಗಿ ದುರ್ಬಲವಾಗುತ್ತಿದೆ ಎಂದು ಆತಂಕಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತ ಜಿ. ಸುರೇಶಗೌಡ ಮಾತನಾಡಿ, ಪರಿಷತ್ತು ಕೇವಲ ಸಮ್ಮೇಳನಗಳನ್ನು ಮಾಡುವ ಕಾರ್ಯ ಬಿಟ್ಟು ಮನೆ ಮನೆಗೂ ಸಾಹಿತ್ಯ ಮುಟ್ಟಿಸುವ ಕೆಲಸ ಮಾಡಲಿ. ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆಯಲ್ಲಿ ಸಾಮಾಜಿಕ ನ್ಯಾಯ ಪಾಲನೆ ಆಗಿದೆ. ಆದರೆ, ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆಯಲ್ಲಿ ಸಾಮಾಜಿಕ ನ್ಯಾಯ ಪಾಲನೆ ಮಾಡಿಲ್ಲ ಎಂದು ದೂರಿದರು.

ಕಸಾಪ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಎಂ.ಎನ್. ಬಸವರಾಜಪ್ಪ ನೂತನ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ ಅವರಿಗೆ ಕನ್ನಡ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

ಎಸ್‌ಜೆವಿಪಿ ಸ್ವಾಯತ್ತ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಸಿ.ವಿ. ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಕುಂ.ಬಾ. ಸದಾಶಿವಪ್ಪ. ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಸ್.ಎಚ್. ಹೂಗಾರ್, ಕಸಾಪ ಜಿಲ್ಲಾ ಘಟಕದ ಕಾರ್ಯದರ್ಶಿ ಎಚ್. ಮಲ್ಲಿಕಾರ್ಜುನ, ಕೋಶಾಧ್ಯಕ್ಷ ಎಂ.ಪಿ. ಚಂದ್ರಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT