ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಲೋಕಸಭೆ ಚುನಾವಣೆ: ಜೆಡಿಯುಗೆ 60 ಸ್ಥಾನ'

Last Updated 8 ಜುಲೈ 2013, 9:34 IST
ಅಕ್ಷರ ಗಾತ್ರ

ದಾವಣಗೆರೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಂಯುಕ್ತ ಜನತಾದಳ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದ್ದು, 50ರಿಂದ 60 ಸ್ಥಾನ ಗಳಿಸಲಿದೆ ಎಂದು ಪಕ್ಷದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜಿ.ಕೆ.ಸಿ.ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಅಲ್ಪಸಂಖ್ಯಾತರ ವಿಭಾಗ ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

`ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಸಮಾಜವಾದಿ ಪಕ್ಷ ಮೊದಲಾದವು ಬಯಸಿವೆ. ನಾನು ವೀರಪ್ಪ ಮೊಯಿಲಿ ವಿರುದ್ಧ ಸ್ಪರ್ಧಿಸುತ್ತೇನೆ. ಅಧ್ಯಕ್ಷರು (ಡಾ.ಎಂ.ಪಿ. ನಾಡಗೌಡ) ಬಾಗಲಕೋಟೆಯಲ್ಲಿ ಕಣಕ್ಕಿಳಿಯಲಿದ್ದಾರೆ' ಎಂದು ತಿಳಿಸಿದರು.

ಕಾರ್ಯಕರ್ತರು ಚುನಾವಣೆಗೆ ಸಜ್ಜಾಗಬೇಕು. ಇತರ ಪಕ್ಷಗಳಲ್ಲಿರುವ ಜನತಾ ಪರಿವಾರದ ಮುಖಂಡರನ್ನು ಸೇರಿಸಿಕೊಳ್ಳಬೇಕು' ಎಂದು ಕರೆ ನೀಡಿದರು.

ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ರಾಷ್ಟ್ರದಲ್ಲಿಯೇ `ಅತಿ ಭ್ರಷ್ಟ ಸರ್ಕಾರ' ಎನಿಸಿಕೊಂಡಿತು. ಕಚ್ಚಾಟದಲ್ಲಿಯೇ ಕಾಲ ತಳ್ಳಿತು. ಹೀಗಾಗಿ, ಬಿಜೆಪಿ ಸಹವಾಸವೇ ಬೇಡ ಎಂದು ಜನ ನಿರ್ಧರಿಸಿದರು. ಜೆಡಿಯು ಪ್ರಬಲವಾಗಿರಲಿಲ್ಲ. ಇದರಿಂದ ಕಾಂಗ್ರೆಸ್‌ಗೆ ಹೆಚ್ಚು ಮತ ಬಂದಿತು. ಕಾಂಗ್ರೆಸ್‌ಗೆ ಶೇ 36ರಷ್ಟು ಮಾತ್ರ ಮತಗಳು ಬಂದಿವೆ. ಹೀಗಾಗಿ, ಇದನ್ನು `ಬಹುಮತ' ಎನ್ನಲಾಗದು. ಬಿಜೆಪಿ ಕಚ್ಚಾಟದಿಂದ ಬೇಸತ್ತಿದ್ದ ಜನ ಕಾಂಗ್ರೆಸ್ ಬೆಂಬಲಿಸಿದರಷ್ಟೇ ಎಂದು ವಿಶ್ಲೇಷಿಸಿದರು.

ಕೇಂದ್ರದಲ್ಲಿ 9 ವರ್ಷಗಳಿಂದ ಯುಪಿಎ ಸರ್ಕಾರ ನಡೆಸುತ್ತಿದೆ. ಈ ಅವಧಿಯಲ್ಲಿ ರೂ 5 ಲಕ್ಷ ಕೋಟಿಗೂ ಹೆಚ್ಚಿನ ಭ್ರಷ್ಟಾಚಾರ ನಡೆದಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಸ್ವಾತಂತ್ರ್ಯ ಬಂದಾಗಿನಿಂದ ಇಷ್ಟೊಂದು ಬೆಲೆ ಏರಿಕೆ ಆಗಿರಲಿಲ್ಲ. ಬಡ ಹಾಗೂ ಮಧ್ಯಮ ವರ್ಗದವರು ತತ್ತರಿಸಿ ಹೋಗಿದ್ದಾರೆ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ದೇಶಾದ್ಯಂತ ಸಮಸ್ಯೆ ಸೃಷ್ಟಿಸಿದೆ ಎಂದು ಟೀಕಿಸಿದರು.

ದಲಿತರಂತೆ ಮುಸ್ಲಿಮರಿಗೂ ಕಾಂಗ್ರೆಸ್‌ನಿಂದ ಅನ್ಯಾಯವಾಗಿದೆ. ಮತ ಬ್ಯಾಂಕ್‌ಗೆ ಮಾತ್ರ ಅಲ್ಪಸಂಖ್ಯಾತರನ್ನು ಬಳಸಿಕೊಂಡ ಕಾಂಗ್ರೆಸ್, ಸೌಲಭ್ಯ ಒದಗಿಸಲಿಲ್ಲ. ಸಾಚಾರ್ ಸಮಿತಿ ವರದಿ ಹಾಗೆಯೇ ಇದೆ. ಮುಸ್ಲಿಮರು ಅತಿ ಕೆಟ್ಟ ಸ್ಥಿತಿಯಲ್ಲಿ ಇರಲು ಕಾಂಗ್ರೆಸ್ ಕಾರಣ ಎಂದು ದೂರಿದರು.

`ಪ್ರಧಾನಿ ರೇಸ್‌ನಲ್ಲಿ ನರೇಂದ್ರ ಮೋದಿ ಬರುತ್ತಾರೆ. ಇದರಿಂದ ಅಲ್ಪ ಸಂಖ್ಯಾತರಿಗೆ ತೊಂದರೆ ಯಾಗುತ್ತದೆ' ಎಂಬಿತ್ಯಾದಿ `ನೆರಳಿನೊಂದಿಗೆ ಗುದ್ದಾಟ'ದ ಹೇಳಿಕೆ ಮೂಲಕ ಕಾಂಗ್ರೆಸ್ ಜನರಿಗೆ ಸುಳ್ಳು ಹೇಳುತ್ತಿದೆ. ಹೀಗೆ ಹೇಳುವುದರಿಂದ ಅಲ್ಪಸಂಖ್ಯಾತರ ಮತ ಬರುತ್ತವೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ. ಆದರೆ, ವಾಸ್ತವವಾಗಿ ಮೋದಿ ಆಟ ನಡೆಯದು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 120-130 ಸ್ಥಾನ ಗಳಿಸುವುದೂ ಕಷ್ಟ. ಕಾಂಗ್ರೆಸ್ 140ಕ್ಕೆ ತೃಪ್ತಿಪಡಬೇಕು. ಬಿಜೆಪಿ ಕೆಲ ತಿಂಗಳಲ್ಲಿ 4 ಕಡೆ (ಹಿಮಾಚಲ ಪ್ರದೇಶ, ಕಾಂಗ್ರೆಸ್, ಜಾರ್ಖಂಡ್, ಬಿಹಾರ) ಅಧಿಕಾರ ಕಳೆದುಕೊಂಡಿದೆ. ಅದಕ್ಕೆ ಅಧಿಕಾರ ಇರುವುದು ಕೆಲ ಸಣ್ಣರಾಜ್ಯಗಳಲ್ಲಷ್ಟೇ. ಹೀಗಿರುವಾಗ ಬಿಜೆಪಿ ಹೇಗೆ ಅಧಿಕಾರ ಪಡೆಯುತ್ತದೆ ಎಂದು ಪ್ರಶ್ನಿಸಿದರು.

ಜೆಡಿಯು ಮುಗಿಸಲು ಹಿಂದಿನಿಂದಲೂ ಬಿಜೆಪಿ ಹವಣಿಸುತ್ತಿದೆ. ಈ ಬಗ್ಗೆ ಎಚ್ಚರ ವಹಿಸಬೇಕು. ಜೆಡಿಎಸ್, ಕೆಜೆಪಿ `ಕುಟುಂಬದ ಪಕ್ಷಗಳಾಗಿದ್ದು', ಅವುಗಳಿಂದ ಪರಿಣಾಮವಾಗದು. ಈ ಸಂದರ್ಭದಲ್ಲಿ ಕಾರ್ಯಕರ್ತರು, ಮುಖಂಡರು ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಹೇಳಿದರು.

ಜೆಡಿಯು ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಮುದ್ದಾಪುರದ ರಹಮಾನ್ ಅಧ್ಯಕ್ಷತೆ ವಹಿಸಿದ್ದರು. ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಸೈಯದ್ ಮೆಹಬೂಬ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಜಿ.ಮಲ್ಲಿಕಾರ್ಜುನ, ರಾಜ್ಯ ಪ.ಜಾತಿ ಹಾಗೂ ಪಂಗಡ ವಿಭಾಗದ ಸಂಚಾಲಕ ಕಿರಣ್‌ಕುಮಾರ್, ಮುಖಂಡರಾದ ದಸ್ತಗೀರ್‌ಸಾಬ್, ಆಂಜನೇಯ, ಮಹಮ್ಮದ್ ಷರೀಫ್, ಶಬೀರ್ ಅಹಮದ್, ಅನ್ವರ್ ಷರೀಫ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಯುವ ಜೆಡಿಯು ಮುಖಂಡ ಗೋಣಿವಾಡ ರುದ್ರೇಶ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT