ಶಿವಮೊಗ್ಗ ಜಿಲ್ಲೆ: ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆ

ಮಂಗಳವಾರ, ಏಪ್ರಿಲ್ 23, 2019
31 °C

ಶಿವಮೊಗ್ಗ ಜಿಲ್ಲೆ: ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆ

Published:
Updated:
Prajavani

ಶಿವಮೊಗ್ಗ: ಜಿಲ್ಲೆಯಲ್ಲಿ ಏ.23ರಂದು ನಡೆಯುವ ಲೋಕಸಭಾ ಚುನಾವಣೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದ್ದು, ಒಟ್ಟು 16,75,925 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ತಿಳಿಸಿದರು.

ಮಂಗಳವಾರ ‍ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ, ಒಟ್ಟು 4,042 ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು  ತಿಳಿಸಿದರು.

ಮತಗಟ್ಟೆಗಳಲ್ಲಿ ಕನಿಷ್ಠ ಸೌಲಭ್ಯ: ಮತಗಟ್ಟೆಗಳಲ್ಲಿ ಕುಡಿಯುವ ನೀರು, ನೆರಳು, ಶೌಚಾಲಯ ಸೇರಿ ಕನಿಷ್ಠ ಮೂಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈ ಬಾರಿ ಪ್ರತಿ ಮತಗಟ್ಟೆಗಳಲ್ಲಿ ಮತದಾರರಿಗೆ ಆರೋಗ್ಯ ಸೌಲಭ್ಯ ಒದಗಿಸಲು ಮೆಡಿಕಲ್ ಕಿಟ್ ಒದಗಿಸಲಾಗುತ್ತಿದೆ ಎಂದರು.

ಮತದಾನಕ್ಕಾಗಿ ಹಸುಗೂಸಿನೊಂದಿಗೆ ಮತಗಟ್ಟೆಗೆ ತೆರಳುವ ತಾಯಂದಿರಿಗೆ ಮಗುವನ್ನು ನೋಡಿಕೊಳ್ಳಲು ನೆರವಾಗುವಂತೆ ಪ್ರತಿ ಮತಗಟ್ಟೆಗಳಲ್ಲಿ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗುತ್ತಿದೆ. ಒಂದಕ್ಕಿಂತ ಹೆಚ್ಚು ಮತದಾನ ಕೇಂದ್ರವಿರುವ ಕಟ್ಟಡಗಳ ಆವರಣದಲ್ಲಿ ಮತದಾರರ ಸಹಾಯಕ್ಕಾಗಿ ಸಹಾಯ ಕೇಂದ್ರವನ್ನು ತೆರೆಯಲಾಗುತ್ತಿದೆ. ಮತದಾನದ ದಿನ ಮತಗಟ್ಟೆಗಳಲ್ಲಿ ಅಗತ್ಯ ನೆರವು ಒದಗಿಸಲು ಎನ್‍ಸಿಸಿ, ಎನ್‍ಎಸ್‍ಎಸ್, ಸ್ಕೌಟ್ಸ್ ವಿದ್ಯಾರ್ಥಿಗಳಿಂದ ಸ್ವಯಂಸೇವೆ ಪಡೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಸಖಿ ಮತಗಟ್ಟೆ:

ಮಹಿಳೆಯರನ್ನು ಮತದಾನದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಬಾರಿ ಜಿಲ್ಲೆಯಲ್ಲಿ ಒಟ್ಟು 14 ಸಖಿ ಮತಗಟ್ಟೆಗಳನ್ನು ತೆರೆಯಲಾಗುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ 2 ಸಖಿ ಮತಗಟ್ಟೆಗಳನ್ನು ತೆರೆಯಲಾಗುವುದು. ಇದೇ ರೀತಿ ಬುಡಕಟ್ಟು ಜನರನ್ನು ಮತದಾನಕ್ಕೆ ಆಕರ್ಷಿಸಲು 3 ಬುಡಕಟ್ಟು ಮತದಾನ ಕೇಂದ್ರಗಳನ್ನು ಆರಂಭಿಸಲಾಗುವುದು. ಅಂಗವಿಕಲ ಚುನಾವಣಾ ಅಧಿಕಾರಿ, ಸಿಬ್ಬಂದಿಯನ್ನು ಒಳಗೊಂಡ 2 ಅಂಗವಿಕಲ ಮತದಾನ ಕೇಂದ್ರ ತೆರೆಯಲಾಗುತ್ತಿದೆ ಎಂದು ಹೇಳಿದರು.

ಮತದಾನದ ಕೊನೆಯ 48 ಗಂಟೆಗಳ ಅವಧಿಯಲ್ಲಿ ಚುನಾವಣಾ ಪ್ರಚಾರ ಉದ್ದೇಶಕ್ಕಾಗಿ ಧ್ವನಿವರ್ಧಕ ಬಳಸುವುದನ್ನು, ಬಹಿರಂಗ ಪ್ರಚಾರ ಕೈಗೊಳ್ಳುವುದನ್ನು ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಎಲ್ಲಾ ರೀತಿಯ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಹೇಳಿದರು.

ಮಕ್ಕಳಿಗೆ ಅಣಕು ಮತದಾನ:

ಹಿರಿಯರಿಗೆ ಮತದಾನದ ಅರಿವು ಮೂಡಿಸುವ ಉದ್ದೇಶದಿಂದ ಏ.19 ರಂದು ಮಕ್ಕಳಿಂದ ಅಣಕು ಮತದಾನದ ವ್ಯವಸ್ಥೆ  ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಣಕು ಮತದಾನ ಕೇಂದ್ರ ತೆರೆಯಲಾಗುತ್ತಿದ್ದು, 6ರಿಂದ 18ವರ್ಷದವರೆಗಿನ ಮಕ್ಕಳು ಇಲ್ಲಿ ಅಣಕು ಮತ ಚಲಾಯಿಸಬಹುದು. ಮಕ್ಕಳು ತಮ್ಮ ಹೆಸರನ್ನು 9945387650 ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಬಹುದಾಗಿದ್ದು, ಅಣಕು ಮತದಾನದ ಸಂದರ್ಭದಲ್ಲಿ ಯಾವುದಾದರೂ ಗುರುತಿನ ಚೀಟಿಯನ್ನು ತೋರಿಸಬಹುದು ಎಂದು ತಿಳಿಸಿದರು. 

ಹೆಚ್ಚುವರಿ ಜಿಲ್ಲಾಧಿಕಾರಿ ಪೂರ್ಣಿಮಾ, ಜಿಲ್ಲಾ ಚುನಾವಣಾ ಪ್ರಚಾರ ರಾಯಭಾರಿ ಸ್ಟ್ಯಾನಿ ಜಾರ್ಜ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !