ಭಾನುವಾರ, ಆಗಸ್ಟ್ 18, 2019
22 °C

ಜಿಲ್ಲಾಧಿಕಾರಿ ದಯಾನಂದ ವರ್ಗಾವಣೆ, ಶಿವಕುಮಾರ್ ನೇಮಕ

Published:
Updated:
Prajavani

ಶಿವಮೊಗ್ಗ: ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ದಯಾನಂದ ಅವರು 2018 ಆ.7ರಂದು ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ವರ್ಷ ತುಂಬುವ ಒಂದು ದಿನ ಮೊದಲೇ ಅವರ ವರ್ಗಾವಣೆ ಆದೇಶ ಹೊರಬಿದ್ದಿದೆ. ಅವರನ್ನು ಬೆಂಗಳೂರಿನ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯದ ಆಯುಕ್ತರಾಗಿ ನೇಮಿಸಲಾಗಿದೆ. 2010ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿ ಕೆ.ಬಿ.ಶಿವಕುಮಾರ್ ಅವರನ್ನು ಶಿವಮೊಗ್ಗಕ್ಕೆ ವರ್ಗಾವಣೆ ಮಾಡಲಾಗಿದೆ.

ಜಿಲ್ಲಾಧಿಕಾರಿಯಾಗಿ ಒಂದು ವರ್ಷದಲ್ಲಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಮಂಗನಕಾಯಿಲೆ ಉಲ್ಬಣಗೊಂಡ ಅರಳಗೋಡು ಶಾಲೆಯಲ್ಲೇ ಗ್ರಾಮ ವಾಸ್ತವ್ಯ ಮಾಡುವ ರಿಸ್ಕ್ ತೆಗೆದುಕೊಂಡಿದ್ದ ಅವರು ಮಲೆನಾಡಿನ ಜನರ ಮನ್ನಣೆ ಗಳಿಸಿದ್ದರು. ದಶಕದಿಂದ ನಿಂತು ಹೋಗಿದ್ದ ಸಹ್ಯಾದ್ರಿ ಉತ್ಸವಕ್ಕೆ ಮರು ಚಾಲನೆ ನೀಡಿ, ಯಶಸ್ವಿಗೊಳಿಸಿದ್ದರು. ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿಗೆ ಆದ್ಯತೆ ನೀಡಿ ಹತ್ತು ಹಲವು ಕಾರ್ಯಕ್ರಮ ಆಯೋಜಿಸಿದ್ದರು.

ಪರಿಸರ ಪ್ರೇಮಿಯೂ ಆದ ಅವರು ಗಿಡ, ಮರ ಸಂರಕ್ಷಿಸುವ, ಪೋಷಿಸುವ, ಪರಿಸರ ಕಾಳಜಿ ತೋರುವ ಕುಟುಂಬಗಳ ಮನೆಗೇ ತೆರಳಿ ಜಿಲ್ಲಾಡಳಿತದಿಂದ ಪ್ರಶಸ್ತಿ ನೀಡಿ ಗೌರವಿಸಿದ್ದರು. ಸರ್ಕಾರಿ ನೌಕರರ ಭವನ ಸಮೀಪ ಸೈನಿಕ ಉದ್ಯಾನ ನಿರ್ಮಿಸಿದ್ದರು. ಜನ ಸಾಮಾನ್ಯರಿಗೆ ಸುಲಭವಾಗಿ ಸಿಗುತ್ತಿದ್ದರು. ಜಿಲ್ಲೆಯ ಮೂಲೆಮೂಲೆಗೆ ತೆರಳಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದರು. ಕ್ರಿಯಾಶೀಲ ಜಿಲ್ಲಾಧಿಕಾರಿ ಎಂದು ಹೆಸರಾಗಿದ್ದರು.

Post Comments (+)