ವಿಭೂತಿಕೆರೆ, ಅಂಜನಾಪುರದಲ್ಲಿ ತಯಾರಾಗುವ ಇಷ್ಟಲಿಂಗಗಳಿಗೆ ಹೊರರಾಜ್ಯದಲ್ಲೂ ಬೇಡಿಕೆ

ಬುಧವಾರ, ಮಾರ್ಚ್ 20, 2019
23 °C
ವಿಭೂತಿಕೆರೆಯ 11 ಕುಟುಂಬ, ಅಂಜನಾಪುರ ಗ್ರಾಮದಲ್ಲಿ ಒಂದು ಕುಟುಂಬದಿಂದ ತಯಾರು

ವಿಭೂತಿಕೆರೆ, ಅಂಜನಾಪುರದಲ್ಲಿ ತಯಾರಾಗುವ ಇಷ್ಟಲಿಂಗಗಳಿಗೆ ಹೊರರಾಜ್ಯದಲ್ಲೂ ಬೇಡಿಕೆ

Published:
Updated:
Prajavani

ರಾಮನಗರ : ಇಲ್ಲಿನ ವಿಭೂತಿಕೆರೆ ಗ್ರಾಮದಲ್ಲಿ 11 ಕುಟುಂಬ ಮತ್ತು ಅಂಜನಾಪುರ ಗ್ರಾಮದಲ್ಲಿ ಒಂದು ಕುಟುಂಬ ತಯಾರು ಮಾಡುವ ಇಷ್ಟಲಿಂಗಗಳು ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳಲ್ಲಿಯೂ ಪ್ರಸಿದ್ದಿ ಪಡೆದಿವೆ. 

ವೀರಶೈವರು ಧರಿಸುವ ಇಷ್ಟಲಿಂಗಗಳನ್ನು ತಯಾರಿಸಲು ಮತ್ತು ದೇವಾಲಯಗಳ ವಿಗ್ರಹಗಳಿಗೆ ಕಂತೆ ಕಟ್ಟಲು ಈ ಕುಟುಂಬಗಳು 60 ವರ್ಷಗಳಿಂದಲೂ ತಮ್ಮ ಜೀವನೋಪಾಯಕ್ಕಾಗಿ ಶ್ರದ್ಧಾ ಭಕ್ತಿಯಿಂದ ಇಷ್ಟಲಿಂಗ ತಯಾರಿಕೆಯನ್ನೇ ಕಾಯಕ ಮಾಡಿಕೊಂಡು ಬರುತ್ತಿವೆ.

60 ವರ್ಷಗಳ ಹಿಂದೆ ಚನ್ನಪಟ್ಟಣ ತಾಲ್ಲೂಕಿನ ಬೇವೂರು ಸಿದ್ದರಾಮಣ್ಣ ಎಂಬುವರು ವಿಭೂತಿಕೆರೆ ಗ್ರಾಮದಲ್ಲಿ ಬಂದು ಇಷ್ಟಲಿಂಗು ತಯಾರಿಕೆ ಆರಂಭಿಸಿದರು. ಅವರಿಂದ ಕಲಿತ ಶಿವಲಿಂಗಯ್ಯ, ಕಂತೆ ಸಿದ್ದಪ್ಪನವರ ಕುಟುಂಬಗಳು ಇಂದು ಹತ್ತಾರು ಕುಟುಂಬಗಳಾಗಿ ವಿಂಗಡಣೆಗೊಂಡು ಕಾರ್ಯನಿರ್ವಹಿಸುತ್ತಿವೆ.

ಸಿದ್ದಗಂಗಾ ಮಠ, ಮಹಂತರ ಮಠ, ಶಿವನಹಳ್ಳಿ ಮಠ, ಎಡಿಯೂರು ಸಿದ್ದಲಿಂಗೇಶ್ವರ ಕ್ಷೇತ್ರ ಮುಂತಾದ ಪ್ರಸಿದ್ಧ ಕ್ಷೇತ್ರಗಳಲ್ಲಿ, ಮಠಗಳಲ್ಲಿ ತಮ್ಮ ಕಾಯಕ ಮಾಡುತ್ತಾ ಕಸುಬನ್ನು ಮುಂದುವರೆಸುತ್ತಿದ್ದಾರೆ.

‘ಇಂದಿಗೂ ಅನೇಕ ರಾಜಕಾರಣಿಗಳು, ಮಠಗಳ ಸ್ವಾಮೀಜಿಗಳು, ವೀರಶೈವ ಧರ್ಮ ಪರಿಪಾಲನೆ ಮಾಡುತ್ತಿರುವವರು ಅಲ್ಲದೆ ಬೇರೆ ಜನಾಂಗದ ಇಷ್ಟಲಿಂಗ ಪೂಜಿಸುವ ಜನರು ಸಹ ನಮ್ಮ ಗ್ರಾಮಕ್ಕೆ ಬಂದು ನಮ್ಮ ಸ್ಥಳದಿಂದಲೇ ಲಿಂಗುಗಳನ್ನು ತೆಗೆದುಕೊಂಡು ಹೋಗುತ್ತಾರೆ’ ಎನ್ನುತ್ತಾರೆ ಇಷ್ಟಲಿಂಗು ತಯಾರಕ ಶಿವಾನಂದ.

ತಮಿಳುನಾಡಿನಲ್ಲಿ ಸಿಗುವ ಗೇರು ಬೀಜ, ಕರ್ಪೂರ, ತುಪ್ಪ, ಗೇರು ಎಣ್ಣೆ, ರಾಳ, ಅರಗು, ಇಂಗಲಿಂಗ, ಶಿಲಾರಸ, ಶಾಂತರಸ, ರುಮಾಮಸ್ತಗಿ ಸೇರಿಸಿ ಗೇರು ಬೀಜದಿಂದ ಎಣ್ಣೆ ತೆಗೆದು ಹದಮಾಡಿ ಚಂದ್ರಕಾಂತ ಶಿಲೆಯ ಪೀಠಗಳನ್ನು ಸೇರಿಸಿ ಲಿಂಗಗಳಿಗೆ ಕಂತೆ ಬಿಗಿದು ಲಿಂಗಗಳನ್ನು ತಯಾರು ಮಾಡಲಾಗುತ್ತದೆ ಎಂದು ತಿಳಿಸಿದರು.

ಶಿವರಾತ್ರಿ ಹಬ್ಬದ ಸಮಯದಲ್ಲಿ ಇಷ್ಟಲಿಂಗಗಳಿಗೆ ಬೇಡಿಕೆ ಹೆಚ್ಚಿದ್ದು ಉಳಿದ ದಿನಗಳಲ್ಲಿ ಸಾಮಾನ್ಯವಾಗಿರುತ್ತದೆ ವೀರಶೈವ ಸಭೆ ಸಮಾರಂಭಗಳಲ್ಲಿ ಅಂಗಡಿ ಹಾಕಿ ಮಠ ಮಾನ್ಯಗಳ ಸಭೆ ಸಮಾರಂಭಗಳಲ್ಲಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಮಾರಾಟ ಮಾಡುತ್ತೇವೆ ವಿಭೂತಿಕೆರೆ-, ಅಂಜನಾಪುರದಲ್ಲಿ ತಯಾರಾಗುವ ಲಿಂಗಗಳಿಗೆ ಭಾರಿ ಬೇಡಿಕೆ ಇದೆ ಎನ್ನುತ್ತಾರೆ ವಿಭೂತಿಕೆರೆ ಮಹದೇವಸ್ವಾಮಿ, ಅಂಜನಾಪುರ ರುದ್ರೇಶ್.

ಬರಹ ಇಷ್ಟವಾಯಿತೆ?

 • 19

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !