ಹುಬ್ಬಳ್ಳಿ: ಕೇಂದ್ರ ಆಯುಷ್ ಸಚಿವಾಲಯ ಉತ್ತರಾಖಾಂಡದ ಡೆಹರಾಡೂನ್‌ನಲ್ಲಿ 10ನೇ ವಿಶ್ವ ಆಯುರ್ವೇದ ಕಾಂಗ್ರೆಸ್ ಆರೋಗ್ಯ ಸಮ್ಮೇಳನ ಜಾಗೂ ಪ್ರದರ್ಶನ ಆಯೋಜಿಸಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ಹುಬ್ಬಳ್ಳಿಯ ಆಯುರ್ವೇದ ಸೇವಾ ಸಮಿತಿಯ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ವತಿಯಿಂದ ಭಾನುವಾರ ಕೆಎಲ್ಇ ಟೆಕ್ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ಯಾಟ್‌ಲೈಟ್ ಸೆಮಿನಾರ್ ಉದ್ಘಾಟಿಸಿ ಮಾತನಾಡಿದರು. ಕೇಂದ್ರದ ಆಯುಷ್ ಸಚಿವಾಲಯದಿಂದ ಸಮ್ಮೇಳನ ನಡೆಯುತ್ತಿದ್ದು, 50 ರಾಷ್ಟ್ರಗಳ 5 ಸಾವಿರ ಆಯುರ್ವೇದ ತಜ್ಞರು ಭಾಗವಹಿಸಲಿದ್ದಾರೆ ಎಂದರು,
ಇದರ ಅಂಗವಾಗಿ ದೇಶದೆಲ್ಲೆಡೆ 20 ಉಪಗ್ರಹ ಆಧಾರಿತ ಸೆಮಿನಾರ್ ನಡೆಸಲಾಗುತ್ತಿದ್ದು, ಇಂದಿನ ಕಾರ್ಯಕ್ರಮ ಕೂಡಾ ಇದರ ಅಂಗವಾಗಿದೆ. ಆಯುರ್ವೇದವು ಭಾರತದ ಅತ್ಯಂತ ಪ್ರಾಚೀನ ಸಂಸ್ಕೃತಿ ಮತ್ತು ಔಷಧಿ ಪದ್ಧತಿ ಕೂಡ ಹೌದು. ಇಂತಹ ಆಯುರ್ವೇದವನ್ನು ಉತ್ತೇಜಿಸಿ, ಉಳಿಸಿ ಬೆಳೆಸುವ ಕಾರ್ಯವನ್ನು ಭಾರತ ಸರ್ಕಾರ ಆಯುಷ್ ಸಚಿವಾಲಯದ ಮೂಲಕ ಮಾಡುತ್ತಿದೆ ಎಂದರು.
ಕೇಂದ್ರ ಆಯುಷ್ ಸಚಿವಾಲಯ ಆಯುರ್ವೇದದ ಬಗ್ಗೆ ದೇಶ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಾ ಬಂದಿದೆ. ಪರಿಣಾಮ ನಮ್ಮ ಭಾರತದ ಆಯುರ್ವೇದ ಜಗತ್ತಿನಲ್ಲೆಲ್ಲಾ ಪಸರಿಸುತ್ತಿದೆ. 2014 ರಲ್ಲಿ ಆಯುರ್ವೇದಕ್ಕೆ ಅಷ್ಟು ಮಹತ್ವವೇ ಇರಲಿಲ್ಲ. ಆಯುರ್ವೇದ ಔಷಧಿ ಕೇವಲ ₹ 24 ಸಾವಿರ ಕೋಟಿ ವಹಿವಾಟು ಇತ್ತು. ನಮ್ಮ ಸರ್ಕಾರ ಬಂದ ಮೇಲೆ ಈಗ ₹ 1.40 ಲಕ್ಷ ಕೋಟಿ ದಾಟಿದೆ. ₹ 500 ಕೋಟಿ ಇದ್ದ ಬಜೆಟ್ ಈಗ ₹ 3 ಸಾವಿರ ಕೋಟಿ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿ ಅಧ್ಯಕ್ಷ ಗೋವಿಂದ ಜೋಶಿ ಮಾತನಾಡಿ, ಜಗತ್ತಿನಲ್ಲಿ ಆಯುರ್ವೆದಗಳ ಉತ್ಪನ್ನಕ್ಕೆ ಅಪಾರ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಆಯುರ್ವೇದವನ್ನು ಹೆಚ್ಚು ಪ್ರಚುರಗೊಳಿಸಬೇಕು ಎಂದು ಹೇಳಿದರು.
ಕಾರ್ಯದರ್ಶಿ ಸಂಜೀವ್ ಜೋಶಿ, ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ.ಎ.ಎಸ್.ಪ್ರಶಾಂತ್, ಆಯುರ್ವೇದ ಕಾಲೇಜಿನ ಡಾ.ಜೆ.ಆರ್.ಜೋಶಿ, ಡಾ.ಪ್ರಮೋದ್ ಕಟ್ಟಿ ಹಾಗೂ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.