ಸೋಮವಾರ, ಏಪ್ರಿಲ್ 12, 2021
26 °C
ಒಂದೂವರೆ ತಿಂಗಳಲ್ಲಿ 1,118 ಪ್ರಕರಣ; 6.18 ಲಕ್ಷ ದಂಡ

ಶಾಲೆಗೆ ಮಕ್ಕಳನ್ನು ಸಾಗಿಸುವ ಆಟೊ, ಶಾಲಾ ವಾಹನಗಳ ವಿರುದ್ಧ ಪೊಲೀಸ್ ಕಾರ್ಯಾಚರಣೆ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಿಯಮಬಾಹಿರವಾಗಿ ಶಾಲೆಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಆಟೊ ಮತ್ತು ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ಅವಳಿನಗರದ ಸಂಚಾರ ಪೊಲೀಸರು, ಒಂದೂವರೆ ತಿಂಗಳಲ್ಲಿ 2,534 ಪ್ರಕರಣ ದಾಖಲಿಸಿದ್ದಾರೆ. ಒಟ್ಟು ₹6.18 ಲಕ್ಷ ದಂಡ ವಿಧಿಸಿದ್ದಾರೆ,

ಕಳೆದ ಜೂನ್‌ ತಿಂಗಳಲ್ಲಿ ಶಾಲೆಗಳು ಆರಂಭವಾಗುತ್ತಿದ್ದಂತೆ, ಶಾಲಾ ವಾಹನಗಳು ಹಾಗೂ ಆಟೊಗಳ ವಿರುದ್ಧ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

ಈ ಪೈಕಿ ಆಟೊಗಳ ವಿರುದ್ಧವೇ 1,074 ಪ್ರಕರಣ ದಾಖಲಿಸಿ ₹5.80 ಲಕ್ಷ ದಂಡ ಹಾಗೂ ಶಾಲಾ ವಾಹನಗಳ ವಿರುದ್ಧ 113 ಪ್ರಕರಣ ದಾಖಲಿಸಿ, ₹38,600 ದಂಡ ವಸೂಲಿ ಮಾಡಿದ್ದಾರೆ. ಸುರಕ್ಷತಾ ನಿಯಮ ಪಾಲಿಸದ 352 ಆಟೊ ಚಾಲಕರ ಹಾಗೂ 78 ಶಾಲಾ ವಾಹನ ಚಾಲಕರು ಸೇರಿದಂತೆ, ಒಟ್ಟು 430 ಮಂದಿಯ ಚಾಲನಾ ಪರವಾನಗಿ ರದ್ದುಗೊಳಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ(ಆರ್‌ಟಿಒ) ಶಿಫಾರಸು ಮಾಡಿದ್ದಾರೆ. 

ದನಗಳಂತೆ ತುಂಬಿರುತ್ತಾರೆ:

‘ಆಟೊಗಳಲ್ಲಿ ವಿದ್ಯಾರ್ಥಿಗಳನ್ನು ಮನಸೋ ಇಚ್ಛೆ ತುಂಬಿಕೊಂಡು ಹೋಗುತ್ತಾರೆ. ತನ್ನ ಸೀಟಿನ ಬಳಿ ಬ್ಯಾಗುಗಳನ್ನು ನೇತು ಹಾಕಿಕೊಳ್ಳುವ ಚಾಲಕ, ಮುಂದಿನ ಸೀಟಿನಲ್ಲಿಯೂ ಮಕ್ಕಳನ್ನು ಕೂರಿಸಿಕೊಂಡು ಹೋಗುತ್ತಾನೆ. ಆಟೊಗಳಲ್ಲಿ ಮಕ್ಕಳನ್ನು ದನಗಳಂತೆ ತುಂಬಿಕೊಂಡು ಹೋಗುವುದನ್ನು ನೋಡಿಯೂ ಪೋಷಕರು ತಮ್ಮ ಮಕ್ಕಳನ್ನು ಆಟೋ ಹತ್ತಿಸುತ್ತಾರೆ’ ಎಂದು ಸಂಚಾರ ವಿಭಾಗದ ಡಿಸಿಪಿ ಶಿವಕುಮಾರ ಗುಣಾರೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಬೆಳಿಗ್ಗೆ ಶಾಲೆ ಆರಂಭವಾಗುವ ಮತ್ತು ಸಂಜೆ ಮುಗಿಯುವ ಹೊತ್ತಿಗೆ ಶಾಲೆಗಳ ಎದುರು ಆಟೊಗಳ ದಂಡು ನಿಂತಿರುತ್ತವೆ. ಕೆಲ ಚಾಲಕರನ್ನು ಹೊರತುಪಡಿಸಿದರೆ, ಉಳಿದವರೆಲ್ಲರೂ ಮಿತಿಗಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯುತ್ತಾರೆ. ಮಕ್ಕಳನ್ನು ಶಾಲೆಗೆ ಕರೆದೊಯ್ಯುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ಚಾಲಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಜತೆಗೆ, ನಿತ್ಯ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದರು.

ಶಾಲೆ–ಪೋಷಕರ ಜವಾಬ್ದಾರಿ ಹೆಚ್ಚು:

‘ವಿದ್ಯಾರ್ಥಿಗಳ ಬಗ್ಗೆ ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರ ಜವಾಬ್ದಾರಿ ಹೆಚ್ಚು. ಆಟೊಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಬರುತ್ತಿದ್ದರೆ, ಆ ಮಾರ್ಗವನ್ನು ಗುರುತಿಸಿ ಅಲ್ಲಿಗೊಂದು ಶಾಲಾ ವಾಹನ ನಿಯೋಜಿಸಬೇಕು. ಕಡಿಮೆ ಬಾಡಿಗೆಗೆ ಕರೆದೊಯ್ಯುತ್ತಾರೆ ಎಂದು ಪೋಷಕರು ತಮ್ಮ ಮಕ್ಕಳನ್ನು ಆಟೊಗಳಲ್ಲಿ ಅಸುರಕ್ಷಿತವಾಗಿ ಕಳಿಸಬಾರದು’ ಎಂದು ಅವರು ಸಲಹೆ ನೀಡಿದರು.

ಸರಕು ವಾಹನಗಳಿಗೂ ದಂಡದ ಬಿಸಿ:

ಸರಕು ಸಾಗಿಸುವ ವಾಹನಗಳಲ್ಲಿ ನಿಯಮಬಾಹಿರವಾಗಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿರುವ ಪೊಲೀಸರು 1,347 ಪ್ರಕರಣ ದಾಖಲಿಸಿ, ₹2 ಲಕ್ಷ ದಂಡ ವಿಧಿಸಿದ್ದಾರೆ. ಈ ಪೈಕಿ, 400 ಮಂದಿಯ ಚಾಲನಾ ಪರವಾನಗಿ ರದ್ದುಪಡಿಸುವಂತೆ ಆರ್‌ಟಿಒಗೆ ಪತ್ರ ಬರೆದಿದ್ದಾರೆ.

‘ಸರಕು ಸಾಗಣೆಯ ವಾಹನಗಳಲ್ಲಿ ಶಾಲಾ ಮಕ್ಕಳು, ಕೂಲಿ ಕಾರ್ಮಿಕರು, ಹಿರಿಯ ನಾಗರಿಕರು ಹಾಗೂ ಮಹಿಳೆಯರ ಅಪಾಯಕಾರಿ ರೀತಿಯಲ್ಲಿ ಕರೆದೊಯ್ಯುವುದು ಕಾನೂನುಬಾಹಿರವಾಗಿದೆ. ಅಂತಹ ವಾಹನಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಸಿದ್ದೇವೆ’ ಎಂದು ಡಿಸಿಪಿ ಗುಣಾರೆ ತಿಳಿಸಿದರು.

ಶಾಲಾ ಮಕ್ಕಳ ಸುರಕ್ಷತೆಯ ನಿಯಮಗಳು

* ಪ್ರತಿ ಶಾಲೆಯಲ್ಲಿ ಶಾಲಾ ವಾಹನ ಸುರಕ್ಷತಾ ಸಮಿತಿ ರಚಿಸಬೇಕು. ಸಮಿತಿ ವಾಹನಗಳನ್ನು ಪರಿಶೀಲಿಸಿ ಅನುಮೋದನೆ ನೀಡಬೇಕು.

* ವಾಹನ ಚಾಲಕನಿಗೆ ಕನಿಷ್ಠ 5 ವರ್ಷ ಅನುಭವ ಇರಬೇಕು. ಆತನ ವಿರುದ್ಧ ಅಪಘಾತದ ದೂರು ದಾಖಲಾಗಿರಬಾರದು. ಕುಡಿದು ಚಾಲನೆ ಮಾಡಿದ ಬಗ್ಗೆ ದಂಡ ಕಟ್ಟಿರಬಾರದು. ಆತನ ಸಂಪೂರ್ಣ ಮಾಹಿತಿಯನ್ನು ಶಾಲೆ ಸಮಿತಿ ಹೊಂದಿರಬೇಕು.

* ವಾಹನವು ಪರ್ಮಿಟ್‌ ಹೊಂದಿರರುವ ಜತೆಗೆ, ಸುಸ್ಥಿತಿಯಲ್ಲಿರಬೇಕು. 15 ವರ್ಷಗಳಿಗಿಂತ ಹಳೆಯದಾಗಿರಬಾರದು. 40 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಹೋಗದಂತೆ ಸ್ಪೀಡ್‌ ಗವರ್ನರ್‌ ಅಳವಡಿಸಿರಬೇಕು.

* ವಾಹನದಲ್ಲಿರುವ ಸೀಟುಗಳಿಗಿಂತ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಸಾಗಿಸಬಾರದು. ಅಲ್ಲದೆ ಮಕ್ಕಳು ಬ್ಯಾಗಗಳನ್ನು ಸ್ಥಳಾವಕಾಶ ಇರಬೇಕು.

* ವಾಹನಕ್ಕೆ ವಿಮಾ ಇರಬೇಕು. ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹಾಗೂ ಅಗ್ನಿಶಾಮಕ ಉಪಕರಣ ಹೊಂದಿರಬೇಕು.

* ವಾಹನ ಸಂಪೂರ್ಣವಾಗಿ ಹಳದಿ ಬಣ್ಣ ಹೊಂದಿರಬೇಕು. ವಾಹನದ ಹಿಂದೆ ಮತ್ತು ಮುಂದೆ ಶಾಲಾ ವಾಹನ ಎಂದು ದಪ್ಪ ಅಕ್ಷರದಲ್ಲಿ (100 ಮಿ.ಮೀ.ಗಿಂತ ಹೆಚ್ಚು) ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆದಿರಬೇಕು. ಉಳಿದ ಎರಡು ಕಡೆ ಶಾಲೆಯ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ಬರೆದಿರಬೇಕು.

* ಮಕ್ಕಳನ್ನು ಹತ್ತಿಸಿಕೊಳ್ಳಲು ಮತ್ತು ಸುರಕ್ಷಿತವಾಗಿ ಇಳಿಸಿ ಪಾಲಕರಿಗೆ ಒಪ್ಪಿಸಲು ಪ್ರತಿಯೊಂದು ವಾಹನದಲ್ಲಿ  ಸಿಬ್ಬಂದಿಯನ್ನು ನೇಮಿಸಬೇಕು.

* ವಾಹನಕ್ಕೆ ಅಧಿಕೃತ ಕಂಪನಿಗಳ ಎಲ್‌ಪಿಜಿ ಕಿಟ್‌ಗಳನ್ನು ಮಾತ್ರ ಅಳವಡಿಸಬೇಕು. ಸಿಲಿಂಡರ್‌ ಮೇಲೆ ಆಸನದ ವ್ಯವಸ್ಥೆ ಮಾಡುವಂತಿಲ್ಲ. ಸಂಪೂರ್ಣ ಪಾರದರ್ಶಕ ಗಾಜುಗಳನ್ನು ಅಳವಡಿಸಿರಬೇಕು. ಬಾಗಿಲುಗಳು ಸರಳವಾಗಿ ತೆರೆದುಕೊಳ್ಳುವಂತೆ ಲಾಕ್‌ಗಳನ್ನು ಅಳವಡಿಸಬೇಕು. ತುರ್ತು ನಿರ್ಗಮನ ಬಾಗಿಲು ಕಡ್ಡಾಯವಾಗಿರಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.