ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ವಲಯ: 1,80,000 ಸಸಿಗಳು ಸಿದ್ಧ

ಅಂಚಟಗೇರಿ, ಚನ್ನಾಪುರ, ಬುಡ್ನಾಳ್‌ ಅರಣ್ಯದಲ್ಲಿ ಸಸಿಗಳನ್ನು ಬೆಳೆಸಲು ಯೋಜನೆ
Published 2 ಜೂನ್ 2023, 12:57 IST
Last Updated 2 ಜೂನ್ 2023, 12:57 IST
ಅಕ್ಷರ ಗಾತ್ರ

ಸ್ಮಿತಾ ಶಿರೂರ

ಹುಬ್ಬಳ್ಳಿ: ಮಳೆಗಾಲ ಆರಂಭವಾಗುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಹುಬ್ಬಳ್ಳಿ ವಲಯದಲ್ಲಿ ಈ ವರ್ಷ 1,80,000 ಸಸಿಗಳನ್ನು ನೆಡಲು ಸಿದ್ಧತೆ ನಡೆಸಿದೆ. ಕಳೆದ ವರ್ಷ 60,000 ಸಸಿಗಳನ್ನು ಬೆಳೆಸಲಾಗಿತ್ತು. ಈ ವರ್ಷ ಅವುಗಳ ಸಂಖ್ಯೆ ದ್ವಿಗುಣಗೊಂಡಿದೆ.  ಜೊತೆಗೆ ಸಸಿಗಳ ದರವೂ ಹೆಚ್ಚಾಗಿದೆ. 

‘₹ 1 ಇದ್ದ ಸಸಿ ದರ ಈಗ ₹ 7 ಮತ್ತು ₹ 3 ಇದ್ದ ದರ ₹ 23ಕ್ಕೆ ಏರಿಕೆಯಾಗಿದೆ. ಈ ಮೊದಲು ಸಸಿ ಸಿದ್ಧಪಡಿಸಲು ಎಷ್ಟೇ ಖರ್ಚಾದರೂ ಕಡಿಮೆ ದರದಲ್ಲೇ ಸಸಿ ವಿತರಿಸಲಾಗುತಿತ್ತು. ಈಗ ಸಸಿ ಸಿದ್ಧಪಡಿಸಲು ತಗುಲಿದ ವೆಚ್ಚದಲ್ಲೇ ಮಾರಲು ಸರ್ಕಾರ ಆದೇಶಿಸಿದೆ’ ಎಂದು ಅರಣ್ಯ ಇಲಾಖೆಯ ಹುಬ್ಬಳ್ಳಿ ವಲಯದ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಶ್ರೀಧರ ತೆಗ್ಗಿನಮನಿ ತಿಳಿಸಿದರು.

‘ವನಮಹೋತ್ಸವದ ಸಂದರ್ಭದಲ್ಲಿ ನಗರದ ವಿವಿಧ ಶಾಲೆ, ಕಾಲೇಜುಗಳು, ಸಂಘ–ಸಂಸ್ಥೆಗಳು ಪ್ರತಿ ವರ್ಷ ಅರಣ್ಯ ಇಲಾಖೆಯಿಂದ ಸಸಿಗಳನ್ನು ಪಡೆದು ನೆಡುತ್ತಿವೆ. ಇವರಿಗೆ ನೀಡುವ ಸಸಿಗಳನ್ನು ಉಚಿತವಾಗಿ ನೀಡಬೇಕೆ ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ’ ಎಂದು ಅವರು ತಿಳಿಸಿದರು.

1,80,000 ಸಸಿಗಳಲ್ಲಿ 25,000 ಸಸಿಗಳನ್ನು ಅರಣ್ಯ ಇಲಾಖೆ ವತಿಯಿಂದ ನೆಡಲಾಗುತ್ತದೆ. ಉಳಿದವನ್ನು ರೈತರು ಹಾಗೂ ಇತರ ಸಂಘ–ಸಂಸ್ಥೆಗಳಿಗೆ ನೀಡಲಾಗುತ್ತದೆ. ಹುಬ್ಬಳ್ಳಿ, ಕುಂದಗೋಳ ಹಾಗೂ ನವಲಗುಂದ ತಾಲ್ಲೂಕುಗಳು ಹುಬ್ಬಳ್ಳಿ ವಲಯಕ್ಕೆ ಬರುತ್ತವೆ. ಈ ವರ್ಷ ಅಂಚಟಗೇರಿ, ಚನ್ನಾಪುರ ಮತ್ತು ಬುಡ್ನಾಳ್‌ ಅರಣ್ಯಗಳಲ್ಲಿ ಸಸಿಗಳನ್ನು ನೆಡಲು ಯೋಜಿಸಲಾಗಿದೆ. ಹುಬ್ಬಳ್ಳಿ ನಗರದ ಕುಸುಗಲ್‌ ರಸ್ತೆಯ 13 ಕಿ.ಮೀ. ವ್ಯಾಪ್ತಿಯಲ್ಲೂ 900 ಸಸಿಗಳನ್ನು ನೆಟ್ಟು ಅರಣ್ಯೀಕರಣಗೊಳಿಸುವುದು ಇಲಾಖೆಯ ಗುರಿಯಾಗಿದೆ.

ಪ್ರತಿ ವರ್ಷ ಅರಣ್ಯ ಇಲಾಖೆಯ ಬುಡ್ನಾಳ್‌ ನರ್ಸರಿಯಲ್ಲಿ ಸಸಿಗಳು ಸಿದ್ಧವಾಗುತ್ತವೆ. ಮಳೆ ಆರಂಭವಾದರೆ ಜೂನ್‌ 5 ವನಮಹೋತ್ಸವದಿಂದ ಸಸಿ ವಿತರಣೆ ಆರಂಭ ಆಗಲಿದೆ. ಒಂದೂವರೆ ತಿಂಗಳಲ್ಲೇ ಎಲ್ಲ ಸಸಿಗಳು ಖಾಲಿಯಾಗುವುದು ವಾಡಿಕೆ.

ಅರಣ್ಯ ಇಲಾಖೆಯಲ್ಲಿ 6X9 ಹಾಗೂ 8X12 ಇಂಚು ಅಳತೆಯ ಬ್ಯಾಗ್‌ಗಳಲ್ಲಿ ಸಸಿಗಳು ಲಭ್ಯವಿವೆ. 10X16 ಹಾಗೂ 14x20 ಇಂಚು ಅಳತೆಯ ಬ್ಯಾಗ್‌ಗಳಲ್ಲಿ ಬೆಳೆಸಿದ ಸಸಿಗಳನ್ನು ಇಲಾಖೆಯಿಂದ ನೆಡಲಾಗುತ್ತದೆ.

‘ಬಿದಿರು, ನೇರಳೆ, ಹೊಂಗೆ, ತಪಸಿ, ತಾರೆ, ಸಿಲ್ವರ್‌ ಓಕ್‌, ಹಲಸು, ಮಹಾಗನಿ, ಹೆಬ್ಬೇವು ಮೊದಲಾದ ಸಸಿಗಳನ್ನು ಬೆಳೆಸಲು ಇಲ್ಲಿ ಆದ್ಯತೆ ನೀಡಲಾಗಿದೆ. ಬಿದಿರನ್ನು ಬೆಳೆಸಲು ನವಲಗುಂದ ಭಾಗದಲ್ಲಿ ರೈತರು ಒತ್ತು ನೀಡುತ್ತಿದ್ದಾರೆ. ಉಳಿದಂತೆ ಬಿದಿರು, ಸಾಗವಾನಿ, ಹೆಬ್ಬೇವು, ಸಿಲ್ವರ್‌ ಓಕ್‌ ಗಿಡಗಳಿಗೆ ಬೇಡಿಕೆ ಇದೆ’ ಎಂದು ತೆಗ್ಗಿನಮನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT