ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಿಂದ 2,700 ಮಂದಿ ಹಜ್‌ ಯಾತ್ರೆಗೆ

ಹಜ್ ಸಮಿತಿ ಅಧ್ಯಕ್ಷ ಮಹ್ಮದ್ ರೌಫುದ್ದೀನ್ ಕಚೇರಿವಾಲೆ ಹೇಳಿಕೆ
Last Updated 22 ಮೇ 2022, 16:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಜೂನ್ ಮೊದಲ ವಾರದಲ್ಲಿ ಕರ್ನಾಟಕದಿಂದ 2,700 ಮಂದಿ ಮುಸ್ಲಿಮರು ಹಜ್‌ ಯಾತ್ರೆ ಕೈಗೊಳ್ಳಲಿದ್ದಾರೆ. ಕೋವಿಡ್ ಕಾರಣದಿಂದಾಗಿ ಎರಡು ವರ್ಷ ಸ್ಥಗಿತಗೊಂಡಿದ್ದ ಯಾತ್ರೆಯು ಮತ್ತೆ ಆರಂಭವಾಗಿದ್ದು, ರಾಜ್ಯ ಸರ್ಕಾರ ಯಾತ್ರೆಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡುತ್ತಿದೆ’ ಎಂದು ರಾಜ್ಯ ಹಜ್ ಸಮಿತಿ ಅಧ್ಯಕ್ಷರೌಫುದ್ದೀನ್ ಕಚೇರಿವಾಲೆ ಹೇಳಿದರು.

‘ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡದಿಂದ 156, ಬೆಳಗಾವಿ 172, ಗದಗ 18, ಹಾವೇರಿ 34 ಹಾಗೂ ಕಾರವಾರದಿಂದ 53 ಮಂದಿ ಸೇರಿದಂತೆ 450ಕ್ಕೂ ಹೆಚ್ಚು ಮಂದಿ ಯಾತ್ರೆ ಹೋಗುತ್ತಿದ್ದಾರೆ.ಐದೂ ಜಿಲ್ಲೆಯಿಂದ ಹೊರಡಲಿರುವವರಿಗೆ ಯಾತ್ರೆ ಕುರಿತು ಈಗಾಗಲೇ ತರಬೇತಿ ನೀಡಲಾಗುತ್ತಿದೆ’ ಎಂದು ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸ್ಥಳೀಯ ಅಂಜುಮನ್‌ ಸಂಸ್ಥೆಯ ಮನವಿಗೆ ಸ್ಪಂದಿಸಿ, ಉತ್ತರ ಕರ್ನಾಟಕದಿಂದ 450ಕ್ಕೂ ಹೆಚ್ಚು ಮಂದಿ ಹಜ್‌ ಯಾತ್ರೆ ಕೈಗೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಯಾತ್ರೆಗೆ ತೆರಳುವವರಿಗೆ ಕೋವಿಡ್-19 ಮುಂಜಾಗ್ರತಾ ಲಸಿಕೆ ನೀಡುವ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದೆ’ ಎಂದರು.

ನಿಲ್ದಾಣದ ಬಳಿ ಹಜ್ ಭವನ

‘ಉತ್ತರ ಕರ್ನಾಟಕ ಭಾಗದ ಬಹು ದಿನಗಳ ಬೇಡಿಕೆಯಂತೆ ಹುಬ್ಬಳ್ಳಿಯಲ್ಲಿ ₹30 ಕೋಟಿ ವೆಚ್ಚದಲ್ಲಿ ಹಜ್ ಭವನ ನಿರ್ಮಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ, ವಿಮಾನ ನಿಲ್ದಾಣ ಬಳಿ ಒಂದು ಎಕರೆ ಸರ್ಕಾರಿ ಜಾಗವನ್ನು ಗುರುತಿಸಲಾಗಿದೆ. ಇದಕ್ಕೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ಈ ಭಾಗದ ಬಿಜೆಪಿ ನಾಯಕರು ಸಮ್ಮತಿ ಸೂಚಿಸಿದ್ದಾರೆ. ಭವನ ನಿರ್ಮಾಣವಾದರೆ ಧಾರ್ಮಿಕ ಕಾರ್ಯಕ್ರಮಗಳು, ಹಜ್ ಯಾತ್ರಿಕರಿಗೆ ತರಬೇತಿ ಸೇರಿದಂತೆ ವಿವಿಧ ಉದ್ದೇಶಗಳಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.

ಮುಖಂಡರಾದ ಕಬೀರ್ ಅಹ್ಮದ, ಇಫ್ತಿಯಾಜ್ ಮುಲ್ಲಾಘಿ, ಖಲಂದರ, ಡಾ. ಮೌಸೇನ್, ನಾಜೀರ ತಂಬೂರಿ ಇದ್ದರು.

ತರಬೇತಿ ಶಿಬಿರ ಉದ್ಘಾಟನೆ

ಅಂಜುಮನ್ ಸಂಸ್ಥೆಯು ನಗರದ ಘಂಟಿಕೇರಿಯಲ್ಲಿ ಹಜ್ ಯಾತ್ರಿಕರಿಗೆ ಆಯೋಜಿಸಿದ್ದ ತರಬೇತಿ ಶಿಬಿರವನ್ನು ರೌಫುದ್ದೀನ್ ಕಚೇರಿವಾಲೆ ಉದ್ಘಾಟಿಸಿದರು. ಧಾರವಾಡ, ಗದಗ, ಬೆಳಗಾವಿ, ಹಾವೇರಿ ಹಾಗೂ ಉತ್ತರಕನ್ನಡ ಜಿಲ್ಲೆಯ 300ಕ್ಕೂ ಹೆಚ್ಚು ಯಾತ್ರಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.

ಹಜ್ ಸಮಿತಿ ಸದಸ್ಯರಾದ ಖುಸ್ರೊ ಖುರೇಷಿ, ಚಾಂದ್‌ ಪಾಷ, ಮುಯೀದ್ದೀನ್, ಮೊಹಮ್ಮದ್ ಅಹ್ಮದ್, ಅಂಜುಮನ್ ಸಂಸ್ಥೆ ಅಧ್ಯಕ್ಷ ಎಂ.ಸಿ. ಸವಣೂರ, ಉಪಾಧ್ಯಕ್ಷ ಅಲ್ತಾಫ ಕಿತ್ತೂರ, ಬಶೀರ ಹಳ್ಳೂರ, ಅಬ್ದುಲ್ ಮುನಾಫ್, ದಾದಾಯತ್ ಖೈರಾತಿ, ಉಲ್ಮಾ–ಇ– ಕರಂ ಶಿಕ್ಷಣ ಮಂಡಳಿ ಸದಸ್ಯರು, ಆಸ್ಪತ್ರೆ ಮಂಡಳಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT