ಹುಬ್ಬಳ್ಳಿ: ಮಹಾನಗರ ಪಾಲಿಕೆಯು ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಸುಸಜ್ಜಿತ 50 ಬಸ್ ತಂಗುದಾಣಗಳನ್ನು ನಿರ್ಮಿಸಲು ಮುಂದಾಗಿದೆ. ವಿಶೇಷವೆಂದರೆ, ಇದಕ್ಕಾಗಿ ಪಾಲಿಕೆ ಬಿಡಿಗಾಸನ್ನೂ ಖರ್ಚು ಮಾಡುತ್ತಿಲ್ಲ. ಬದಲಿಗೆ, ಖಾಸಗಿ ಏಜೆನ್ಸಿಯೊಂದು ನಿರ್ಮಿಸಿ ಕೊಡುತ್ತಿರುವ ಈ ತಂಗುದಾಣಗಳಿಂದ ಪಾಲಿಕೆಯ ಬೊಕ್ಕಸಕ್ಕೆ ವಾರ್ಷಿಕ ₹22 ಲಕ್ಷ ಆದಾಯ ಬರಲಿದೆ.
ಬೆಂಗಳೂರಿನ ಅವಿನಾಶ್ ಆ್ಯಡ್ಸ್ ಔಟ್‌ಡೋರ್ ಅಡ್ವರ್ಟೈಸಿಂಗ್ ಏಜೆನ್ಸಿಯು ಪ್ರತಿ ತಂಗುದಾಣವನ್ನು ಅಂದಾಜು ₹5 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿದೆ. ರಾಜಧಾನಿಯಲ್ಲಿ ಈಗಾಗಲೇ ತಂಗುದಾಣಗಳನ್ನು ನಿರ್ಮಿಸಿರುವ ಏಜೆನ್ಸಿ, ಅವಳಿನಗರದಲ್ಲೂ ನಿರ್ಮಿಸಲು ಮುಂದೆ ಬಂದಿದೆ. ಅದಕ್ಕಾಗಿ, ಪಾಲಿಕೆಯು ಅವಳಿನಗರದ 50 ಸ್ಥಳಗಳನ್ನು ಏಜೆನ್ಸಿಗೆ ಗುರುತಿಸಿ ಕೊಟ್ಟಿದೆ.
ಡಿಬಿಒಟಿ ಮಾದರಿ: ‘ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ (ಪಿಪಿಪಿ) ಡಿಬಿಒಟಿ (ವಿನ್ಯಾಸ, ನಿರ್ಮಾಣ, ಕಾರ್ಯಾಚರಣೆ, ವರ್ಗಾವಣೆ) ಮಾದರಿ
ಯಲ್ಲಿ ತಂಗುದಾಣಗಳು ನಿರ್ಮಾಣವಾಗುತ್ತಿವೆ’ ಎಂದು ಪಾಲಿಕೆಯು ಕಂದಾಯ ವಿಭಾಗದ ಅಧಿಕಾರಿ ಆನಂದ ಕಲ್ಲೊಳ್ಳಿಕರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಏಜೆನ್ಸಿಯವರು ತಂಗುದಾಣಗಳನ್ನು ಜಾಹೀರಾತು ಕೇಂದ್ರವಾಗಿ ಬಳಸಿಕೊಂಡು ಆದಾಯ ಗಳಿಸಲಿದ್ದಾರೆ. ಪಾಲಿಕೆಗೂ ವಾರ್ಷಿಕವಾಗಿ ಹಣ ಪಾವತಿಸಲಿದ್ದಾರೆ. ಐದು ವರ್ಷ ಅವರೇ ತಂಗುದಾಣಗಳನ್ನು ನಿರ್ವಹಣೆ ಮಾಡಿ, ಪಾಲಿಕೆಗೆ ಹಸ್ತಾಂತರಿಸಲಿದ್ದಾರೆ’ ಎಂದು ಹೇಳಿದರು.
ಎಲ್ಲೆಲ್ಲಿ ನಿರ್ಮಾಣ?: ಗೋಕುಲ ರಸ್ತೆಯ ಅರ್ಬನ್ ಓಯಸಿಸ್ ಮಾಲ್ ಎದುರು, ಸಿಗ್ನೇಚರ್ ಮಾಲ್ ಎದುರು, ಪ್ರಿಯಾಂಕ ಹೋಟೆಲ್–ಲಾಡ್ಜ್ ಎದುರು, ಬಸವೇಶ್ವರ ನಗರ ಎದುರು, ಮಂಜುನಾಥ ಸರ್ಕಲ್‌ನ ಪೂಮಾ ಷೋರೂಂ ಎದುರು, ಹೊಸ ಬಸ್ ನಿಲ್ದಾಣದ ಎದುರು, ಎನ್‌ಡಬ್ಲುಕೆಆರ್‌ಟಿಸಿ ಕಚೇರಿ ಎದುರು, ಕೆಎಸ್‌ಆರ್‌ಟಿಸಿ ವಸತಿ ಸಮುಚ್ಚಯ, ಬನ್ನಿಗಿಡ ಬಸ್ ತಂಗುದಾಣ, ಹೊಸೂರು ವೃತ್ತದ ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ ಎದುರು, ಹಳೇ ಬಸ್ ನಿಲ್ದಾಣದ ಅಯೋಧ್ಯಾ ಹೋಟೆಲ್ ಬಳಿ, ಚನ್ನಮ್ಮ ವೃತ್ತದ ಸುತ್ತಮುತ್ತ, ಹಳೇ ಕೋರ್ಟ್ ವೃತ್ತ, ಕೇಶ್ವಾಪುರ ವೃತ್ತ, ಮಧುರಾ ಕಾಲೊನಿ, ವಿಶಾಲ್ ಮೆಗಾಮಾರ್ಟ್ ಕೇಶ್ವಾಪುರ, ಸ್ಟೇಷನ್ ರಸ್ತೆ, ರೈಲ್ವೆ ಸೇತುವೆ ಬಳಿ, ವೆನ್ನೆಸನ್ಸ್ ಸಿಲ್ಕ್ಸ್, ದೇಶಪಾಂಡೆ ನಗರ ಆಕ್ಸಿಸ್ ಬ್ಯಾಂಕ್ ಹತ್ತಿರ, ಶಿರೂರು ಪಾರ್ಕ್ ಮಾರ್ಗ, ಹರ್ಷ ಫಾಸ್ಟ್‌ಫುಡ್, ಶಿರೂರು ಪಾರ್ಕ್ ಬಿಬಾ, ಲೆನ್ಸ್ ಕಾರ್ಟ್, ಶಿರೂರು ಪಾರ್ಕ್ ಮಿಶ್ರಾ ಪೇಡಾ, ಚೇತನಾ ಕಾಲೇಜು ಫ್ರೀಜ್ ಆ್ಯಂಡ್ ಬ್ರೀಜ್, ಅಕ್ಷಯ ಕಾಲೊನಿ ಕೆನರಾ ಬ್ಯಾಂಕ್, ಕಾಳಿದಾಸ ನಗರ, ಶೆಟ್ಟರ್ ಕಾಲೊನಿ ಗ್ಲೋಬಲ್ ಕಾಲೇಜು, ಲಿಂಗರಾಜ ನಗರ ಬಸ್ ನಿಲ್ದಾಣ (ಉತ್ತರ), ಧಾರವಾಡ ಜ್ಯುಬಿಲಿ ವೃತ್ತ ಸೇರಿದಂತೆ ಇನ್ನೂ ಹಲವೆಡೆ ತಂಗುದಾಣಗಳು ನಿರ್ಮಾಣವಾಗಲಿವೆ.
‘ಹುಬ್ಬಳ್ಳಿ - ಧಾರವಾಡದ ಪ್ರಮುಖ ರಸ್ತೆಗಳಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು 50 ಸುಸಜ್ಜಿತ ಬಸ್ ತಂಗುದಾಣಗಳು ಆಗಸ್ಟ್ ಅಂತ್ಯದೊಳಗೆ ನಿರ್ಮಾಣವಾಗಲಿವೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಹೇಳಿದರು.
ಗಮನ ಸೆಳೆದಿದ್ದ ‘ಪ್ರಜಾವಾಣಿ’
ಅಭಿವೃದ್ಧಿ ಕಾರ್ಯಗಳಿಗಾಗಿ ಅವಳಿನಗರದಲ್ಲಿ ಬಸ್ ತಂಗುದಾಣಗಳನ್ನು ತೆರವು ಮಾಡಿದ್ದರಿಂದಾಗಿ, ಪ್ರಯಾಣಿಕರು ತಂಗುದಾಣಗಳಿಲ್ಲದೆ ಪರದಾಡುತ್ತಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಮೇ 24ರಂದು ವಿಶೇಷ ವರದಿ ಪ್ರಕಟವಾಗಿತ್ತು. ಮಳೆ–ಗಾಳಿಯಿಂದ ರಕ್ಷಣೆ ಇಲ್ಲದ ಪ್ರಯಾಣಿಕರು, ಎಲ್ಲೆಂದರಲ್ಲಿ ನಿಲ್ಲುವ ಬಸ್‌ಗಳನ್ನು ಪ್ರಯಾಸದಿಂದ ಹತ್ತಿಕೊಂಡು ಹೋಗುವ ಹಾಗೂ ಇದರಿಂದಾಗಿ ಪ್ರಮುಖ ವೃತ್ತಗಳಲ್ಲಿ ತಲೆದೋರುತ್ತಿದ್ದ ಸಂಚಾರ ದಟ್ಟಣೆ ಬಗ್ಗೆ ಗಮನ ಸೆಳೆದಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.