ಭಾನುವಾರ, ಫೆಬ್ರವರಿ 23, 2020
19 °C
ವರದಕ್ಷಿಣೆಗಾಗಿ ಹಲ್ಲೆ, ಜೀವ ಬೆದರಿಕೆ ಹಾಕಿದ್ದ ಪತಿ ಮನೆಯವರು

ಒಂದು ಕುಟುಂಬದ 6 ಮಂದಿಗೆ ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದ ಕುಲಕರ್ಣಿ ಹಕ್ಕಲದ ಶಂಕರ ಚಾಳದ ನಿವಾಸಿ ದೇವಿಕಾ ಅವರಿಗೆ ವರದಕ್ಷಿಣೆ ಕಿರುಕುಳ ನೀಡಿದ ಪತಿ, ಅತ್ತೆ, ಮಾವ ಸೇರಿ, ಆರು ಮಂದಿಗೆ ಇಲ್ಲಿನ ಒಂದನೇ ಜೆಎಂಎಫ್‌ಸಿ ಕೋರ್ಟ್‌ 2 ವರ್ಷ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ.

ಬೆಳಗಾವಿಯ ತಿಲಕವಾಡಿ ಗಜಾನನ ಮಹಾರಾಜ ನಗರದ ನಿವಾಸಿಯಾದ ಪತಿ ಕೈಲಾಸ ಅಚ್ಚಿತಲ್‌, ಅತ್ತೆ ಸಗಾಯಿಮ್ಮಾ, ಮಾವ ಬಾಲಕೃಷ್ಣ ಹಾಗೂ ಅವರ ಕುಟುಂಬದವರಾದ ಅಂಜನಾ, ನಾಗೇಶ, ರೇಖಾ ಶಿಕ್ಷೆಗೆ ಒಳಗಾದ ಅಪರಾಧಿಗಳು.

2012ರ ಮೇ 23ರಂದು ದೇವಿಕಾ ಅವರು ಕೈಲಾಸ ಅವರನ್ನು ಮದುವೆಯಾಗಿದ್ದರು. ಈ ವೇಳೆ ದೇವಿಕಾ ಅವರ ಮನೆಯವರು ಕೈಲಾಸ ಅವರಿಗೆ ವರದಕ್ಷಿಣೆಯಾಗಿ 8 ತೊಲೆ ಬಂಗಾರ ಹಾಗೂ ₹1 ಲಕ್ಷ ನಗದು ನೀಡಿದ್ದರು. ಮದುವೆಯಾದ ಎರಡು ತಿಂಗಳ ನಂತರ, ಪತಿ ಮನೆಯವರು ವ್ಯಾಪಾರ ಮಾಡಲು ತವರಿನಿಂದ ₹2 ಲಕ್ಷ ತರುವಂತೆ ಪೀಡಿಸಿ, ಹಿಂಸೆ ನೀಡಿದ್ದರು. 2014ರ ಮೇ 14ರಂದು ದೇವಿಕಾ ಅವರ ಮೇಲೆ ಹಲ್ಲೆ ನಡೆಸಿದ್ದ ಕುಟುಂಬದವರು, ವರದಕ್ಷಿಣೆ ತರದಿದ್ದರೆ ಜೀವ ತೆಗೆಯುವ ಬೆದರಿಕೆ ಹಾಕಿದ್ದರು. ಆಗ ದೇವಿಕಾ ಅವರು ತವರಿಗೆ ಬಂದು ವಾಸಿಸುತ್ತಿದ್ದರು.

ದೇವಿಕಾ ಕುಟುಂಬದ ಹಿರಿಯರು ಬೆಳಗಾವಿಗೆ ಹೋಗಿ ಕೈಲಾಸ ಹಾಗೂ ಅವರ ಕುಟುಂಬದವರಿಗೆ ಬುದ್ಧಿ ಹೇಳಿದ್ದರೂ ಮಾತು ಕೇಳಿರಲಿಲ್ಲ. ಅಲ್ಲದೆ, ಕೈಲಾಸ ಮನೆಯವರು ಹುಬ್ಬಳ್ಳಿಗೆ ಬಂದು, ‘ವರದಕ್ಷಿಣೆ ತೆಗೆದುಕೊಂಡು ಬಾ ಅಂದರೆ ಹಿರಿಯರನ್ನು ಕರೆದುಕೊಂಡು ಬರುತ್ತೀಯಾ’ ಎಂದು ಅವಾಚ್ಯವಾಗಿ ನಿಂದಿಸಿ ಹಲ್ಲೆ, ನಡೆಸಿ ಮತ್ತೆ ಜೀವ ಬೆದರಿಕೆ ಹಾಕಿದ್ದರು. ಬಳಿಕ, ದೇವಿಕಾ  ಹುಬ್ಬಳ್ಳಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದರು.

ಅಂದಿನ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಿ.ಎಂ. ಶಿರಹಟ್ಟಿ ಅವರು ತನಿಖೆ ನಡೆಸಿ, ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಸುಶಾಂತ ಎಂ. ಚೌಗಲೆ ತೀರ್ಪು ಪ್ರಕಟಿಸಿದ್ದಾರೆ. ದೇವಿಕಾ ಅವರ ಪರ ವಕೀಲ ಪ್ರಶಾಂತ ಚಟ್ನಿ ವಾದ ಮಂಡಿಸಿದ್ದರು.

ಕ್ರಿಕೆಟ್‌ ಬೆಟ್ಟಿಂಗ್‌; ಮೂವರ ಬಂಧನ: ಭಾರತ ಮತ್ತು ನ್ಯೂಜಿಲೆಂಡ್‌ ನಡುವೆ ಬುಧವಾರ ನಡೆಯುತ್ತಿದ್ದ ಏಕದಿನ ಕ್ರಿಕೆಟ್‌ ಪಂದ್ಯಾವಳಿ ಸಂದರ್ಭದಲ್ಲಿ ಬೆಟ್ಟಿಂಗ್‌ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ₹91 ಸಾವಿರ ನಗದು, 16 ಮೊಬೈಲ್‌ ಹಾಗೂ ಒಂದು ಲ್ಯಾಪ್‌ಟಾಪ್‌ ವಶಪಡಿಸಿಕೊಂಡಿದ್ದಾರೆ.

ಹಳೇ ಹುಬ್ಬಳ್ಳಿ ನೇಕಾರ ನಗರದ ಮಹೇಶ ಕುಲಕರ್ಣಿ, ಏಕನಾಥ ತನಕಂಟೆ ಮತ್ತು ಲೋಹಿಯಾ ನಗರದ ಧರ್ಮಾಸಾ ಅಂಬಾಸಾ ಬಂಧಿತ ಆರೋಪಿಗಳು.

ಮೂವರೂ ರಾಜೀವ ನಗರದ ಅಪಾರ್ಟ್‌ಮೆಂಟ್ ಮೇಲಿರುವ ಕೊಠಡಿಯಲ್ಲಿ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದರು. ಪ್ರತಿಯೊಂದು ಬಾಲ್‌, ವಿಕೆಟ್‌ ಹಾಗೂ ರನ್‌ ಗಳಿಕೆ ಮೇಲೆ ಮೊಬೈಲ್‌ ಮೂಲಕ ಬೆಟ್ಟಿಂಗ್‌ ನಡೆಸುತ್ತಿದ್ದರು. ಈ ಕುರಿತು ಸಿಕ್ಕ ಖಚಿತ ಮಾಹಿತಿ ಮೇರೆಗೆ ಇನ್‌ಸ್ಪೆಕ್ಟರ್‌ ಆನಂದ ಒನಕುದರಿ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ಓಎಲ್‌ಎಕ್ಸ್‌ಲ್ಲಿ ₹50 ಸಾವಿರ ವಂಚನೆ:

ಓಎಲ್‌ಎಕ್ಸ್‌ಲ್ಲಿ ಓಮ್ನಿ ಕಾರು ಮಾರಾಟ ಮಾಡುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ನಗರದ ಕಿರಣ ಜಟ್ಟೆಪ್ಪನವರ ಅವರಿಂದ ₹50,139 ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾನೆ.

ಕಾರು ಮಾರಾಟ ಮಾಡುವುದಾಗಿ ಓಎಲ್‌ಎಕ್ಸ್‌ಲ್ಲಿ ನೀಡಿರುವ ಜಾಹೀರಾತು ನೋಡಿ ಕಿರಣ ಅವರು, ಆನ್‌ಲೈನ್‌ ಮೂಲಕ ಜಾಹೀರಾತು ನೀಡಿರುವ ವ್ಯಕ್ತಿಯನ್ನು ಸಂಪರ್ಕಿಸಿದ್ದಾರೆ. ಆರೋಪಿ ಬ್ಯಾಂಕಿನ ಖಾತೆ ನಂಬರ್‌ ನೀಡಿ, ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ನಂತರ ಹಣವನ್ನೂ ನೀಡದೆ, ಕಾರನ್ನು ನೀಡದೆ ವಂಚಿಸಿದ್ದಾನೆ. ಹುಬ್ಬಳ್ಳಿ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳವು: ಇಲ್ಲಿನ ಗೋಕುಲ ರಸ್ತೆಯ ಅಕ್ಷಯ ಕಾಲೊನಿ ನಿವಾಸಿ ಪ್ರಶಾಂತಕುಮಾರ ಮೊಟಗಿ ಅವರ ಮನೆಯ ಹಿಂಬಾಗಿಲು ಮುರಿದು, ₹92 ಸಾವಿರ ಮೌಲ್ಯದ ಬೆಳ್ಳಿ, ಬಂಗಾರದ ಆಭರಣಗಳನ್ನು ಕಳವು ಮಾಡಲಾಗಿದೆ.

ಪ್ರಶಾಂತಕುಮಾರ ಹಾಗೂ ಮನೆಯ ಸದಸ್ಯರು ಮನೆಯಲ್ಲಿ ಮಲಗಿದ್ದ ಸಮಯದಲ್ಲಿಯೇ ಹಿಂಬಾಗಿಲಿನ ಬೀಗ ಮುರಿದು ಕಳ್ಳರು ಕೈ ಚಳಕ ತೋರಿಸಿದ್ದಾರೆ. 30 ಗ್ರಾಂ ತೂಕದ ಎರಡು ಬಂಗಾರದ ಬಳೆಗಳು, ಎರಡು ವಾಚ್‌ಗಳು ಹಾಗೂ ₹2 ಸಾವಿರ ನಗದು ಕಳವು ಮಾಡಿದ್ದಾರೆ. ಗೋಕುಲ ರೋಡ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಆಭರಣ ಕಳವು: ಇಲ್ಲಿನ ಹನುಮಂತನಗರದ ಗೌರಿ ಶಂಕ್ರಪ್ಪ ಅವರ ಮನೆಯ ಬಾಗಿಲು ಮುರಿದು ₹1.60 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ಕಳವು ಮಾಡಲಾಗಿದೆ.

ಸೋಮವಾರ ರಾತ್ರಿ ಮನೆ ಬಾಗಿಲಿಗೆ ಇಂಟರ್‌ ಲಾಕ್‌ ಹಾಕಿ ಲಿಂಗರಾಜ ನಗರದಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದರು. ಬೆಳಿಗ್ಗೆ ಬಂದು ನೋಡಿದಾಗ, ಬಾಗಿಲು ಮುರಿದು ಬಂಗಾರ, ಬೆಳ್ಳಿ ಆಭರಣಗಳು ಕಳುವಾಗಿರುವುದು ಕಂಡು ಬಂದಿದೆ. ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)