ಭಾನುವಾರ, ಜನವರಿ 26, 2020
28 °C
ಬಿವಿಬಿ ಕಾಲೇಜಿನಿಂದ ಚನ್ನಮ್ಮನ ವೃತ್ತದವರೆಗೆ ಮೆರವಣಿಗೆ

ಸಿಎಎ ಬೆಂಬಲಿಸಿ ಎಬಿವಿಪಿಯಿಂದ ಮಹಾತಿರಂಗಾ ಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಪೌರತ್ವ(ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ಬೆಂಬಲಿಸಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಹುಬ್ಬಳ್ಳಿ ಶಾಖೆಯ ವತಿಯಿಂದ, ಹುಬ್ಬಳ್ಳಿಯಲ್ಲಿ ಗುರುವಾರ ಮಹಾತಿರಂಗಾ ಯಾತ್ರೆ ಜರುಗಿತು.

ವಿವಿಧ ಖಾಸಗಿ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಿಂದ ತ್ರಿವರ್ಣ ಧ್ವಜದೊಂದಿಗೆ ಚನ್ನಮ್ಮನ ವೃತ್ತದವರೆಗೆ ಮೆರವಣಿಗೆ ಬಂದರು. ಸಿಎಎ ಪರ ಫಲಕಗಳನ್ನು ಹಿಡಿದು ಹೆಜ್ಜೆ ಹಾಕಿದ ವಿದ್ಯಾರ್ಥಿಗಳು, ಮಾರ್ಗದುದ್ದಕ್ಕೂ ಕಾಯ್ದೆ ಪರವಾಗಿ ಘೋಷಣೆಗಳನ್ನು ಕೂಗಿದರು.

ನಂತರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಂತ ಸಂಘಟನಾ ಕಾರ್ಯದರ್ಶಿ ಮಂಜುನಾಥ ಮೀಸೆ, ‘ವಿದೇಶಗಳಲ್ಲಿ ಅಲ್ಪಸಂಖ್ಯಾತರಾಗಿರುವ ಭಾರತೀಯರಿಗೆ ದೇಶದ ಪೌರತ್ವ ನೀಡುವ ಕಾಯ್ದೆ ವಿರುದ್ಧ ವ್ಯಾಪಕ ಅಪಪ್ರಚಾರ ನಡೆಯುತ್ತಿದೆ. ಹಾಗಾಗಿ, ಕಾಯ್ದೆಯ ಸತ್ಯಾಸತ್ಯತೆಯನ್ನು ವಿದ್ಯಾರ್ಥಿಗಳು ಜನರಿಗೆ ಪ್ರಚಾರ ಮಾಡಬೇಕಾದ ಅಗತ್ಯವಿದೆ’ ಎಂದರು.

‘ಸಿಎಎ ಕಾಯ್ದೆಯು ದೇಶದಲ್ಲಿರುವ ಅಲ್ಪಸಂಖ್ಯಾತರ ಪೌರತ್ವವನ್ನು ಕಿತ್ತುಕೊಳ್ಳುತ್ತದೆ ಎಂಬ ಆತಂಕವನ್ನು ದೇಶದಾದ್ಯಂತ ಸೃಷ್ಟಿಸಲಾಗಿದೆ. ಕಾಯ್ದೆಯು ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಪ್ಘಾನಿಸ್ತಾನದಲ್ಲಿರುವ ಅಲ್ಪಸಂಖ್ಯಾತರಿಗೆ ಪೌರತ್ವವನ್ನು ನೀಡುತ್ತದೆಯೇ ಹೊರತು ಕಸಿದುಕೊಳ್ಳುವುದಿಲ್ಲ. ಹಾಗಾಗಿ, ಇಲ್ಲಿಯವರು ಭಯಪಡಬೇಕಿಲ್ಲ’ ಎಂದು ಹೇಳಿದರು.

ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಪೃಥ್ವಿ ಕುಮಾರ್ ಮಾತನಾಡಿ, ‘ಕಾಯ್ದೆಯನ್ನು ಶಾಂತಿಯುತವಾಗಿ ವಿರೋಧಿಸಬೇಕೇ ಹೊರತು ಹಿಂಸಾತ್ಮಕವಲ್ಲ. ಇದರಿಂದ ಹಾನಿಯಾಗುವುದು ನಮ್ಮದೇ ಸಾರ್ವಜನಿಕ ಆಸ್ತಿ. ಕಾಯ್ದೆ ಬಗ್ಗೆ ಗೊಂದಲಗಳಿದ್ದರೆ ಪರಿಹರಿಸಿಕೊಳ್ಳಬೇಕು. ಆದರೆ, ಸರ್ಕಾರ ಏನೇ ಮಾಡಿದರೂ ವಿರೋಧಿಸಬೇಕು ಎಂದು ಪ್ರತಿಭಟನೆ ನಡೆಸುವುದು ಸರಿಯಲ್ಲ’ ಎಂದರು.

ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ವೇದಿಕೆ ಹಾಕಿದ್ದರಿಂದ ದಾಜಿಬಾನಪೇಟೆ ರಸ್ತೆಯಲ್ಲಿ ಒಂದೂವರೆ ತಾಸು ವಾಹನಗಳ ಸಂಚಾರ ಬಂದ್ ಮಾಡಲಾಗಿತ್ತು. ಯಾತ್ರೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರಿಂದ, ಚನ್ನಮ್ಮನ ವೃತ್ತ ಸುತ್ತಮುತ್ತಲಿನ ರಸ್ತೆಗಳಲ್ಲಿ ಕೆಲ ಹೊತ್ತು ಸಂಚಾರ ದಟ್ಟಣೆ ಕಂಡುಬಂತು.

ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಎಬಿವಿಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪ್ರತೀಕ್ ಮಾಳಿ, ರಾಜ್ಯ ಸಹ ಕಾರ್ಯದರ್ಶಿ ಪವನ್ ಕರಿಕಟ್ಟಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಮಹಾಲಕ್ಷ್ಮಿ ಭೂಷಿ, ಜಿಲ್ಲಾ ಸಂಚಾಲಕ ಹನುಮಂತ ಬಗಲಿ, ನಗರ ಕಾರ್ಯದರ್ಶಿ ಅರುಣ ಶಾಮನೂರ, ನಗರ ಸಹ ಕಾರ್ಯದರ್ಶಿ ರಮೇಶ ಲೊಂಡೆ, ವೃತ್ತಿ ಶಿಕ್ಷಣ ಪ್ರಮುಖ್ ಸುಹಾಸ ಎಸ್‌.ಎನ್., ನಗರ ಕಾರ್ಯಕಾರಿಣಿ ಸದಸ್ಯ ರಕ್ಷನ್, ವಿದ್ಯಾರ್ಥಿ ಪ್ರಮುಖ್ ನಿಶಾ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು