ಶುಕ್ರವಾರ, ಜನವರಿ 24, 2020
18 °C

ಹುಬ್ಬಳ್ಳಿ–ಧಾರವಾಡ ಮೆಟ್ರೊ: ರಂಗ ಚಟುವಟಿಕೆಗೆ ಆದಿರಂಗ ಸಜ್ಜು

ಆರ್‌. ಮಂಜುನಾಥ್‌ Updated:

ಅಕ್ಷರ ಗಾತ್ರ : | |

Prajavani

ರಂಗಭೂಮಿಯಲ್ಲಿ ಏನನ್ನಾದರೂ ಸಾಧಿಸಬೇಕೆಂದರೆ ಅದಕ್ಕೊಂದು ಮೂಲ ಅಭ್ಯಾಸಬೇಕು. ಆರಂಭಿಕವಾಗಿ ಅಗತ್ಯವಾಗಿರುವ ಕೆಲವು ಆಯಾಮಗಳನ್ನು ಮೈಗೂಡಿಸಿಕೊಳ್ಳಬೇಕು. ಅಂತಹ ಅವಕಾಶಕ್ಕಾಗಿ ಸಾಕಷ್ಟು ದೂರು ಹೋಗಬೇಕಾದ ಸ್ಥಿತಿ ಇದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗದ ರಂಗಭೂಮಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಹಾಗೂ ಪ್ರತಿ ವಾರವೂ ಈ ಭಾಗದ ಜನರನ್ನು ರಂಗಭೂಮಿ ಚಟುವಟಿಕೆಗಳಿಂದ ರಂಜಿಸಲು ‘ಆದಿರಂಗ ಥೇಟರ್ಸ್‌’ ಸಜ್ಜಾಗಿದೆ.

ಆಲ್‌ ದಿ ಬೆಸ್ಟ್‌, ರಾಶಿಚಕ್ರದಂತಹ ಜನಪ್ರಿಯ ನಾಟಕಗಳನ್ನು ನೀಡಿದ ನಾಟಕಕಾರ ಯಶವಂತ ಸರದೇಶಪಾಂಡೆ ನೇತೃತ್ವದ ಹುಬ್ಬಳ್ಳಿಯ ಗುರು ಇನ್‌ಸ್ಟಿಟ್ಯೂಟ್‌ ವತಿಯಿಂದ ‘ಆದಿರಂಗ ಥೇಟರ್ಸ್‌’ ರೂಪುಗೊಂಡಿದೆ. ರಂಗಭೂಮಿಗೆ ಅಗತ್ಯವಾಗಿರುವ ನಟನೆ, ನಿರ್ದೇಶನ, ಸಂಗೀತ, ರಂಗಸಜ್ಜಿಕೆ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ತರಬೇತಿ ನೀಡಲಿದೆ. ಇಷ್ಟಕ್ಕೇ ಸೀಮಿತವಾಗದೆ, 3ಇ (ಈಟ್‌, ಎಜ್ಯುಕೇಟ್‌, ಎಂಟರ್‌ಟೈನ್‌) ಪರಿಕಲ್ಪನೆಯೊಂದಿಗೆ ಆಹಾರ ಸರಿಯಾಗಿರಲಿ, ಅಭ್ಯಾಸ ನಿಯತ್ತಿನಿಂದಿರಲಿ, ನಿಮ್ಮ ರಂಜನೆ ಚಟುವಟಿಕೆ ಸೂಕ್ಷ್ಮವಾಗಿರಲಿ ಎಂಬ ಉದ್ದೇಶದಿಂದ ರಂಗಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ವಾರಾಂತ್ಯದಲ್ಲಿ ಗುರು ಇನ್‌ಸ್ಟಿಟ್ಯೂಟ್ ಹುಬ್ಬಳ್ಳಿ ತಂಡದ ಪ್ರದರ್ಶನಗಳು, ಇಲ್ಲಾ ಇತರೆ ತಂಡದ ಪ್ರದರ್ಶನಗಳು ನಡೆಯುತ್ತವೆ.

‘ಆದಿರಂಗ ಥೇಟರ್ಸ್‌ನಲ್ಲಿ ಎಲ್ಲ ವಯೋಮಾನದ ರಂಗಾಸ್ತಕರಿಗೆ ಪೂರ್ಣಪ್ರಮಾಣದ ತರಬೇತಿ ನೀಡಲಾಗುತ್ತದೆ. ಮೂರು ತಿಂಗಳು ಚುಟುಕು ಕೋರ್ಸ್, ಆರು ತಿಂಗಳ ವಿಶೇಷ ತರಬೇತಿ ಹಾಗೂ ಒಂದು ವರ್ಷದ ರಂಗ ಡಿಪ್ಲೊಮಾಗಳು ಇಲ್ಲಿ ನಡೆಯುವುದು.  ಸಿನಿಮಾ ಟಿವಿಗಳಲ್ಲಿ ಅಭಿನಯಿಸಲು ಆಸಕ್ತಿ ಇರುವವರಿಗೆ ನಟನೆಯ ತರಬೇತಿಗಳು, ನ್ಯೂಸ್ ಆಂಕರ್, ಪಬ್ಲಿಕ್ ಸ್ಪೀಕರ್ ಆಗಬಯಸುವವರಿಗೆ ಮತ್ತು ಇಂಗ್ಲಿಷ್ ಮಾತನಾಡಲು ಇಚ್ಛಿಸುವವರಿಗೆ ಕ್ಲಾಸ್‌ಗಳಿರುತ್ತವೆ’ ಎಂದು ಯಶವಂತ ಸರದೇಶಪಾಂಡೆ ಹೇಳಿದರು.

‘ಮಕ್ಕಳಲ್ಲಿ ಕಲಾಸಕ್ತಿ ಹೆಚ್ಚಿಸಲು ಮತ್ತು ಅವರಲ್ಲಿ ಸಾಂಘಿಕ ಬದುಕಿನ ಪ್ರಯತ್ನ ಬೆಳೆಯಲು ದೋಸ್ತಿ ಕ್ಲಬ್‌ ಯೋಜನೆ ರೂಪಿಸಲಾಗಿದೆ. ಮೂರನೇ ತರಗತಿಯಿಂದ ಒಂಬತ್ತನೇ ವರ್ಗದಲ್ಲಿ ಯಾವುದೇ ವಿದ್ಯಾರ್ಥಿ ಈ ಕ್ಲಬ್‌ನ ಸದಸ್ಯತ್ವ ಪಡೆಯಬಹುದಾಗಿದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗಾಗಿ ಯೋಗ್ಯ ವೇದಿಕೆ ನೀಡುವ ದೋಸ್ತಿ ಕ್ಲಬ್, ಗಾಯನ, ನೃತ್ಯ, ಚಿತ್ರಕಲೆ, ಸಾಹಿತ್ಯ, ನಾಟಕ, ಸಿನಿಮಾ, ಟಿವಿ, ಈ ಯಾವುದೇ ರಂಗದಲ್ಲಿ ಸಾಧನೆ ಮಾಡಬಲ್ಲ ಮಕ್ಕಳನ್ನು ಗುರುತಿಸಿ ಅವರಿಗೆ ಯೋಗ್ಯ ಮಾರ್ಗದರ್ಶನ ಮತ್ತು ಅವಕಾಶ ಕಲ್ಪಿಸುತ್ತದೆ. ಮಕ್ಕಳಿಗಾಗಿ ವಾರಾಂತ್ಯ ರಂಗ ಶಾಲೆ ಇರುವುದು. ಇದರಲ್ಲಿ ಮಕ್ಕಳಿಗೆ ತಮ್ಮ ಪಠ್ಯಪುಸ್ತಕವನ್ನು ರಂಗ ಮುಖೇನ ಕಲಿಯುವ ಪದ್ಧತಿಯನ್ನು ಹೇಳಿಕೊಡಲಾಗುವುದು. ಪ್ರತಿ ತಿಂಗಳು ಒಂದು ದಿನ ತಮ್ಮ ಪೋಷಕರೊಂದಿಗೆ ಬಂದು ರಂಗಚಟುವಟಿಕೆಗಳನ್ನು ವೀಕ್ಷಿಸಬಹುದು. ಅಲ್ಲದೆ, ಪ್ರತಿ ಸದಸ್ಯರು ಪ್ರತಿಭೆ ಅನಾವರಣಕ್ಕೆ ವೇದಿಕೆಯನ್ನೂ ಕಲ್ಪಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಯೋಗ, ಧ್ಯಾನ, ಸಂಗೀತ, ನೃತ್ಯ, ಸಮರ ಕಲೆ, ಚಿತ್ರಕಲೆ, ಶಿಲ್ಪಕಲೆ ಮತ್ತು ಕರಕುಶಲ ಕಲೆಯಲ್ಲಿ ಆಸಕ್ತರಿಗೆ ನಿಪುಣ ಶಿಕ್ಷಕರಿಂದ ತರಬೇತಿಗಾಗಿ ವ್ಯವಸ್ಥೆ ಇರುವುದು ಮತ್ತು ಲೋಕ ಕಲೆಯನ್ನು ಅಭ್ಯಸಿಸಿ, ಸಾಧನೆ ಮಾಡ ಬಯಸುವವರಿಗೆ ವಿಶೇಷ ತರಬೇತಿ ವ್ಯವಸ್ಥೆ ಇರುವುದು ಎಂದರು.

 ಜನವರಿ 19ಕ್ಕೆ ಚಾಲನೆ
‘ಆದಿರಂಗ ಥೇಟರ್ಸ್‌’ಗೆ ಜನವರಿ 19ರಂದು ಚಾಲನೆ ದೊರೆಯಲಿದೆ. ಏಳು ರಂಗಗಳನ್ನು ಒಳಗೊಂಡಿದ್ದು, ಮೂರು ರಂಗಗಳ ಕಟ್ಟಡಗಳು ಇದೀಗ ಪೂರ್ಣಗೊಂಡಿವೆ. ಉಳಿದವು ಇನ್ನೆರಡು ವರ್ಷದಲ್ಲಿ ಪೂರ್ಣಗೊಳಿಸುವ ಯೋಜನೆ ಇದೆ’ ಎಂದು ನಾಟಕಕಾರ ಯಶವಂತ ಸರದೇಶಪಾಂಡೆ ತಿಳಿಸಿದರು.

ಆದಿರಂಗ ಏಳು ರಂಗಗಳಲ್ಲಿ ಬೇಂದ್ರೆ, ವಿಜಯ, ಅನಂತರಂಗ ಇದೀಗ ಪ್ರಾರಂಭವಾಗಲಿವೆ. ಮುಂದಿನ ಎರಡು ವರ್ಷದಲ್ಲಿ ಎಲ್ಲ ರಂಗಗಳು ಕಾರ್ಯಾರಂಭವಾಗಲಿವೆ. ರಂಗ ತರಬೇತಿ ಏಪ್ರಿಲ್‌ನಿಂದ ಆರಂಭವಾಗಲಿವೆ. ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜಿಸುವ ಆಲೋಚನೆಯೂ ಇದೆ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು