ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಅವಲಂಬನೆ ತಗ್ಗಿಸಲು ಪರ್ಯಾಯ ಯೋಜನೆ

’ಬಜೆಟ್ ಪೂರ್ವ ಸಂವಾದ 2020–21’ರಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ
Last Updated 6 ಜನವರಿ 2020, 12:37 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕೃಷಿ ಮೇಲಿನ ಅವಲಂಬನೆ ತಗ್ಗಿಸಲು ಸರ್ಕಾರ ಪರ್ಯಾಯ ಯೋಜನೆಗಳನ್ನು ರೂಪಿಸಲಿದೆ. ಜತೆಗೆ, ರೈತರ ಆದಾಯವನ್ನು ದ್ವಿಗುಣಗೊಳಿಸುವ ಕಾರ್ಯಕ್ರಮಗಳನ್ನು ಸದ್ಯದಲ್ಲೇ ಜಾರಿಗೆ ತರಲಿದೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಕ್ಷಮತಾ ಹುಬ್ಬಳ್ಳಿ ಮತ್ತು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಹಯೋಗದಲ್ಲಿ ಆರ್ಥಿಕ ತಜ್ಞರು, ಕೈಗಾರಿಕೋದ್ಯಮಿಗಳು ಹಾಗೂ ಸಾರ್ವಜನಿಕರ ಜತೆ ಸೋಮವಾರ ನಡೆದ ‘ಬಜೆಟ್ ಪೂರ್ವ ಸಂವಾದ: 2020–21’ರಲ್ಲಿ ಅವರು ಮಾತನಾಡಿದರು.

‘5 ಟ್ರಿಲಿಯನ್ ಅರ್ಥವ್ಯವಸ್ಥೆ ನಮ್ಮ ಗುರಿ. ಅದಕ್ಕಾಗಿ, ಮುಂದಿನ ಐದು ವರ್ಷದಲ್ಲಿ ಮೂಲಸೌಕರ್ಯಕ್ಕಾಗಿ ₹1 ಲಕ್ಷ ಕೋಟಿ ಹೂಡಿಕೆ ಮಾಡಲಾಗುತ್ತಿದೆ. ಮುಂದಿನ 10 ವರ್ಷದಲ್ಲಿ ರೈಲ್ವೆ ಮೇಲೆ ಸರ್ಕಾರ ₹50 ಲಕ್ಷ ಕೋಟಿ ಹೂಡಿಕೆಯಾಗಲಿದೆ’ ಎಂದರು.

‘ಹುಬ್ಬಳ್ಳಿ–ಧಾರವಾಡ ಸೇರಿದಂತೆ, ಉತ್ತರ ಕರ್ನಾಟಕಕ್ಕೆ ಕೈಗಾರಿಕೆಗಳನ್ನು ತರುವುದಕ್ಕಾಗಿ ಇನ್ವೆಸ್ಟ್ ಹುಬ್ಬಳ್ಳಿ ಹೂಡಿಕೆದಾರರ ಸಮಾವೇಶ ಆಯೋಜಿಸಿದ್ದೇವೆ. ಆ ಮೂಲಕ, ಅವಳಿನಗರದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡಲು ಯೋಜನೆ ರೂಪಿಸಲಾಗಿದೆ’ ಎಂದು ಗಮನ ಸೆಳೆದರು.

ಐ.ಟಿ ದಾಳಿ ವಿಡಿಯೊ ಮಾಡಿ

‘ಅಕ್ರಮ ಆದಾಯ ಗಳಿಕೆ ಆರೋಪ ಕೇಳಿ ಬಂದಾಗ, ಆದಾಯ ತೆರಿಗೆ ಅಧಿಕಾರಿಗಳು ಹೊತ್ತಿಲ್ಲದ ಹೊತ್ತಿನಲ್ಲಿ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸುತ್ತಾರೆ. ಈ ವೇಳೆ ಅಧಿಕಾರಿಗಳು ಕಿರುಕುಳ ನೀಡುತ್ತಾರೆ ಎಂಬ ಮಾತು ಸಾಮಾನ್ಯವಾಗಿ ಕೇಳಿ ಬರುತ್ತದೆ. ಹಾಗಾಗಿ, ದಾಳಿ ನಡೆದಾಗ ವಿಡಿಯೊ ಚಿತ್ರೀಕರಿಸಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು’ ಎಂದು ಕೆಸಿಸಿಐನ ಸಮೀರ್ ಓಸ್ವಾಲ್ ಸಲಹೆ ನೀಡಿದರು.

ಸಂವಾದದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಕೈಗಾರಿಕೋದ್ಯಮಿಗಳು, ಲೆಕ್ಕ ಪರಿಶೋಧಕರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಸಲಹೆ ನೀಡಿದರು.

ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ, ಜಿಲ್ಲಾಧಿಕಾರಿ ದೀಪಾ ಚೋಳನ್, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ.ಸಿ‌. ಸತೀಶ, ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಮ್ಯಾಥ್ಯೂ, ನೈರುತ್ಯ ರೈಲ್ವೆ ವಲಯದ ಎಡಿಜಿಎಂ ಎ.ಕೆ. ಮಿಶ್ರಾ, ಕೆಸಿಸಿಐನ ಅಶೋಕ ಗಡಾದ ಇದ್ದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ ಸ್ವಾಗತಿಸಿದರು. ಶೇಷಗಿರಿ ಕುಲಕರ್ಣಿ ನಿರೂಪಿಸಿದರು. ಮಲ್ಲಿಕಾರ್ಜುನಗೌಡ ಪಾಟೀಲ ವಂದಿಸಿದರು‌.

ಸಂವಾದದಲ್ಲಿ ಕೇಳಿ ಬಂದ ಸಲಹೆಗಳು

ರೈಲ್ವೆ

ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕೆ ಎದುರಾಗಿರುವ ಅಡೆತಡೆಗಳನ್ನು ನಿವಾರಿಸಬೇಕು. ಮಂಗಳೂರು-ವಿಜಯಪುರ ಎಕ್ಸ್‌ಪ್ರೆಸ್ ರೈಲು, ವಾಸ್ಕೊ–ಹೌರಾ ರೈಲನ್ನು ಕಾಯಂಗೊಳಿಸಬೇಕು. ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರಂಗಳನ್ನು ಹೆಚ್ಚಿಸಿ, ಮತ್ತಷ್ಟು ಮೂಲಸೌಕರ್ಯ ಒದಗಿಸಬೇಕು. ನಿಲ್ದಾಣಕ್ಕೆ ಸಿದ್ಧಾರೂಢರ ಹೆಸರಿಡಬೇಕು. ಹುಬ್ಬಳ್ಳಿ–ದೆಹಲಿ ಮಧ್ಯೆ ಮತ್ತೊಂದು ರೈಲು ಆರಂಭಿಸಬೇಕು. ಧಾರವಾಡದ ಕಲ್ಯಾಣ ನಗರ, ರಾಯಪುರ ಕೈಗಾರಿಕಾ ಪ್ರದೇಶ ಹಾಗೂ ಕರ್ನಾಟಕ ವಿ.ವಿ ಬಳಿ ಇರುವ ರೈಲ್ವೆ ಕ್ರಾಸಿಂಗ್‌ನಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು.

ತೆರಿಗೆ

ಗ್ರಾಮೀಣ ಬ್ಯಾಂಕುಗಳು 2005ರ ನಂತರ ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಅಧಿಕ ತೆರಿಗೆ ಪಾವತಿಸುತ್ತಿವೆ. ಈ ವ್ಯತ್ಯಾಸವನ್ನು ಸರಿಪಡಿಸಬೇಕು. ಸಹಕಾರಿ ರಂಗದ ಬ್ಯಾಂಕುಗಳು ಉತ್ತೇಜನಕ್ಕೆ ಕ್ರಮ ಕೈಗೊಳ್ಳಬೇಕು. ವಿಮಾ ವಲಯದ ಮೇಲೆ ವಿಧಿಸುತ್ತಿರುವ ಜಿಎಸ್‌ಟಿ ತೆರಿಗೆಯ ಪ್ರಮಾಣವನ್ನು ಕಡಿತಗೊಳಿಸಬೇಕು. ತೆರಿಗೆ ವಿನಾಯ್ತಿ ನೀಡುವ ಮೂಲಕ, ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಬೇಕು.

ಶಿಕ್ಷಣ

ಅವಳಿನಗರದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಒತ್ತು ನೀಡಬೇಕು. ಶಿಕ್ಷಣದ ಮೇಲಿನ ಹೂಡಿಕೆ ಹೆಚ್ಚಿಸಬೇಕು. ವೃತ್ತಿಪರ ಕೋರ್ಸ್‌ಗಳನ್ನು ಭೋದಿಸುವ ಕಾಲೇಜುಗಳು ಹೆಚ್ಚಾಗಬೇಕು.

ಐ.ಟಿ, ಬಿ.ಟಿ

ಹುಬ್ಬಳ್ಳಿ–ಧಾರವಾಡದಂತಹ ಎರಡನೇ ದರ್ಜೆಯ ನಗರಗಳಲ್ಲಿ ಬಿಪಿಒ, ಕಾಲ್‌ ಸೆಂಟರ್‌ ಹಾಗೂ ಐ.ಟಿ, ಬಿ.ಟಿ ಕಂಪನಿಗಳನ್ನು ಆರಂಭಿಸಲು ತೆರಿಗೆ ವಿನಾಯಿತಿ ನೀಡಬೇಕು.

ಕೈಗಾರಿಕೆ

ಬೆಂಗಳೂರು–ಮುಂಬೈ ಕೈಗಾರಿಕಾ ಕಾರಿಡಾರ್‌ ಅನ್ನು ಅಭಿವೃದ್ಧಿಪಡಿಸಿ, ಉತ್ತರ ಕರ್ನಾಟಕ ಭಾಗದ ಜನರಿಗೆ ಹೆಚ್ಚಿನ ಉದ್ಯೋಗ ನೀಡಬೇಕು.

ರಸ್ತೆ

ಚನ್ನಮ್ಮನ ವೃತ್ತ ಹಾಗೂ ಧಾರವಾಡದ ಜ್ಯೂಬಿಲಿ ವೃತ್ತದಲ್ಲಿ ನಿರ್ಮಿಸಲು ಉದ್ದೇಶಿರುವ ಫ್ಲೈ ಓವರ್ ಕಾಮಗಾರಿಯನ್ನು ಶೀಘ್ರ ಆರಂಭವಾಗಬೇಕು. ಅವಳಿನಗರದ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗುವ ರಸ್ತೆಗಳನ್ನು ಅಭಿವೃದ್ಧಿಪಡಿಸಿ, ಪ್ರವಾಸೋದ್ಯಮವನ್ನು ಉತ್ತೇಜಿಸಬೇಕು.

ಕೃಷಿ

ಸಾವಯವ ಕೃಷಿಗೆ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು. ಇಸ್ರೇಲ್ ಮಾದರಿ ಕೃಷಿಯನ್ನು ಪ್ರೋತ್ಸಾಹಿಸಬೇಕು.

ಇತರೆ

ಕನಿಷ್ಠ ವೇತನವನ್ನು ಹೆಚ್ಚಿಸಬೇಕು. ಜನೌಷಧ ಕೇಂದ್ರಗಳಲ್ಲಿ ಆಯುಷ್ ಔಷಧಗಳನ್ನು ಮಾರಾಟ ಮಾಡಬೇಕು. ಹುಬ್ಬಳ್ಳಿಯಲ್ಲಿ ಫುಡ್‌ ಪಾರ್ಕ್ ಸ್ಥಾಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT