ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಣ ಪಂಚಾಯ್ತಿ: ಮೂರೇ ಸ್ಥಾನವಿದ್ದರೂ ಅಧಿಕಾರಕ್ಕೇರಿದ ಬಿಜೆಪಿ

ಅಳ್ನಾವರ: ಮತ ಹಾಕಿದ ಪ್ರಲ್ಹಾದ ಜೋಶಿ, ನಿಂಬಣ್ಣನವರ
Last Updated 16 ಮೇ 2022, 14:33 IST
ಅಕ್ಷರ ಗಾತ್ರ

ಅಳ್ನಾವರ: ಇಲ್ಲಿನ ಪಟ್ಟಣ ಪಂಚಾಯ್ತಿಯ ಅಧ್ಯಕ್ಷರಾಗಿ 1ನೇ ವಾರ್ಡಿನ ಸದಸ್ಯೆ ಬಿಜೆಪಿಯ ನೇತ್ರಾವತಿ ಕಡಕೋಳ ಸೋಮವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು.

ಒಟ್ಟು 18 ಸದಸ್ಯರ ಬಲದಲ್ಲಿ ಕಾಂಗ್ರೆಸ್ 9 ಸ್ಥಾನಗಳನ್ನು ಹೊಂದಿದ್ದು, ಜೆಡಿಎಸ್ ಆರು ಹಾಗೂ ಬಿಜೆಪಿ ಮೂರು ಸ್ಥಾನಗಳನ್ನು ಹೊಂದಿವೆ. ಕಾಂಗ್ರೆಸ್ ಪಕ್ಷದಿಂದ ಭಾಗ್ಯವತಿ ಕುರುಬರ ಹಾಗೂ ಬಿಜೆಪಿಯಿಂದ ನೇತ್ರಾವತಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.

ಬಿಜೆಪಿಗೆ ತನ್ನ ಮೂರು ಹಾಗೂ ಜೆಡಿಎಸ್‌ನ ಆರು ಮತಗಳು ಬಂದವು. ಶಾಸಕ ಸಿ.ಎಂ. ನಿಂಬಣ್ಣವರ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಮ್ಮ ಹಕ್ಕು ಚಲಾಯಿಸಿ ಬಿಜೆಪಿ ಅಧಿಕಾರದ ಗದ್ದುಗೆ ಏರಲು ನೆರವಾದರು. ಉಪಾಧ್ಯಕ್ಷರಾಗಿ ಜೆಡಿಎಸ್‌ನ ನದೀಮ್‌ ಕಾಂಟ್ರ್ಯಾಕ್ಟರ್ ಮುಂದುವರಿದರು. ಕೈ ಎತ್ತುವ ಮೂಲಕ ಮತದಾನ ನಡೆಯಿತು ಎಂದು ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್ ಅಮರೇಶ ಪಮ್ಮಾರ ತಿಳಿಸಿದರು.

ಹಿಂದಿನ ಅಧ್ಯಕ್ಷೆ ಬಿಜೆಪಿಯ ಮಂಗಳಾ ರವಳಪ್ಪನವರ ರಾಜೀನಾಮೆಯಿಂದ ಸ್ಥಾನ ತೆರವಾಗಿತ್ತು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಾಗಿತ್ತು. ಪಕ್ಷದ ಹಿರಿಯರ ಸೂಚನೆಯಂತೆ ಮಂಗಲಾ ರಾಜೀನಾಮೆ ನೀಡಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸತತ ಎರಡನೇ ಬಾರಿಯೂ ಪ್ರಲ್ಹಾದ ಜೋಶಿ ಹಕ್ಕು ಚಲಾಯಿಸಿದ್ದು ವಿಶೇಷ.

ತಮ್ಮ ಪಕ್ಷದ ಸದಸ್ಯರು ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಹಿರಿಯರಾದ ಎಂ.ಸಿ. ಹಿರೇಮಠ, ಕಲ್ಮೇಶ ಬೈಲೂರ, ಶಾಸಕ ಅಮೃತ ದೇಸಾಯಿ ಇದ್ದರು.

ಬಳಿಕ ಮಾತನಾಡಿದ ನೇತ್ರಾವತಿ ಜನರ ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡುವೆ. ಮೂಲ ಸೌಕರ್ಯಗಳನ್ನು ಕಲ್ಪಿಸುವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT