ಭಾನುವಾರ, ಮೇ 29, 2022
30 °C
ಇಂದಿರಾ ಗ್ಲಾಸ್‌ಹೌಸ್‌ ಆವರಣದ ಡಾ.ಎಂ.ವಿ.ಮಿಣಜಗಿ ಆರ್ಟ್‌ ಗ್ಯಾಲರಿ ಇನ್ನು ಬೃಹತ್‌ ಮತ್ಸ್ಯಾಲಯ?

ಹುಬ್ಬಳ್ಳಿ: ಗ್ಯಾಲರಿ ಕೈತಪ್ಪುವ ಆತಂಕದಲ್ಲಿ ಕಲಾವಿದರು

ರಾಮಕೃಷ್ಣ ಸಿದ್ರಪಾಲ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಉತ್ತರ ಕರ್ನಾಟಕದ ಕಲಾವಿದರ ಕನಸಿನ ಕಲಾ ಗ್ಯಾಲರಿಯಾಗಿ 80ರ ದಶಕದಲ್ಲಿ ಹುಬ್ಬಳ್ಳಿಯ ಇಂದಿರಾಗಾಜಿನ ಮನೆಯ ಮಹಾತ್ಮಗಾಂಧಿ ಉದ್ಯಾನದಲ್ಲಿ ರೂಪುಗೊಂಡಿದ್ದ ‘ಕುಂಚಬ್ರಹ್ಮ ಡಾ.ಎಂ.ವಿ. ಮಿಣಜಗಿ ಆರ್ಟ್ ಗ್ಯಾಲರಿ’ಯು, ಸ್ಮಾರ್ಟ್‌ಸಿಟಿ ಯೋಜನೆಯಡಿ ಬೃಹತ್‌ ಮತ್ಸ್ಯಾಲಯವಾಗಿ ಬದಲಾಗುವ ಹಂತದಲ್ಲಿದೆ.

ಸುಸಜ್ಜಿತ ಕಲಾ ಗ್ಯಾಲರಿಯನ್ನು ಕಳೆದುಕೊಳ್ಳುವ ಆತಂಕದಲ್ಲಿರುವ ಕಲಾ ವಲಯವು, ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ. ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಮಹಾನಗರ ಪಾಲಿಕೆ ಆಯುಕ್ತ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರನ್ನು ಈ ಭಾಗದ ಕಲಾವಿದರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಅಕಾಡೆಮಿ ಅಧ್ಯಕ್ಷರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಿಣಜಗಿ ಆರ್ಟ್‌ ಗ್ಯಾಲರಿ ಸಮಿತಿ ಅಧ್ಯಕ್ಷ ಆರ್‌.ಬಿ.ಗರಗ, ಉಪಾಧ್ಯಕ್ಷ ಎಂ.ಜೆ.ಬಂಗ್ಲೇವಾಲೆ, ಕಾರ್ಯದರ್ಶಿ ಜಿ.ಆರ್‌.ಮಲ್ಲಾಪುರ, ಶಂಕರ ಕಡಕುಂಟಲ ಸೇರಿದಂತೆ ಅನೇಕ ಕಲಾವಿದರು ಗ್ಯಾಲರಿ ಉಳಿವಿಗಾಗಿ ದನಿ ಎತ್ತಿದ್ದಾರೆ.

1977ರಲ್ಲಿ ಶಂಕುಸ್ಥಾಪನೆ
ಡಿ. ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ, 1977ರಲ್ಲಿ ಈ ಕಲಾ ಗ್ಯಾಲರಿಗೆ ಶಂಕುಸ್ಥಾಪನೆ ಮಾಡಲಾಗಿತ್ತು. 1981ರ ಏ.18ರಂದು ಆಗಿನ ನಗರಾಭಿವೃದ್ಧಿ ಸಚಿವ ಧರ್ಮಸಿಂಗ್ ಗ್ಯಾಲರಿ ಉದ್ಘಾಟಿಸಿದ್ದರು. ಕೆಲ ವರ್ಷ ಉತ್ತಮವಾಗಿ ನಡೆದ ಗ್ಯಾಲರಿ ತದನಂತರ ಹಲವು ಕಾರಣಗಳಿಂದ ಪಾಳುಬಿದ್ದಿತ್ತು. ಗ್ಯಾಲರಿ ಪುನರುಜ್ಜೀವನಕ್ಕೆ ಈ ಭಾಗದ ಕಲಾವಿದರು ಒಗ್ಗೂಡಿದ್ದರು.

ಪಾಲಿಕೆಯಿಂದ ₹1 ಲಕ್ಷ ಅನುದಾನ ಮತ್ತು ಕಲಾವಿದರ ಧನಸಹಾಯ ದೊರೆತು ಕೊನೆಗೂ 2019 ಜ.30ರಂದು ನವೀಕರಣಗೊಂಡ ಗ್ಯಾಲರಿ ಉದ್ಘಾಟಿಸಲಾಗಿತ್ತು. ಕಲಾ ಪ್ರದರ್ಶನಗಳೊಂದಿಗೆ ಮರಳಿ ಚಟುವಟಿಕೆ ಆರಂಭವಾಗಿತ್ತು. ಆದರೆ, ಕೋವಿಡ್–19 ಸಂದರ್ಭದಲ್ಲಿ ಕಲಾ ಚಟುವಟಿಕೆ ಬಂದ್ ಆಗಿತ್ತು. ಬಳಿಕ, ಗ್ಯಾಲರಿ ಶಾಶ್ವತವಾಗಿ ಮುಚ್ಚುವ ಹಂತಕ್ಕೆ ಬಂದಿದೆ.

ಉತ್ತರ ಕರ್ನಾಟಕದಲ್ಲಿ ಧಾರವಾಡ ಹೊರತುಪಡಿಸಿದರೆ ಬೇರೆ ಯಾವ ಭಾಗದಲ್ಲಿಯೂ ಸರ್ಕಾರಿ ಆರ್ಟ್‌ ಗ್ಯಾಲರಿ ಇಲ್ಲ. ಕಲಾವಿದರು ತಮ್ಮ ಕಲಾಕೃತಿಗಳ ಪ್ರದರ್ಶನಕ್ಕಾಗಿ ಬೆಂಗಳೂರು ಅಥವಾ ಮುಂಬೈಗೆ ಹೋಗಬೇಕು. ಹೀಗಾಗಿ ಹುಬ್ಬಳ್ಳಿಯಲ್ಲೊಂದು ಕಲಾಗ್ಯಾಲರಿ ಇರಬೇಕು ಎನ್ನುವುದು ಈ ಭಾಗದ ಕಲಾವಿದರ ಅಪೇಕ್ಷೆ. ಆದರೆ, ಈಗಿನ ಸ್ಮಾರ್ಟ್‌ಸಿಟಿ ಯೋಜನೆಯಡಿ ಅಂತರರಾಷ್ಟ್ರೀಯ ಮಟ್ಟದ ಮತ್ಸ್ಯಾಲಯವಾಗಿಸಲು ಗ್ಯಾಲರಿಯ ಕಟ್ಟಡವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಕಲಾವಿದರು ಆರೋಪಿಸಿದ್ದಾರೆ.

ಗ್ಯಾಲರಿಗಾಗಿ ಪಾಲಿಕೆಯು ಬದಲಿ ಕಟ್ಟಡ ನೀಡಲಿದೆ ಎನ್ನಲಾಗುತ್ತಿರುವ ವಿದ್ಯಾನಗರ ಉದ್ಯಾನದ ಬಳಿಯ ಕಟ್ಟಡದಲ್ಲಿ ಪೊಲೀಸ್‌ ಠಾಣೆ ಕಾರ್ಯಾರಂಭ ಮಾಡಿದೆ. ಹೀಗಾಗಿ ಈ ಕಟ್ಟಡವೂ ಗ್ಯಾಲರಿಗಾಗಿ ಸಿಗುವುದು ಅನುಮಾನ ಎನ್ನುತ್ತಾರೆ ಕಲಾವಿದರು. 

ಮತ್ಸ್ಯಾಲಯವಾದರೆ, ಗ್ಯಾಲರಿಗೆ ಬೇರೆ ಕಟ್ಟಡ: ಇಟ್ನಾಳ
‘ಕಲಾ ಗ್ಯಾಲರಿಯ ಕಟ್ಟಡವನ್ನು ದೊಡ್ಡ ಮತ್ಸ್ಯಾಲಯವಾಗಿ ಬದಲಾಯಿಸುವ ಪ್ರಸ್ತಾವ ನಮ್ಮ ಮುಂದಿಲ್ಲ. ಇದೆಲ್ಲ ಬರೀ ಊಹಾಪೋಹವಷ್ಟೇ. ಹಾಗೊಂದು ವೇಳೆ ಕಟ್ಟಡವನ್ನು ಮತ್ಸ್ಯಾಲಯವಾಗಿ ಮಾಡಿದರೆ, ಪಾಲಿಕೆ ಬಳಿ ಇನ್ನೂ ಹಲವು ಕಟ್ಟಡಗಳಿವೆ. ಅವುಗಳಲ್ಲಿ ಒಂದನ್ನು ಗ್ಯಾಲರಿಗಾಗಿ ನೀಡಲಾಗುವುದು. ಕಲಾವಿದರು ಗೊಂದಲಕ್ಕೀಡಾಗುವುದು ಅನಗತ್ಯ’ ಎನ್ನುತ್ತಾರೆ ಮಹಾನಗರ ಪಾಲಿಕೆ ಕಮಿಷನರ್ ಸುರೇಶ ಇಟ್ನಾಳ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಲಾವಿದರಿಗೆ ಗ್ಲಾಸ್‌ಹೌಸ್‌ನಲ್ಲಿ ಹತ್ತಾರು ವರ್ಷಗಳಿಂದ ಜಾಗ ಕೊಡಲಾಗಿದೆ ನಿಜ. ಆದರೆ, ಅವರು ಎಷ್ಟು ಸದುಪಯೋಗ ಮಾಡಿಕೊಂಡಿದ್ದಾರೆ? ನನ್ನ ಪ್ರಕಾರ ಅವರು ಅದನ್ನು ಬಳಸಿಕೊಂಡಿದ್ದು ಕಡಿಮೆ. ಅಲ್ಲದೆ, ವಿದ್ಯಾನಗರದ ಪಾಲಿಕೆಯ ಉದ್ಯಾನದ ಬಳಿಯ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಪೊಲೀಸ್ ಠಾಣೆ ಆರಂಭಿಸಲಾಗಿದೆ. ಠಾಣೆಗೆ ಪ್ರತ್ಯೇಕ ಕಟ್ಟಡಕ್ಕಾಗಿ ಸ್ಥಳ ಪರಿಶೀಲನೆ ಮಾಡಲಾಗಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು