ಮಂಗಳವಾರ, ಮೇ 24, 2022
26 °C
ಸೆಪ್ಟೆಂಬರ್‌ನಿಂದ ಸ್ಥಗಿತ: ತಾವೇ ಖರ್ಚು ನಿಭಾಯಿಸಬೇಕಾದ ಸ್ಥಿತಿ

ಹುಬ್ಬಳ್ಳಿ: ಆಶಾ ಕಾರ್ಯಕರ್ತೆಯರಿಗೆ ಸಿಗದ ಕೋವಿಡ್‌ ಭತ್ಯೆ

ಗೋವರ್ಧನ ಎಸ್‌.ಎನ್‌. Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೋವಿಡ್‍ ನಿಯಂತ್ರಣಾ ಕಾರ್ಯದಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿದ್ದ ಕೋವಿಡ್‍ ಅಪಾಯ ಭತ್ಯೆಯನ್ನು ನಾಲ್ಕು ತಿಂಗಳಿಂದ ನೀಡಿಲ್ಲ. ಇದರಿಂದ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

2021ರ ಸೆಪ್ಟೆಂಬರ್‌ನಿಂದ ಕೋವಿಡ್‍ ಭತ್ಯೆ ನೀಡಿಲ್ಲವೆಂದು ಆಶಾ ಕಾರ್ಯಕರ್ತೆಯರು ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

‘ಕೋವಿಡ್‍ ಆರಂಭವಾದಾಗಿನಿಂದ ಪ್ರಾಣ ಒತ್ತೆಯಿಟ್ಟು ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ 2 ವರ್ಷದಿಂದ ಭತ್ಯೆಯಾಗಿ ₹1,000 ಕೊಡುತ್ತಿದ್ದರು. ಆದರೆ, ಕಳೆದ ಸೆಪ್ಟೆಂಬರ್‌ನಿಂದ ಈ ಹಣ ಜಮೆ ಆಗಿಲ್ಲ. ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಅವರ ಗಮನಕ್ಕೂ ತರಲಾಗಿದ್ದು, ಭರವಸೆಯಷ್ಟೇ ನೀಡಿದ್ದಾರೆ’ ಎಂದು ಧಾರವಾಡ ಆಶಾ ಕಾರ್ಯಕರ್ತೆಯರ ಯೂನಿಯನ್‍ನ ಉಪಾಧ್ಯಕ್ಷೆ ಭುವನಾ ಬಳ್ಳಾರಿ ತಿಳಿಸಿದರು.

‘ನಿತ್ಯ ಕೋವಿಡ್‍ ಕೆಲಸ ಮಾಡುತ್ತಿದ್ದರೂ ಸರ್ಕಾರದಿಂದ ಗೌರವಧನ, ಸುರಕ್ಷತಾ ಸಾಮಗ್ರಿಗಳು ಸಹ ಸಿಗುತ್ತಿಲ್ಲ. ಒಂದು ವೇಳೆ ಕೋವಿಡ್‍ಗೆ ತುತ್ತಾದರೂ ವಿಶೇಷ ಸವಲತ್ತುಗಳು ಇಲ್ಲವಾಗಿದೆ. ಕೆಲವರ ಕೆಲಸದ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ತುಂಬಲಾಗದ ಕಾರಣ ಗರ್ಭಿಣಿ, ಬಾಣಂತಿ, ಮಕ್ಕಳ ಆರೈಕೆಗೆ ಸಿಗುತ್ತಿದ್ದ ಹಣವೂ ಸಿಗುತ್ತಿಲ್ಲ’ ಎಂದು ಸಮಸ್ಯೆ ಬಿಚ್ಚಿಟ್ಟರು.

‘ಕೋವಿಡ್ ಲಸಿಕೆ ನೀಡಿಕೆ, ದತ್ತಾಂಶ ಸಂಗ್ರಹ, ಮನೆ-ಮನೆ ಸಮೀಕ್ಷೆ, ಕೋವಿಡ್‍ ಪೀಡಿತರನ್ನು ಆಸ್ಪತ್ರೆಗೆ ಕಳುಹಿಸುವುದು, ಲಸಿಕೆ ಪಡೆಯಲು ಜನರ ಮನವೊಲಿಸುವುದು ಮೊದಲಾದ ಕೆಲಸಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದೇವೆ. ಕೆಲ ತಿಂಗಳಿಂದ ಭತ್ಯೆ ಸಿಗದ ಕಾರಣ ಪ್ರಯಾಣ ವೆಚ್ಚ, ಆಹಾರಕ್ಕೆ ನಾವೇ ಖರ್ಚು ಮಾಡುತ್ತಿದ್ದೇವೆ. ಇದರ ಹೊರತಾಗಿ ಸಿಗುವ ಗೌರವಧನ ₹4,000 ಮಾತ್ರ. ಇದರಿಂದ ಜೀವನ ನಿರ್ವಹಣೆ ತುಂಬಾ ಕಷ್ಟವಾಗಿದೆ’ ಎಂದು ಆಶಾ ಕಾರ್ಯಕರ್ತೆಯರಾದ ಸ್ವಪ್ನ, ಸುಜಾತ, ಶಾಂತಾ ಚೌಹಾಣ್ ಅಲವತ್ತುಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು