ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ತಲಾಖ್‌ಗೆ ಒತ್ತಾಯಿಸಿ ಹಲ್ಲೆ; ಪ್ರಕರಣ ದಾಖಲು

Last Updated 19 ನವೆಂಬರ್ 2021, 3:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವರದಕ್ಷಿಣೆ ತರುವಂತೆ ಮಹಿಳೆ ಮೇಲೆ ದೌರ್ಜನ್ಯ ನಡೆಸಿದ್ದಲ್ಲದೆ, ತಲಾಖ್‌ ನೀಡಲು ಒತ್ತಾಯಿಸಿ ಹಲ್ಲೆ ನಡೆಸಿದ ಪ್ರಕರಣ ನವಲಗುಂದದ ಬಸವೇಶ್ವರ ನಗರದಲ್ಲಿ ನಡೆದಿದೆ. ಈ ಕುರಿತು ಸ್ಥಳೀಯ ನಿವಾಸಿಯಾದ ಮಹಿಳೆ, ತನ್ನ ಪತಿ ಮಹ್ಮದ್‌ ಇಮಾಮ್‌ಸಾಬ್‌ ಸೇರಿ ಒಂಬತ್ತು ಮಂದಿ ವಿರುದ್ಧ ಇಲ್ಲಿಯ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಹಿಳೆಯ ಪತಿ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದ. ಮಹಿಳೆ ಕುಟುಂಬದವರು ನವಲಗುಂದಕ್ಕೆ ತೆರಳಿ ಬುದ್ಧಿ ಮಾತು ಹೇಳಿ ಬಂದಿದ್ದರು. ನಂತರ ಗಂಡನ ಕುಟುಂಬದವರು ಸೇರಿ, ವರದಕ್ಷಿಣೆ ತರಬೇಕು ಇಲ್ಲದಿದ್ದರೆ ತಲಾಖ್‌ ನೀಡಬೇಕು ಎಂದು ಮಾನಸಿಕ ಹಿಂಸೆ ನೀಡಿ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.

ಪತ್ನಿ ತನ್ನ ಜೊತೆ ನಗ್ನವಾಗಿದ್ದ ಸಂದರ್ಭದ ಫೊಟೊ ಮೊಬೈಲ್‌ನಲ್ಲಿ ತೆಗೆದು, ವರದಕ್ಷಿಣೆ ತರದಿದ್ದರೆ ವೈರಲ್‌ ಮಾಡುವುದಾಗಿ ಬೆದರಿಸಿದ್ದ. ಇದನ್ನು ತವರು ಮನೆಗೆ ತಿಳಿಸಿದ್ದಾಳೆ ಎಂದು ಮನೆಯವರೆಲ್ಲ ಸೇರಿಕೊಂಡು, ಅವಾಚ್ಯವಾಗಿ ನಿಂದಿಸಿ ಮನೆಯಿಂದ ಹೊರ ಹಾಕಿದ್ದಾರೆ. ಅಲ್ಲದೆ, ತಲಾಖ್‌ ನೀಡದಿದ್ದರೆ ತವರಿಗೆ ಬಂದು ಇಬ್ಬರು ಮಕ್ಕಳ ಸಮೇತ ಜೀವ ತೆಗೆಯುವ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಚಾಕು ಇರಿತ: ಗದಗ ರಸ್ತೆಯ ರೈಲ್ವೆ ಲೋಕೊ ಶೆಡ್ ಮುಂಭಾಗ ರೈಲ್ವೆ ಉದ್ಯೋಗಿ ಚಂದ್ರಶೇಖರ ನಾಯ್ಡು ಅವರಿಗೆ ನಾಲ್ವರು ದುಷ್ಕರ್ಮಿಗಳು ಗುರುವಾರ ಚಾಕು ಇರಿದು ಪರಾರಿಯಾಗಿದ್ದಾರೆ.

ಗಾಯಗೊಂಡಿದ್ದ ಅವರನ್ನು ರೈಲ್ವೆ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಹಲ್ಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕಮಿಷನರ್‌ ಲಾಬೂ ರಾಮ್‌, ‘ಆರೋಪಿಗಳ ಪತ್ತೆಗೆ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ಶೀಘ್ರ ಬಂಧಿಸಲಾಗುವುದು’ ಎಂದರು.

ತನಿಖೆಗೆ ಛತ್ತೀಸಗಡಕ್ಕೆ: ನೆಕ್ಸ್‌ ಕಾಯಿನ್ ಕಂಪನಿ ಹೆಸರಿನಲ್ಲಿ ನಡೆದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸೈಬರ್ ಠಾಣೆ ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಕ್ಕಾಗಿ ಛತ್ತೀಸಗಡಕ್ಕೆ ತೆರಳಲು ನಿರ್ಧರಿಸಿದ್ದಾರೆ.

ನೆಕ್ಸ್‌ಕಾಯಿನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ಗಳಿಸಬಹುದು ಎಂದು ನಗರದ ಪ್ರಕಾಶ ಎಸ್‌.ಎಲ್‌. ಅವರಿಗೆ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ನಂಬಿಸಿದ ವ್ಯಕ್ತಿಯೊಬ್ಬ, ₹8.13 ಲಕ್ಷ ವಂಚಿಸಿದ್ದ. ಈ ಕುರಿತು ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಹಣ ವರ್ಗಾವಣೆಯಾದ ಖಾತೆ, ಆರೋಪಿಗಳ ಮೊಬೈಲ್ ಸಂಖ್ಯೆ ಚತ್ತೀಸಗಡಕ್ಕೆ ವಯಸ್ಸಾದ ವ್ಯಕ್ತಿಯ ಹೆಸರಲ್ಲಿ ಇರುವುದು ತಿಳಿದು ಬಂದಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT