ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆಯ ಹುಮ್ಮಸ್ಸಿನಲ್ಲಿ ಅಥ್ಲೀಟ್‌ಗಳು

ಕರ್ನಾಟಕ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಅಥ್ಲೆಟಿಕ್ಸ್‌ ಇಂದಿನಿಂದ
Last Updated 8 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ಹುಬ್ಬಳ್ಳಿ/ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳು 69ನೇ ಅಥ್ಲೆಟಿಕ್‌ ಚಾಂಪಿಯನ್‌ಷಿಪ್ ವಿದ್ಯಾಕಾಶಿ ಧಾರವಾಡದಲ್ಲಿ ಸೋಮವಾರದಿಂದ ಮೂರು ದಿನ ನಡೆಯಲಿದ್ದು, ಅಥ್ಲೀಟ್‌ಗಳು ಹೊಸ ದಾಖಲೆ ನಿರ್ಮಿಸುವ ಹುಮ್ಮಸ್ಸಿನಲ್ಲಿದ್ದಾರೆ.

ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಧಾರವಾಡದ ಜೆ.ಎಸ್‌.ಎಸ್‌. ಶಿಕ್ಷಣ ಸಂಸ್ಥೆ ಈ ಬಾರಿಯ ಚಾಂಪಿಯನ್‌ಷಿಪ್‌ಗೆ ಆತಿಥ್ಯ ವಹಿಸಿದೆ. ಭಾನುವಾರ ಸಂಜೆ ವೇಳೆಗೆ 72 ಕಾಲೇಜುಗಳ 550ಕ್ಕೂ ಹೆಚ್ಚು ಅಥ್ಲೀಟ್‌ಗಳು ಹೆಸರು ನೋಂದಾಯಿಸಿದ್ದರು. ವಿ.ವಿ. ವ್ಯಾಪ್ತಿಯ ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.

ಸ್ಪರ್ಧೆಗಳು ನಡೆಯುವ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ಸಿದ್ಧತೆಗಳು ಪೂರ್ಣಗೊಂಡಿದ್ದು, ಜೆಎಸ್‌ಎಸ್‌ ಸಂಸ್ಥೆಯ ವಿತ್ತಾಧಿಕಾರಿ ಡಾ. ಅಜಿತ್ ಪ್ರಸಾದ, ಕಾಲೇಜಿನ ಪ್ರಾಚಾರ್ಯ ಡಾ. ಜಿ. ಕೃಷ್ಣಮೂರ್ತಿ, ಕ.ವಿ.ವಿ. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಬಿ.ಎಂ. ಪಾಟೀಲ, ಎಂಪಿಇಡಿ ವಿಭಾಗದ ಸಂಯೋಜಕಿ ಶಕುಂತಲಾ ಹಿರೇಮಠ ಭಾನುವಾರ ಮೈದಾನ ಪರಿಶೀಲನೆ ನಡೆಸಿದರು. ಸೋಮವಾರ ಬೆಳಿಗ್ಗೆ 6.30ಕ್ಕೆ ಮೊದಲ ಸ್ಪರ್ಧೆ ಆರಂಭವಾಗಲಿದೆ.

ವಿದ್ಯಾರ್ಥಿಗಳ ಕ್ರೀಡಾ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ದಾಖಲೆಗಳನ್ನು ಮಾಡಲು ಅಥ್ಲೀಟ್‌ಗಳು ಕಾಯುತ್ತಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಆತಿಥ್ಯ ವಹಿಸಿರುವ ಸಂಸ್ಥೆ ಪದಕ ಗೆದ್ದವರಿಗೆ ಮತ್ತು ದಾಖಲೆಗಳನ್ನು ಮಾಡಿದವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ.

‘ಚಾಂಪಿಯನ್‌ಷಿಪ್‌ನಲ್ಲಿ 41 ಕ್ರೀಡೆಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಚಿನ್ನ ಪಡೆದವರಿಗೆ ₹1,500, ಬೆಳ್ಳಿ ಗೆದ್ದವರಿಗೆ ₹1,000 ಮತ್ತು ಕಂಚು ಜಯಿಸಿದವರಿಗೆ ₹ 500 ನಗದು ಬಹುಮಾನ ನೀಡಲಾಗುತ್ತದೆ. ದಾಖಲೆ ನಿರ್ಮಿಸಿದವರಿಗೆ ₹5,000 ನಗದು ಕೊಡಲಾಗುವುದು’ ಎಂದು ಅಜಿತ್‌ ಪ್ರಸಾದ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಭಾಗದಲ್ಲಿ ಸಾಕಷ್ಟು ಪ್ರತಿಭಾನ್ವಿತ ಕ್ರೀಡಾಪಟುಗಳಿದ್ದು, ಅವರಿಗೆ ಪ್ರೋತ್ಸಾಹದ ಕೊರತೆಯಿದೆ. ಆದ್ದರಿಂದ ನಗದು ಬಹುಮಾನ ನೀಡಲಾಗುವುದು. ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಬಂದ ಅಥ್ಲೀಟ್‌ಗಳಿಗೆ ಹಾಗೂ ಸಿಬ್ಬಂದಿಗೆ ಕೂಟದ ಹಿಂದಿನ ದಿನದಿಂದಲೇ ವಸತಿ ಮತ್ತು ಊಟದ ವ್ಯವಸ್ಥೆ ಮಾಡಿದ್ದೇವೆ. ಕನಿಷ್ಠ ನಾಲ್ಕೈದು ದಾಖಲೆಗಳು ನಿರ್ಮಾಣವಾಗುವ ನಿರೀಕ್ಷೆಯಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT