ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಪರಿಶಿಷ್ಟರ ಮೇಲಿನ ದೌರ್ಜನ್ಯ ಏರುಗತಿಯಲ್ಲಿ

ಉತ್ತರ ಕರ್ನಾಟಕದಲ್ಲೇ ಹೆಚ್ಚು ಪ್ರಕರಣಗಳು ವರದಿ
Last Updated 10 ಅಕ್ಟೋಬರ್ 2020, 11:52 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿವೆ. ಈ ಪೈಕಿ, ಉತ್ತರ ಕರ್ನಾಟಕದಲ್ಲೇ ಹೆಚ್ಚಿನ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿವೆ.

ಸಮಾಜ ಕಲ್ಯಾಣ ಇಲಾಖೆಯು ಸಂಗ್ರಹಿಸಿರುವ ಹಿಂದಿನ ಮೂರು ವರ್ಷಗಳ ಅಂಕಿಅಂಶಗಳು ಇದನ್ನು ಪುಷ್ಟೀಕರಿಸುತ್ತವೆ. ಈ ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೇ 670 ಪ್ರಕರಣಗಳು ದಾಖಲಾಗಿವೆ.

ಈ ವರ್ಷ ವಿಜಯಪುರದಲ್ಲಿ ಅತಿ ಹೆಚ್ಚು, 70 ಪ್ರಕರಣಗಳು ದಾಖಲಾಗಿವೆ. ಚಿತ್ರದುರ್ಗ, ರಾಮನಗರ, ಶಿವಮೊಗ್ಗ ಹಾಗೂ ರಾಯಚೂರಿನಲ್ಲಿ ದೌರ್ಜನ್ಯಗಳು ನಡೆದಿಲ್ಲ. 2017 ಮತ್ತು 2018ರಲ್ಲಿ ಹೆಚ್ಚಿನ ಪ್ರಕರಣಗಳಿಗೆ ಸಾಕ್ಷಿಯಾಗಿದ್ದ ರಾಯಚೂರು, ಅತ್ಯಾಚಾರ ಪ್ರಕರಣಗಳಲ್ಲೂ ಸತತ ಎರಡು ವರ್ಷ ಮೊದಲ ಸ್ಥಾನದಲ್ಲಿತ್ತು. 2019ರಲ್ಲಿ ಕೊಪ್ಪಳ ಆ ಸ್ಥಾನಕ್ಕೇರಿತು.

134 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ: ಸರ್ಕಾರ ಇತ್ತೀಚೆಗೆ ಹೈಕೋರ್ಟ್‌ಗೆ ಸಲ್ಲಿಸಿದ್ದ ಮಾಹಿತಿ ಪ್ರಕಾರ, ರಾಜ್ಯದಲ್ಲಿ 2015–2019ರ ಅವಧಿಯಲ್ಲಿ 35,091 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 6,461 ಪ್ರಕರಣಗಳ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. 3,198 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದು, 134 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ!

‘ಪರಿಶಿಷ್ಟರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ದಾಖಲಾಗುವ ಪ್ರಕರಣಗಳ ಸ್ವರೂಪದಲ್ಲಿ ವ್ಯತ್ಯಾಸವಿದೆ. ಉತ್ತರದಲ್ಲಿ ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿದ್ದರೆ, ದಕ್ಷಿಣದಲ್ಲಿ ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣಗಳು ಹೆಚ್ಚು ದಾಖಲಾಗಿವೆ’ ಎನ್ನುತ್ತಾರೆ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನಾ ಸಮಿತಿಯ ರಾಜ್ಯ ಸಂಚಾಲಕಿ ಪಿ. ಯಶೋದಾ.

ತ್ವರಿತ ನ್ಯಾಯಾಲಯ ಸ್ಥಾಪನೆಯಾಗಬೇಕು: ‘ಪ್ರಕರಣಗಳ ತುರ್ತು ವಿಲೇವಾರಿಗಾಗಿ ಜಿಲ್ಲೆಗೊಂದು ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು. ಮುಖ್ಯಮಂತ್ರಿ ಅಧ್ಯಕ್ಷತೆಯ ರಾಜ್ಯ ಉಸ್ತುವಾರಿ ಮತ್ತು ಮೇಲ್ವಿಚಾರಣೆ ಸಮಿತಿ ಕಾಲಕಾಲಕ್ಕೆ ಸಭೆ ನಡೆಸಿ ಪ್ರಕರಣಗಳ ಪ್ರಗತಿ ಪರಿಶೀಲಿಸಬೇಕು. ತನಿಖಾಧಿಕಾರಿಗಳು ಮತ್ತು ವಿಶೇಷ ಸರ್ಕಾರಿ ಅಭಿಯೋಜಕರ ಕಾರ್ಯದಕ್ಷತೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಹೈಕೋರ್ಟ್ ವಕೀಲ ಅನಂತ ನಾಯಕ್ ಎನ್.

ದೌರ್ಜನ್ಯ ಪ್ರಕರಣಗಳು

ವರ್ಷ; ಕೊಲೆ; ಅತ್ಯಾಚಾರ; ಇತರೆ; ಒಟ್ಟು

2017; 70; 173; 1,509; 1,752

2018; 88; 188; 1,218; 1,494

2019; 68; 216; 1,320; 1,604

(ಆಧಾರ: ಸಮಾಜ ಕಲ್ಯಾಣ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT