ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಟೊ ಟಿಪ್ಪರ್‌ ಚಾಲಕರಿಗೆ ಕಿರುಕುಳ’

ಹೊರಗುತ್ತಿಗೆ ನೌಕರರಿಗೆ ಅನ್ಯಾಯ, ಪಾಲಿಕೆ ಸಿಬ್ಬಂದಿ ಶಾಮೀಲು: ಆರೋಪ
Last Updated 2 ಅಕ್ಟೋಬರ್ 2022, 6:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಆಟೊ ಟಿಪ್ಪರ್‌ ಚಾಲಕರ ವೇತನದಲ್ಲಿಗುತ್ತಿಗೆದಾರರು ₹ 3,000–₹4,000 ಕಮಿಷನ್‌ ಪಡೆಯುತ್ತಿದ್ದಾರೆ. ಈ ಅವ್ಯವಸ್ಥೆಯನ್ನು ಐದು ದಿನಗಳಲ್ಲಿ ಸರಿಪಡಿಸದಿದ್ದರೆ, ಪಾಲಿಕೆಯ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಲಾಗುವುದು’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಎಚ್ಚರಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗುತ್ತಿಗೆದಾರರೊಂದಿಗೆ ಪಾಲಿಕೆಯ ಘನತ್ಯಾಜ್ಯ ವಿಭಾಗದ ಕೆಲವು ಅಧಿಕಾರಿಗಳು ಶಾಮೀಲಾಗಿ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ, ಆಟೊ ಟಿಪ್ಪರ್‌ ಚಾಲಕರ ವಾರದ ರಜೆಯ ದಿನ ಕೆಲಸ ಮಾಡಲು 30 ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಗುತ್ತಿಗೆದಾರರು ಲೆಕ್ಕ ತೋರಿಸಿದ್ದಾರೆ. ಆದರೆ, ಹೊರಗುತ್ತಿಗೆ ಸಿಬ್ಬಂದಿ ರಜೆ ತೆಗೆದುಕೊಂಡರೆ, ಆ ದಿನ ಕೆಲಸಕ್ಕೆ ಹೊರಗುತ್ತಿಗೆ ಸಿಬ್ಬಂದಿಯೇ ಯಾರನ್ನಾದರೂ ಕರೆದುಕೊಂಡು ಬರಬೇಕು. ಇಲ್ಲವೇ ಒಂದು ದಿನಕ್ಕೆ ₹ 300 ಕೊಡಬೇಕು’ ಎಂದು ದೂರಿದರು.

‘30 ಜನ ಹೆಚ್ಚುವರಿ ಸಿಬ್ಬಂದಿಗೆ ಪಾಲಿಕೆಯಿಂದ ಗುತ್ತಿಗೆದಾರರಿಗೆ ಪ್ರತ್ಯೇಕವಾಗಿ ಪ್ರತಿ ತಿಂಗಳು ತಲಾ ₹3.84 ಲಕ್ಷ ನೀಡಲಾಗುತ್ತಿದೆ. ಇದು ಬೋಗಸ್‌ ಆಗಿದೆ. 30 ಸಿಬ್ಬಂದಿಯೇ ಇಲ್ಲ. ಆದರ್ಶ ಎಂಟರ್‌ಪ್ರೈಸಸ್‌ ಎಂಬ ಸಂಸ್ಥೆಯಿಂದ ಈ ಅವ್ಯವಹಾರ ನಡೆಯುತ್ತಿದೆ. ಆಟೊ ಟಿಪ್ಪರ್ ಚಾಲಕರಿಗೆ ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳ ವೇತನ ನೀಡಿಲ್ಲ. ಹೊರಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಮತ್ತು ಕಪ್ಪುಪಟ್ಟಿಗೆ ಸೇರಿಸಬೇಕು’ ಎಂದು ಆಗ್ರಹಿಸಿದರು.

‘ಆಟೊಟಿಪ್ಪರ್‌ ಚಾಲಕರಿಗೆ ಕಾರ್ಮಿಕರ ಪಿಎಫ್‌ ಸೌಲಭ್ಯ ನೀಡುವುದರಲ್ಲಿಯೂ ಅವ್ಯವಹಾರ ನಡೆದಿದೆ. ಇದನ್ನು ಕೂಡಲೇ ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

ಕಾನೂನು ರೀತಿ ಕ್ರಮ: ಆಯುಕ್ತ

‘ಈಗಾಗಲೇ ಗುತ್ತಿಗೆದಾರರಿಗೆ ನೋಟಿಸ್‌ ಜಾರಿ ಮಾಡಲಾಗಿದ್ದು, ಸಮರ್ಪಕ ವೇತನ ನೀಡಿರುವುದಾಗಿ ಉತ್ತರ ನೀಡಿದ್ದಾರೆ. ಈ ಬಾರಿ ತಪ್ಪು ಮಾಡಿರುವುದು ಸಾಬೀತಾದರೆ, ಗುತ್ತಿಗೆ ಒ‌ಪ್ಪಂದ ರದ್ದು ಮಾಡಿ, ಕಪ್ಪುಪಟ್ಟಿಗೆ ಸೇರಿಸಲಾಗುವುದು’ ಎಂದು ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಹೇಳಿದರು.

‘ಈಗ ಏಕಾಏಕಿ ಗುತ್ತಿಗೆ ರದ್ದು ಮಾಡಿದರೆ ಹೊರಗುತ್ತಿಗೆ ಸಿಬ್ಬಂದಿಯನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಕಾನೂನು ರೀತಿಯ ಕ್ರಮ ವಹಿಸಲಾಗುವುದು. ಪಾಲಿಕೆಯ ಯಾವುದೇ ಸಿಬ್ಬಂದಿ ಅವ್ಯವಹಾರದಲ್ಲಿ ಶಾಮೀಲಾಗಿರುವ ಬಗ್ಗೆ ಮಾಹಿತಿ ನೀಡಿದರೆ, ಕಠಿಣ ಕ್ರಮ ಜರುಗಿಸಲಾಗುವುದು. ಆಂತರಿಕ ತನಿಖೆಯನ್ನೂ ನಡೆಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT