ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು–ಮೀರಜ್‌ ವಿಶೇಷ ರೈಲು ಇಂದಿನಿಂದ

ಪ್ರವಾಹ ಪೀಡಿತ ಜನರಿಗೆ ನೈರುತ್ಯ ವಲಯದ ನೆರವಿನ ಹಸ್ತ
Last Updated 7 ಆಗಸ್ಟ್ 2019, 19:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯಲ್ಲಿ ನಿರಂತರ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಇರುವ ಕಾರಣ ನೈರುತ್ಯ ರೈಲ್ವೆಯು ನಾಲ್ಕು ದಿನಗಳ ಮಟ್ಟಿಗೆ ಮೀರಜ್‌–ಯಶವಂತಪುರ ಜನಸಾಧಾರಣ ಎಕ್ಸ್‌ಪ್ರೆಸ್‌ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ.

ಈ ರೈಲಿನ ಸಂಚಾರ ಗುರುವಾರ (ಆ. 8) ರಾತ್ರಿ 11 ಗಂಟೆಗೆ ಯಶವಂತಪುರದಿಂದ ಆರಂಭವಾಗಲಿದೆ. ಮಧ್ಯಾಹ್ನ 3 ಗಂಟೆಗೆ ಬೆಳಗಾವಿ ತಲುಪಲಿದೆ. ಇದಕ್ಕೆ ಮುಂಗಡ ಟಿಕೆಟ್‌ ಕಾಯ್ದಿರಿಸುವುದು ಅಗತ್ಯವಿಲ್ಲ.

ಮಳೆಯ ಕಾರಣಕ್ಕಾಗಿ ಆ. 7ರಿಂದ ಮೂರು ದಿನ ಬೆಳಗಾವಿ ಜಿಲ್ಲೆಯ ರಾಯಬಾಗ ಹಾಗೂ ಉಗಾರ್‌ಖುರ್ದ್ ನಿಲ್ದಾಣಗಳಲ್ಲಿ ಎಲ್ಲ ಎಕ್ಸ್‌ಪ್ರೆಸ್‌ ರೈಲುಗಳು ಒಂದು ನಿಮಿಷ ತಾತ್ಕಾಲಿಕ ನಿಲುಗಡೆಯಾಗಲಿವೆ.

ಪ್ರವಾಸ ಸಂತ್ರಸ್ತರ ಸಲುವಾಗಿ ರೈಲ್ವೆ ಇಲಾಖೆ ಬೆಳಗಾವಿ, ಗೋಕಾಕ, ರಾಯಬಾಗ ಮತ್ತು ಚಿಕ್ಕೋಡಿ ನಿಲ್ದಾಣಗಳಲ್ಲಿ ನಿರೀಕ್ಷಣಾ ಕೊಠಡಿಗಳನ್ನು ಆರಂಭಿಸಿದ್ದು, ಆಲ್ಲಿ ಆಹಾರದ ಸೌಲಭ್ಯವನ್ನೂ ಕಲ್ಪಿಸಿದೆ. ರೈಲ್ವೆ ಕ್ವಾಟ್ರರ್ಸ್‌ಗಳ ಸಂತ್ರಸ್ತರಿಗೆ ಪುನರ್ವಸತಿ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ.

ನೆರವಿನ ಹಸ್ತ:ಪ್ರವಾಹ ಪೀಡಿತ ಪ್ರದೇಶಗಳಿಗೆ ನೈರುತ್ಯ ರೈಲ್ವೆ ನೆರವಿನ ಹಸ್ತ ಚಾಚಿದೆ. ಹುಬ್ಬಳ್ಳಿಯಿಂದ ನೆರೆ ಸ್ಥಳಗಳಿಗೆ ಕುಡಿಯುವ ನೀರಿನ ಬಾಟಲ್‌, ದಿನಸಿ ಪದಾರ್ಥ, ಸೊಳ್ಳೆ ನಿಯಂತ್ರಕ ಔಷಧಗಳು, ಬಿಸ್ಕೆಟ್ಸ್‌, ಸಾಬೂನು, ಹಾಲಿನ ಪುಡಿ, ಚಹಾ ಪುಡಿ, ಮೇಣದ ಬತ್ತಿ, ಔಷಧಿ ಹೀಗೆ ಮೂಲ ಅಗತ್ಯತೆಗಳನ್ನು ಕಳುಹಿಸಿದೆ.

ಹುಬ್ಬಳ್ಳಿ ವಿಭಾಗದ ಹೆಚ್ಚುವರಿ ವಿಭಾಗೀಯ ನಿರ್ದೇಶಕ ಎಸ್‌.ಕೆ. ಷಹಾ ನೇತೃತ್ವದಲ್ಲಿ ಇದಕ್ಕಾಗಿ ತಂಡ ರಚಿಸಲಾಗಿದೆ. ಬುಧವಾರ ಹುಬ್ಬಳ್ಳಿ–ಹಜರತ್‌ ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ ರೈಲಿನ ಮೂಲಕ ಎಲ್ಲ ಸಾಮಗ್ರಿಗಳನ್ನು ಪ್ರವಾಹಪೀಡಿತ ಪ್ರದೇಶಗಳಿಗೆ ಕಳುಹಿಸಲಾಯಿತು. ರೈಲ್ವೆ ಉದ್ಯೋಗಿಗಳು, ಸಿಬ್ಬಂದಿ, ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ನಿರ್ದೇಶನದ ಮೇರೆಗೆ ನೈರುತ್ಯ ವಲಯ ಈ ಕಾರ್ಯ ಕೈಗೊಂಡಿದೆ.

ಮುಂದಕ್ಕೆ: ಬೆಳಗಾವಿ–ವಾಸ್ಕೋಡಗಾಮ ನಡುವೆ ಆರಂಭವಾಗಲಿರುವ ಹೊಸ ರೈಲಿನ ಉದ್ಘಾಟನೆ ಮುಂದೂಡಲಾಗಿದ್ದು, ಮಳೆ ಕಡಿಮೆಯಾದ ಬಳಿಕ ದಿನಾಂಕ ನಿಗದಿ ಮಾಡಲಾಗುವುದು ಎಂದು ನೈರುತ್ಯ ರೈಲ್ವೆ ತಿಳಿಸಿದೆ. ಮೊದಲಿನ ವೇಳಾಪಟ್ಟಿ ಪ್ರಕಾರ ಇದೇ 10ರಂದು ಹಸಿರು ನಿಶಾನೆ ತೋರಿಸಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT