ಬುಧವಾರ, ಡಿಸೆಂಬರ್ 8, 2021
26 °C
‘ಭೀಮಪಲಾಸ’ ಸಂಗೀತೋತ್ಸವ; ಮನದೂಗಿದ ಸಂಗೀತ ಪ್ರೇಮಿಗಳು

ಹುಬ್ಬಳ್ಳಿ: ಬಾನ್ಸುರಿ; ಕಿರಾನಾ, ಘರಾಣೆ ಮೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಸುಮಾರು ಎರಡು ತಾಸು ಬಾನ್ಸುರಿ ವಾದನದ ಮೂಲಕ ಸಂಗೀತದ ರಸದೌತಣ ಉಣಬಡಿಸಿದ ವಿಜಯಪುರದ ಕೃತ್ತಿಕಾ ಜಂಗಿನಮಠ, ಬಳಿಕ ನವದೆಹಲಿಯ ಪಂಡಿತ್‌ ಹರೀಶ್ ತಿವಾರಿ ಅವರಿಂದ ಕಿರಾನಾ ಘರಾಣೆ ಮೋಡಿ. ಅಷ್ಟೇ ತನ್ಮಯದಿಂದ ಕೇಳಿ ಚಪ್ಪಾಳೆಯ ಬಹುಮಾನ ಕೊಟ್ಟ ಸಂಗೀತ ಪ್ರೇಮಿಗಳು. 

ಇದು ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ಶನಿವಾರ ಸಂಜೆ ಕಂಡು ಬಂದ ಚಿತ್ರಣ. ಅದು ಪಂಡಿತ್‌ ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ನಡೆದ ‘ಭೀಮಪಲಾಸ’ ಸಂಗೀತೋತ್ಸವ ಕಾರ್ಯಕ್ರಮ.

ಹುಬ್ಬಳ್ಳಿಯ ಕ್ಷಮತಾ ಸೇವಾ ಸಂಸ್ಥೆ, ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್‌ ಟ್ರಸ್ಟ್‌ ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ, ಇನ್‌ಫೋಸಿಸ್‌ ಫೌಂಡೇಷನ್‌ ಮತ್ತು ಎಲ್‌ಐಸಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮೊದಲು ಅಂಧ ಕಲಾವಿದೆ ಕೃತ್ತಿಕಾ ಸಂಗೀತ ಪ್ರೇಮಿಗಳನ್ನು ತಮ್ಮ ಪ್ರತಿಭೆಯ ಮೂಲಕ ಹಿಡಿದಿಟ್ಟರು. ಕೊನೆಯಲ್ಲಿ ಬಾನ್ಸುರಿ ಮೂಲಕ ನುಡಿಸಿದ ’ಭಾಗ್ಯದ ಲಕ್ಷ್ಮಿ ಬಾರಮ್ಮ...’ ಹಾಡು ಜನರನ್ನು ಸಮ್ಮೋಹನಗೊಳಿಸಿತು. ಇವರಿಗೆ ಕಾರ್ತಿಕ ಜಂಗಿನಮಠ ತಬಲಾ ಸಾಥ್‌ ನೀಡಿದರು.

ಕಿರಾನಾ ಘರಾಣೆಯ ರಾಗ್‌ ಪೂರಿಯಾದಲ್ಲಿ ಹರೀಶ್ ತಿವಾರಿ ಗಾಯನಮೋಡಿ ಸಭಿಕರ ಸಂಭ್ರಮ ಇಮ್ಮಡಿಸಿತು. ಇವರಿಗೆ ರಘುನಾಥ್ ನಾಕೋಡ, ಹಾರ್ಮೋನಿಯಂ ಸುಧಾಂಶು ಕುಲಕರ್ಣಿ ಜೊತೆಯಾದರು.

‘ಮಾರ್ಕ್ಸ್‌’ವಾದಿಗಳಾಗಬೇಡಿ: ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ ‘ನಿಮ್ಮ ಮಕ್ಕಳು ಯಾವ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೊ; ಅದಕ್ಕೆ ಪ್ರೋತ್ಸಾಹ ನೀಡಿ. ‘ಮಾರ್ಕ್ಸ್‌’ (ಅಂಕ) ಗಳಿಕೆಯೇ ಜೀವನವಲ್ಲ. ಅಂಧರಾದರೂ ಕೃತಿಕಾ ಹೇಗೆ ಪ್ರತಿಭಾವಂತಳಾಗಿ ಬೆಳೆದಿದ್ದಾಳೆ ಎನ್ನುವುದಕ್ಕೆ ಅವರ ಕಲಾ ಪ್ರತಿಭೆಯೇ ಸಾಕ್ಷಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

’ಸಾಮವೇದದಿಂದಲೂ ಸಂಗೀತವಿದೆ. ಹಿಂದೆ ರಾಜರ ಕಾಲದಲ್ಲಿ ಕಲಾವಿದರಿಗೆ ರಾಜಾಶ್ರಯವಿದ್ದಂತೆ ಈಗಿನ ಕಲಾವಿದರಿಗೆ ಸರ್ಕಾರದಲ್ಲಿ ಇರುವವರು ನೆರವಾಗಬೇಕು. ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಬೇಕು. ಸ್ಥಳೀಯ ಭಾಷೆಯನ್ನು ಬಿಟ್ಟು ಇಂಗ್ಲಿಷ್‌ ಕಲಿಯಬೇಕು ಎನ್ನುವ ಒತ್ತಾಯ ಬಹಳಷ್ಟಿದೆ. ಸ್ಥಳೀಯ ಭಾಷೆ ಆದ್ಯತೆಯಾಗಿ ಕಲಿಯಬೇಕಿದೆ. ಜಿಲ್ಲೆಯಲ್ಲಿ ಸಂಗೀತ ಅಕಾಡೆಮಿ ಆರಂಭಿಸಲು ಪ್ರಯತ್ನ ನಡೆಯತ್ತಿದೆ.’ ಎಂದರು.

ಎಲ್‌ಐಸಿಯ ‌ದಕ್ಷಿಣ ಮಧ್ಯ ವಲಯದ ವಲಯಾಧಿಕಾರಿ ಜಗನ್ನಾಥ ಎಂ., ಮಾರುಕಟ್ಟೆ ಅಧಿಕಾರಿ ಮುರಳೀಧರ, ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಗಣಪತಿ ಭಟ್‌, ಜಿ.ಎಚ್‌. ನರೇಗಲ್‌, ಗೋವಿಂದ ಜೋಶಿ, ಮುರಳೀಧರ ಎಂ, ಸಮೀರ ಜೋಶಿ ಇದ್ದರು.

ಅಕಾಡೆಮಿಗೆ ಧಾರವಾಡದಲ್ಲಿ ಜಾಗ: ಬೆಲ್ಲದ
ಲಲಿತಾ ಕಲಾ ಅಕಾಡೆಮಿಗೆ ಧಾರವಾಡದ ಕೋರ್ಟ್‌ ಸರ್ಕಲ್‌ ಬಳಿ ಇರುವ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ನ ಜಾಗದಲ್ಲಿ ಕಚೇರಿ ಆರಂಭಿಸಲು ಜಾಗ ಗುರುತಿಸಲಾಗಿದೆ. ಶೀಘ್ರದಲ್ಲಿ ಈ ಕಾಮಗಾರಿಗೆ ಭೂಮಿಪೂಜೆ ಮಾಡಲಾಗುವುದು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ಯುವ ಪ್ರತಿಭೆಗಳಿಗೆ ತರಬೇತಿ ನೀಡಲು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹತ್ತು ಎಕರೆ ಜಾಗ ನೀಡುವಂತೆ ಕೋರಿದ್ದೇವೆ. ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮಕ್ಕೆ ಸರ್ಕಾರ ಅನುದಾನ ಘೋಷಿಸಿದೆ. ಆದರೆ, ಇನ್ನೂ ಬಿಡುಗಡೆಯಾಗಿಲ್ಲ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು